
ದಿನಕ್ಕೊಂದು ಕಥೆ
ಸುಖ ದುಃಖಗಳ ಚೀಲವೇ ಜೀವನ
ಎಷ್ಟು ಯೋಚಿಸಿದರೂ ವ್ಯಕ್ತಿ ಒಬ್ಬನಿಗೆ ಜೀವನದ ಅರ್ಥ ಆಗಲಿಲ್ಲ ಆತ ಒಬ್ಬ ಜ್ಞಾನಿಯ ಹತ್ತಿರ ಹೋಗಿ “ಸ್ವಾಮೀ, ಎಷ್ಟು ಯೋಚಿಸಿದರೂ ಜೀವನದ ಅರ್ಥ ತಿಳಿಯುತ್ತಿಲ್ಲ ಸಕಲವನ್ನು ಅರಿತಿರುವ ನೀವೇ ಇದಕ್ಕೆ ಉತ್ತರ ಕೊಡುವಿರೆಂದು ನಿಮ್ಮಲ್ಲಿ ಬಂದಿದ್ದೇನೆ” ಎಂದು ಕೇಳಿಕೊಂಡ.
ಆಗ ಆ ಜ್ಞಾನಿಯು ಆತನನ್ನು ಕರೆದುಕೊಂಡು ಪೋಸ್ಟ್ ಮ್ಯಾನ್ ಹತ್ತಿರ ಕರೆದೊಯ್ದು ಅಂದು ಹಂಚಬೇಕಾದ್ದ “ಲೆಟರ್ ಬ್ಯಾಗ್” ಕೊಟ್ಟು ಬ್ಯಾಗ್ ನಲ್ಲಿದ್ದ ಪತ್ರಗಳನ್ನು ವಿಳಾಸಗಳ ಪ್ರಕಾರ ಹಂಚಲು ಆದೇಶಿಸಿದರು. ಆಗ ಇವನು ಪ್ರಶ್ನಾರ್ಥಕವಾಗಿ ನೋಡಿದನು?
ಸರಿ, ಅವರು ಹೇಳಿರುವರಲ್ಲವೇ ಎಂದು ಆ ಪತ್ರಗಳ ಹಂಚಲು ಮುಂದೆ ಸಾಗಿದನು.
ಪೋಸ್ಟ್ ಮ್ಯಾನ್ ಮನೆ ಮನೆ ತಿರುಗುತ್ತಾ ಪತ್ರ ಹಂಚುತ್ತಿದ್ದಾಗ ಒಂದು ಮನೆಗೆ ಬಂದ ಪತ್ರದಲ್ಲಿ ಆ ಮನೆಯಲ್ಲಿನ ಯುವಕನೊಬ್ಬನಿಗೆ ಕೆಲಸ ಸಿಕ್ಕಿದೆ ಎಂದು ಬರೆದ ಪತ್ರವಿತ್ತು, ಅದನ್ನು ನೋಡಿ ಆ ಮನೆಯವರು ಖುಷಿಗೊಂಡರು.
ಇನ್ನೊಂದು ಮನೆಗೆ ಬಂದ ಪತ್ರದಲ್ಲಿ ತಮ್ಮ ಸಂಬಂಧಿಕರೊಬ್ಬರ ಸಾವಿನ ಸುದ್ದಿಯನ್ನು ನೋಡಿ ಆ ಮನೆಯವರು ಬೇಸರಗೊಂಡರು. ಮತ್ತೊಂದು ಮನೆಯ ಬಡ ಮುದುಕಿಯೊಬ್ಬಳಿಗೆ ಮನಿ ಆರ್ಡರ್ ಮೂಲಕ ಬಂದ ಪೆನ್ಶನ್ ಹಣ ನೀಡಿದಾಗ ಆ ಮುದುಕಿಯ ಮುಖದಲ್ಲಿ ಸಂತೋಷ ಕಂಡನು. ಇನ್ನೊಬ್ಬರಿಗೆ ಕೊಟ್ಟ ಪತ್ರದಲ್ಲಿ ಅವರ ಸಂಬಂಧಿಕರ ಮನೆ ಬೆಂಕಿ ದುರಂತದಲ್ಲಿ ಸುಟ್ಟು ಕರಕಲಾಗಿದೆ ಎಂಬ ವಿಷಯ ತಿಳಿದ ಆ ಮನೆಯವರು ಕೊರಗುವುದನ್ನು ಕಾಣುತ್ತಾನೆ.
ಜ್ಞಾನಿ ಮತ್ತು ಆ ವ್ಯಕ್ತಿ ಹಾಗೆಯೇ ತಿರುಗಾಡುತ್ತಾ ಸಂಜೆ ವಾಪಾಸು ಬಂದು ಮನೆಗೆ ಬಂದು ದಣಿವಾರಿಸಕೊಳ್ಳಲು ಕುಳಿತುಕೊಳ್ಳುತ್ತಾರೆ. ಆ ವ್ಯಕ್ತಿ ಏನೋ ಸ್ವಲ್ಪಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯವಾಯಿತು ಎಂಬ ಸಂತಸದಿಂದ ಜ್ಞಾನಿಯ ಪಾದಗಳಿಗೆ ನಮಸ್ಕರಿಸಿ ಹೊರಟು ಹೋಗುತ್ತಾನೆ.
ಏನು? ಕಥೆಯನ್ನು ಮಧ್ಯದಲ್ಲಿ ನಿಲ್ಲಿಸಿದೆನೆಂದುಕೊಂಡಿರಾ? ಇಲ್ಲ. ಕಥೆ ಇಲ್ಲಿಗೇ ಮುಗಿಯಿತು. ಆ ವ್ಯಕ್ತಿಗೆ ಏನು ಅರ್ಥವಾಗಿರಬಹುದು ಎಂದು ಯೋಚಿಸಿ ? ಜೀವನ ಎನ್ನುವುದು ಪೋಸ್ಟ್ ಮ್ಯಾನ್ ಹೆಗಲ ಮೇಲಿರುವ ಪತ್ರಗಳ ಚೀಲದಂತೆ. ಅದರಲ್ಲಿ ಸಂತೋಷ ಮತ್ತು ದುಃಖದ ಪತ್ರಗಳಿವೆ, ಮತ್ತು ಜೀವನವು ಸಂತೋಷ ಮತ್ತು ದುಃಖದ ಚೀಲವಾಗಿದೆ. ಎಲ್ಲವನ್ನೂ ಸಹಿಸಿಕೊಂಡು ಮುನ್ನಡೆಯುವುದೇ ಜೀವನ.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882.