ಕಥೆ

ತಂಪು ಕ್ರೌರ್ಯ ಎಂದರೇನು.? ಗೊತ್ತೆ.? ಈ ಕಥೆ ಓದಿ

ಆಪತ್ತಿಗಾದವನೇ ನೆಂಟ ಅದ್ಭುತ ನೀತಿ ಕಥೆ

ದಿನಕ್ಕೊಂದು ಕಥೆ

ಆಪತ್ತಿಗಾದವನೇ ನೆಂಟ

ಹಸಿರು, ಜಲಸಂಪತ್ತಿನಿಂದ ತುಂಬಿ ತುಳುಕುತ್ತಿದ್ದ ಸುಂದರ ಕಾಡಿನಲ್ಲಿದ್ದ ಫಲ-ಪುಷ್ಪಭರಿತ ಮರವೊಂದು ನೂರಾರು ಪಕ್ಷಿಗಳ ಹೆಮ್ಮೆಯ ಆಶ್ರಯವಾಗಿತ್ತು. ಅಲ್ಲಿ ನೆಲೆಯೂರಿದ್ದ ವಿವಿಧ ಪಕ್ಷಿಗಳು ಯಾವುದಕ್ಕೂ ಕೊರತೆಯಿರದ, ಸ್ವರ್ಗಕ್ಕೇ ಕಿಚ್ಚು ಹಚ್ಚುವಂಥ ಜೀವನವನ್ನು ಸಾಗಿಸುತ್ತಿದ್ದವು. ಆದರೆ, ಕಾಲ ಒಂದೇ ತೆರನಾಗಿರುವುದಿಲ್ಲವಲ್ಲ? ಭೀಕರ ಬರಗಾಲ ಶುರುವಾಗಿ, ಪ್ರಕೃತಿಯನ್ನು ಶುಷ್ಕತೆ ಆವರಿಸತೊಡಗಿತು. ಸಹಜವಾಗಿಯೇ ಈ ಮರವೂ ಅದಕ್ಕೆ ಬಲಿಯಾಗಿ, ಆಶ್ರಯ ಪಡೆದಿದ್ದ ಪಕ್ಷಿಗಳು ಒಂದೊಂದಾಗಿ ಅದನ್ನು ತೊರೆದು ಬೇರೆಡೆಗೆ ಹೊರಟವು. ಆದರೆ ಒಂದು ಗಿಳಿಮಾತ್ರ ದುಃಖಿಸುತ್ತ ಅಲ್ಲೇ ವಾಸಿಸತೊಡಗಿತು.

ಮಿಕ್ಕೆಲ್ಲ ಪಕ್ಷಿಗಳು ಭಯ ಹುಟ್ಟಿಸಿ, ಪ್ರಲೋಭನೆ ತೋರಿದರೂ ಗಿಳಿ ತನ್ನ ನಿರ್ಧಾರದಿಂದಲೂ, ಸ್ಥಾನದಿಂದಲೂ ಕದಲಲಿಲ್ಲ. “ತನಗೆ ಸಮೃದ್ಧಿಯಿದ್ದಾಗ ಆಶ್ರಯ, ಹಣ್ಣು-ಹಂಪಲು ನೀಡಿ ನಮಗೆಲ್ಲ ಸುಖಜೀವನವನ್ನೇ ಕಲ್ಪಿಸಿದ ಈ ಮರವನ್ನು ಅದರ ಸಂಕಷ್ಟಕಾಲದಲ್ಲಿ ನಾವು ಹೀಗೆ ಬಿಟ್ಟುಹೋದಲ್ಲಿ ಭಗವಂತ ಮೆಚ್ಚುವನೇ?” ಎಂಬುದು ಆ ಗಿಳಿಯ ಏಕೈಕ ಕೊರಗಾಗಿತ್ತು.

ಮರದ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗತೊಡಗಿ ಕಾಂತಿಯನ್ನೂ ಸೌಂದರ್ಯವನ್ನೂ ಕಳೆದುಕೊಳ್ಳಲಾರಂಭಿಸಿತು. ಮೊದಲು ಕಾಯಿಗಳು, ತರುವಾಯ ಎಲೆಗಳು ಉದುರಲಾರಂಭಿಸಿ ಕೊನೆಗೆ ಇಡೀ ಮರ ಬೋಳಾಗಿ ನಿಂತಿತು.

ಆದರೆ ಆ ಗಿಳಿ ಆಹಾರವನ್ನರಸಿ ಹೊರಗೆ ಹೋದಾಗಲೆಲ್ಲ, ಬರುವಾಗ ಕೊಕ್ಕಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀರನ್ನು ತಂದು ಮರದ ಬೇರಿಗೆ ಸುರಿಯುತ್ತಿತ್ತು, ಜತೆಗೆ ಮರವನ್ನು ಉಳಿಸೆಂದು ಭಗವಂತನಲ್ಲಿ ಪ್ರಾರ್ಥಿಸುತ್ತಿತ್ತು. ಅಂತೂ ಹನಿನೀರಿಗಾಗಿ ಹಾತೊರೆಯುತ್ತಿದ್ದ ಮರ, ಗಿಳಿಯ ಉಪಕಾರದಿಂದ ಕೊಂಚಮಟ್ಟಿಗಾದರೂ ಜೀವ ಹಿಡಿದುಕೊಂಡಿತ್ತು. ಒಂದು ದಿನ, ಅದೆಲ್ಲಿತ್ತೋ ಮಳೆ ಭೋರ್ಗರೆಯತೊಡಗಿ ಬಹುದಿನಗಳವರೆಗೆ ಮುಂದುವರಿಯಿತು. ಪರಿಣಾಮ, ಮರ ಮತ್ತೆ ಚಿಗುರೊಡೆದು, ಕೆಲ ದಿನಗಳಲ್ಲೇ ಎಲೆ, ಹೂವುಗಳಿಂದ ಕಂಗೊಳಿಸತೊಡಗಿತು. ಕಾಂತಿಯಿಂದ ನಳನಳಿಸತೊಡಗಿತು. ಇದನ್ನು ಕಂಡ ಗಿಳಿಗೆ ಇನ್ನಿಲ್ಲದ ಸಂತೋಷ; ತನಗೆ ಆಶ್ರಯ ನೀಡಿದ್ದ ಮರದ ಅಸ್ತಿತ್ವಕ್ಕೆ ಸಂಚಕಾರ ಒದಗುವುದು ತಪ್ಪಿತಲ್ಲ ಎಂಬುದು ಅದರ ಆನಂದಕ್ಕೆ ಕಾರಣ.

ಇಲ್ಲಿ ತಂಪು ಕ್ರೌರ್ಯ ಎಸಗಿದವರಾರು.? ಕಥೆ ಓದಿದ ಮೇಲೆ ಅರ್ಥವಾಗಿರಬೇಕು ಅಲ್ಲವೇ..?

ದೊಂದು ಕತೆಯೇ ಇರಬಹುದು; ಆದರೆ ಇಲ್ಲೊಂದು ಭಾವನಾತ್ಮಕ ತಂತುವೂ ಇದೆ. ನಮಗೆ ಸಹಕರಿಸಿದವರ ಏಳು-ಬೀಳುಗಳಲ್ಲಿ ಸಮನಾಗಿ ಜತೆಯಾಗಿರುವುದೇ ನಿಜವಾದ ಮಾನವೀಯತೆ. ಅದನ್ನು ಬಿಟ್ಟು, ಸಹವರ್ತಿಗಳು ಸುಖದಲ್ಲಿದ್ದಾಗ ಅವರನ್ನು ಆಶ್ರಯಿಸಿ, ಕಾರಣಾಂತರಗಳಿಂದ ಅವರು ಸಂಕಷ್ಟಕ್ಕೆ ಸಿಲುಕಿದಾಗ ದೂರವಾಗುವುದು ‘ತಣ್ಣನೆಯ ಕ್ರೌರ್ಯ” ಎನಿಸಿಕೊಳ್ಳುತ್ತದೆ. ಅದು ಸಜ್ಜನರ ಲಕ್ಷಣವಲ್ಲ ಎಂಬುದನ್ನು ಮರೆಯದಿರೋಣ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button