ದಿನಕ್ಕೊಂದು ಕಥೆ
ಶಿವನಿಂದ ಆತ್ಮಲಿಂಗ ಪಡೆದ ರಾವಣ
ಹಿಂದೂ ದೇವಾನುದೇವತೆಗಳು ಆತ್ಮ ಲಿಂಗವನ್ನುನು ಪೂಜಿಸುವ ಮೂಲಕ ಅಮರತ್ವವನ್ನು ಮತ್ತು ಅದೃಶ್ಯ ಶಕ್ತಿಯನ್ನು ಪಡೆಯುತ್ತಾರೆ. ಲಂಕೆಯ ರಾಜ ರಾವಣನೂ ಆತ್ಮಲಿಂಗವನ್ನು ಸಂಪಾದಿಸುವ ಮೂಲಕ ಅಮರತ್ವ ಪಡೆಯಲು ಬಯಸುತ್ತಾನೆ. ಆತ್ಮಲಿಂಗ ಶಿವನಿಗೆ ಸೇರಿದ್ದರಿಂದ ರಾವಣ ಶಿವನನ್ನು ಅತ್ಯಂತ ಭಕ್ತಿಯಿಂದ ಪೂಜಿಸಿದ. ಅವನ ಪ್ರಾರ್ಥನೆಯಿಂದ ಸಂತೃಪ್ತರಾದ ಶಿವ ಅವನ ಮುಂದೆ ಪ್ರತ್ಯಕ್ಷನಾಗಿ ಯಾವ ವರ ಬೇಕೆಂದು ಕೇಳಿದ. ರಾವಣ ಆತ್ಮಲಿಂಗ ಬೇಕೆಂದು ವರ ಬೇಡಿದ. ಆದರೆ ಲಂಕೆಯನ್ನು ತಲುಪುವುದಕ್ಕೆ ಮೊದಲು ಆತ್ಮಲಿಂಗವನ್ನು ನೆಲದ ಮೇಲಿರಿಸಬಾರದು ಎಂಬ ಷರತ್ತಿನೊಂದಿಗೆ ಶಿವ ಆತ್ಮಲಿಂಗವನ್ನು ರಾವಣನಿಗೆ ವರವಾಗಿ ನೀಡುತ್ತಾನೆ.
ನಾರದ ಮಹರ್ಷಿಗಳಿಗೆ ಈ ವಿಷಯ ತಿಳಿದು ಆತ್ಮಲಿಂಗದ ನೆರವಿನಿಂದ ಅಮರತ್ವ ಪಡೆಯುವ ರಾವಣ ಭೂಮಿಯಲ್ಲಿ ವಿನಾಶ ಉಂಟು ಮಾಡುತ್ತಾನೆಂದು ಭಯಪಡುತ್ತಾರೆ. ಅದನ್ನು ತಪ್ಪಿಸುವುದಕ್ಕಾಗಿ ಗಣೇಶನಲ್ಲಿ ಸಹಾಯ ಕೇಳುತ್ತಾರೆ. ರಾವಣ ಅತ್ಯಂತ ದೈವಭಕ್ತ. ಒಂದು ದಿನವೂ ಸಂಧ್ಯಾವಂದನೆಯನ್ನು ಮಾಡದೇ ಇದ್ದವನಲ್ಲ. ಅದು ಗಣೇಶನಿಗೆ ತಿಳಿದಿತ್ತು. ರಾವಣ ಗೋಕರ್ಣ ಸಮೀಪಿಸುತ್ತಿದ್ದಂತೆ ವಿಷ್ಣು ದೇವರು ಸೂರ್ಯನಿಗೆ ಮರೆಯಾಗಿ ಸಂಜೆಯನ್ನು ಸೃಷ್ಟಿಸುತ್ತಾರೆ. ರಾವಣ ಸಂಜೆಯಾಯಿತು ಎಂದು ತಿಳಿದು ಸಂಧ್ಯಾವಂದನೆಗೆ ಮುಂದಾಗುತ್ತಾನೆ. ಆದರೆ ತಪಸ್ಸಿನ ಫಲದಿಂದ ಶಿವನಿಂದ ಪಡೆದ ಆತ್ಮಲಿಂಗವನ್ನು ನೆಲಕ್ಕಿಡುವಂತಿಲ್ಲ. ಏನು ಮಾಡುವುದು ಎಂದು ಹಿಂದೆ ಮುಂದೆ ನೋಡಿದಾಗ ಬಾಲ ವಟು ಕಾಣಿಸಿಕೊಳ್ಳುತ್ತಾನೆ. ಅವನ ಕೈಗೆ ಆತ್ಮಲಿಂಗವನ್ನು ನೀಡಿ, ನೆಲಕ್ಕಿಡದಂತೆ ಹೇಳಿ ಸಮುದ್ರತಟಕ್ಕೆ ತರ್ಪಣ ನೀಡಲು ಹೊರಡುತ್ತಾನೆ.
ಗಣೇಶ ಒಪ್ಪಂದ ಮಾಡಿಕೊಂಡು ಮೂರು ಸಲ ರಾವಣನನ್ನು ಕರೆಯುವುದಾಗಿ ಬರದಿದ್ದರೆ ನೆಲದ ಮೇಲೆ ಇರಿಸುವುದಾಗಿ ಹೇಳುತ್ತಾನೆ. ರಾವಣ ಸಂಧ್ಯಾವಂದನೆಯಲ್ಲಿ ತೊಡಗಿದ್ದಾಗಲೇ ಗಣೇಶ, ರಾವಣನನ್ನು ಮೂರು ಬಾರಿ ಕೂಗಿ ಆತ್ಮಲಿಂಗವನ್ನು ನೆಲದ ಮೇಲಿರಿಸುತ್ತಾನೆ. ರಾವಣ ಹಿಂತಿರುಗಿ ಬರುವಾಗ ಆತ್ಮಲಿಂಗ ನೆಲದ ಮೇಲೆ ಇರಿಸಿದ್ದನ್ನು ನೋಡಿ ಗಾಬರಿಯಾಗುತ್ತಾನೆ. ತಾನು ಮೋಸಹೋದೆನೆಂದು ತಿಳಿದ ರಾವಣ ಲಿಂಗವನ್ನು ತೆಗೆಯಲು ಯತ್ನಿಸಿದ. ಎಷ್ಟು ಪ್ರಯತ್ನಿಸಿದರೂ ಆತ್ಮಲಿಂಗವನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.