ಕಥೆ

ಹಣೆಬರಹ ಬರೆದ ಬ್ರಹ್ಮನಿಂದಲೇ ಹಣೆಬರಹ ಬದಲಾಯಿಸಲು ಸಾಧ್ಯವಿಲ್ಲ.!

ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ

ಹಣೆಬರಹ ಬದಲಾಯಿಸಲು ಬರೆದ ಬ್ರಹ್ಮನಿಂದಲೇ ಸಾಧ್ಯವಿಲ್ಲ..!

ಪೂರ್ವ ಕಾಲದಲ್ಲಿ ಸುವರ್ಣಗಿರಿ ಎಂಬ ರಾಜ್ಯ. ಅಲ್ಲಿ ಚಂದ್ರಸೇನನೆಂಬ ರಾಜ ಆಳುತ್ತಿದ್ದ. ಆತನು ದಾನ, ಧರ್ಮ, ಪೂಜೆ ಪುನಸ್ಕಾರಗಳಿಗೆ ಪ್ರಖ್ಯಾತನಾಗಿದ್ದ. “ತನ್ನ ರಾಜ್ಯದಲ್ಲಿ ಬಡವರೇ ಇರಬಾರದು. ಎಲ್ಲರೂ ಸುಖ ಸೌಭಾಗ್ಯಗಳಿಂದ ಕೂಡಿರಬೇಕು” ಎಂಬ ಭಾವನೆ ಹೊಂದಿ ತನ್ನ ಪ್ರಜೆಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಕಾಣುತ್ತಿದ್ದ. ಆಗಾಗ ಸಂಜೆಯ ವೇಳೆ ಮಂತ್ರಿ ಸುಗುಣಾನಂದನೊಡನೆ ವಾಯು ವಿಹಾರಕ್ಕೆ ಹೋಗುತ್ತಿದ್ದ.

ಒಂದು ದಿನ ಹೀಗೆ ಹೋಗುತ್ತಿರುವಾಗ ಸಂಜೆ ಮುಗಿದು ಕತ್ತಲಾಗುತ್ತು. “ಮಂತ್ರಿಗಳೇ ಬೇಗ ರಾಜಧಾನಿ ಸೇರೋಣ. ಕುದುರೆಯನ್ನು ವೇಗವಾಗಿ ಓಡಿಸಿ” ಎಂದು ಸೂಚಿಸಿದ. ಕೊಂಚ ದೂರ ಹೋಗುವುದರಲ್ಲಿ ರಾಜ ಕುದುರೆಯನ್ನು ನಿಲ್ಲಿಸಿ “ಮಂತ್ರಿಗಳೇ ಕತ್ತಲಾಗುತ್ತಾ ಬಂದಿದ್ದರೂ ಕುಟೀರದ ಮುಂದೆ ತೋಟದ ಕೆಲಸ ಮಾಡುತ್ತಿರುವ ವಿಪ್ರ ಯಾರು? ತುಂಡುಬಟ್ಟೆ ಉಟ್ಟು ಚಳಿಯನ್ನು ಲೆಕ್ಕಿಸದ ಆ ಮಹಾ ಪುರುಷ ಯಾರು?” ಎಂದು ಕೇಳಿದ. ಆಗ ಮಂತ್ರಿಯು ಆತ ಶೇಷ ಶರ್ಮನೆಂಬ ಪ್ರಖಾಂಡ ಪಂಡಿತ. ಶ್ರಮಜೀವಿ ಎಂದ.

ನಮ್ಮ ರಾಜ್ಯದಲ್ಲಿ ಆತ ಏಕೆ ಇಷ್ಟು ಕಷ್ಟಪಡಬೇಕು? ಅರಮನೆಗೆ ಕರೆಸಿ ಬೇಕಾದ್ದನ್ನು ಕೊಡಿ ಎಂದ ರಾಜ. “ಕ್ಷಮಿಸಿ ಮಹಾರಾಜ ಆತ ಮಹಾತ್ಮ ಗೌರವಿ. ಯಾರಿಂದ ಏನೂ ಬೇಡುವುದಿಲ್ಲ. ಯಾರ ಸಹಾಯವನ್ನೂ ಬಯಸುವುದಿಲ್ಲ. ಕಾಯಕ ಮಾಡಿ ಹೆಂಡತಿ ಮಕ್ಕಳನ್ನು ಪೋಷಿಸುತ್ತಿದ್ದಾನೆ” ಎಂದು ಉತ್ತರಿಸಿದ ಮಂತ್ರಿ. ಸರಿ ನಡೆ, ಇದಕ್ಕೆ ನಾವೇ ಒಂದು ಉಪಾಯ ಮಾಡೋಣ ಎಂದು ಇಬ್ಬರೂ ಹೊರಟರು.

ಮಾರನೆಯ ದಿನ ಶೇಷ ಶರ್ಮನ ತೋಟದಲ್ಲಿ ಒಂದು ಚೀಲ ಸಿಕ್ಕಿತು. ಅದರ ತುಂಬಾ ಚಿನ್ನದ ನಾಣ್ಯಗಳಿದ್ದವು. ಕೂಡಲೆ ಆತ ಅದನ್ನು ಕೈಯಲ್ಲಿ ಹಿಡಿದು ರಾಜ ದರ್ಬಾರಿಗೆ ಆಗಮಿಸಿ, “ಮಹಾ ಪ್ರಭು ನನ್ನ ತೋಟದಲ್ಲಿ ಚಿನ್ನದ ನಾಣ್ಯಗಳಿರುವ ಈ ಚೀಲ ಸಿಕ್ಕಿದೆ, ಯಾರದೋ ಏನೋ? ವಿಚಾರಣೆ ನಡೆಸಿ ಅವರಿಗೆ ತಲುಪಿಸಿ” ಎಂದು ಹೇಳಿ ಹೊರಡಲನುವಾದ. ಆಗ ರಾಜನು “ಅದು ಯಾರದೇ ಆಗಲಿ, ನಿಮ್ಮ ತೋಟದಲ್ಲಿ ಸಿಕ್ಕಿದೆ. ನೀವೇ ಅನುಭವಿಸಿ” ಎಂದ. ಆಗ ಶೇಷ ಶರ್ಮ “ಕ್ಷಮಿಸಿ ಮಹಾಪ್ರಭು. ನಿತ್ಯ ನನ್ನ ತೋಟಕ್ಕೆ ಅನೇಕ ಹಕ್ಕಿಗಳು ಬರುತ್ತವೆ. ನವಿಲು, ಜಿಂಕೆಗಳು ಬರುತ್ತವೆ. ಅವು ನಮ್ಮದೆಂದರೆ ದ್ರೋಹವಾಗುವುದಿಲ್ಲವೆ? ಅನೇಕ ಮಂದಿ ದಾರಿಹೋಕರು ನಮ್ಮ ತೋಟದ ಹಣ್ಣು ಹಂಪಲು ತಿಂದು ಹೋಗುತ್ತಾರೆ. ಅವರು ನಮ್ಮವರಾಗುತ್ತಾರೊ? ಕ್ಷಮಿಸಿ ಆ ಹಣ ಯಾರದೋ ಅವರಿಗೆ ಕೊಡಿ” ಎಂದ.

ನಮ್ಮ ಹಣೆಯಲ್ಲಿ ಬರೆದಿರುವಷ್ಟು ನಮಗೆ ಸಿಕ್ಕಿದೆ. ನಾನು ಅದರಿಂದ ಸುಖವಾಗಿದ್ದೇನೆ ಎಂದು ವಂದಿಸಿ ಕುಟೀರಕ್ಕೆ ತೆರಳಿದ. ನಂತರ ಮಂತ್ರಿ “ಪ್ರಭು’ ಹಣೆಬರಹ ಬದಲಾಯಿಸಲು ಬರೆದ ಆ ಬ್ರಹ್ಮನಿಂದಲೇ ಸಾಧ್ಯವಿಲ್ಲ” ಎಂದ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button