ಬಾಲಕಿ ಮುಗ್ಧ ಭಕ್ತಿಗೆ ಮೆಚ್ಚಿ ಬಂತ್ತೊಂದು ಪಾರ್ಸಲ್ಲು..?
ಹನುಮಪ್ಪನೇ ಕಳುಹಿಸಿದ ಪಾರ್ಸಲ್ಲು..!
ಏನಿದು ಪಾರ್ಸಲ್? ಹನುಮಪ್ಪ ಏಕೆ ಪಾರ್ಸಲ್ ಕಳುಹಿಸಿದರು ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಇಲ್ಲಿರುವ ಕುತೂಹಲಕಾರಿ ಕಾಲ್ಪನಿಕ ಕತೆ ಓದಬೇಕು! ಒಂದು ಬಡ ಸಂಸಾರ. ಅಪ್ಪ, ಅಮ್ಮ ಮತ್ತು ಆರು ಜನ ಹೆಣ್ಣುಮಕ್ಕಳು. ಕೂಲಿ ಕೆಲಸ. ಸಣ್ಣ ಗುಡಿಸಿಲಿನಲ್ಲಿ ವಾಸ. ಕೂಲಿಯಿಲ್ಲದ ದಿನ ಎಲ್ಲರೂ ಉಪವಾಸ. ಐದು ವರ್ಷದ ಅಮ್ಮಿ ಕೊನೆಯ ಹೆಣ್ಣುಮಗಳು ತುಂಬಾ ಚೂಟಿ. ಒಂದು ರಾತ್ರಿ ಅಪ್ಪ, ಅಮ್ಮನ ಮಾತು ಕೇಳಿಸಿತು.
ಅಮ್ಮ ‘ನಾಳೆಯೋ, ನಾಡಿದ್ದೋ ನನಗೆ ಹೆರಿಗೆಯಾಗುತ್ತೆ. ಇದಾದರೂ ಗಂಡು ಮಗುವಾದರೆ, ಆಪರೇಶನ್ ಮಾಡಿಸಿಕೊಂಡು ಬಿಡಬೇಕು. ಹೆಣ್ಣಾದರೆ ಬಟ್ಟೆ ಬರೆ ಯೋಚನೆಯಿಲ್ಲ. ಹಳೇ ಬಟ್ಟೆಗಳಿವೆ. ಗಂಡಾದರೆ ನಮ್ಹತ್ರ ಗಂಡು ಮಕ್ಕಳ ಬಟ್ಟೆಗಳಿಲ್ಲ. ಗಂಡು ಮಗೂಗೆ ಇನ್ನೂ ಏನೇನು ಬೇಕೋ? ನಮ್ಹತ್ರ ಏನೂ ಇಲ್ಲ’ ಎಂದಾಗ, ಅಪ್ಪ ‘ಚಿಂತೆ ಮಾಡ್ಬೇಡ. ಗುಡ್ಡದ ಹನುಮಂತರಾಯನ್ನ ಕೇಳಿಕೊಳ್ಳೋಣ’ ಎಂದರು.
ಇದೆಲ್ಲವನ್ನು ಕೇಳಿಸಿಕೊಂಡ ಅಮ್ಮಿ ಮುಂಜಾನೆಯೇ ಎದ್ದಳು. ಊರ ಹತ್ತಿರವೇ ಒಂದು ಗುಡ್ಡ. ಅದರ ಮೇಲೊಂದು ಕಲ್ಲಿನ ಮಂಟಪ. ಅದರೊಳಗೆ ಹನುಮಂತನ ಚಿತ್ರ ಬರೆದಿದ್ದ ಒಂದು ಕಲ್ಲು ಚಪ್ಪಡಿ. ಜನ ಅದನ್ನೇ ಶ್ರದ್ಧೆಯಿಂದ ಪೂಜಿಸುತ್ತಿದ್ದರು. ಅಮ್ಮಿ ಬಡಬಡನೆ ಗುಡ್ಡವೇರಿದಳು.
ಅಷ್ಟು ಹೊತ್ತಿನಲ್ಲಿ ಅಲ್ಲಿ ಯಾರೂ ಕಾಣಲಿಲ್ಲ. ಆಕೆ ದೇವರ ಮುಂದೆ ಹೋಗಿ ಕೈಮುಗಿದುಕೊಂಡು ಕಣ್ಣು ಮುಚ್ಚಿಕೊಂಡು ‘ಹನುಮಂತಪ್ಪ! ನಾಳೆ ನಾಡಿದ್ದರಲ್ಲಿ ನಮ್ಮನೇಗೆ ಒಂದು ಗಂಡುಮಗು ಬರುತ್ತಂತೆ.
ಅದಕ್ಕೆ ಒಳ್ಳೆಯ ಬಟ್ಟೆಗಳು ಮತ್ತು ಇನ್ನೂ ಏನೇನೋ ಬೇಕಂತೆ. ಅವ್ಯಾಾವೂ ನಮ್ಮನೇಲಿಲ್ಲವಂತೆ. ನಿನ್ನನ್ನು ಕೇಳಿಕೋಬೇಕು ಅಂತ ನಮ್ಮಪ್ಪ ಹೇಳುತ್ತಿದ್ದರು. ನಮ್ಮ ಗುಡಿಸಿಲು ಗುಡ್ಡದ ಪಕ್ಕದಲ್ಲಿದೆ.
ನಮ್ಮಪ್ಪನ ಹೆಸರು ಕೂಲಿಯಪ್ಪ. ದಯವಿಟ್ಟು ಬೇಗ ಕಳ್ಸಿಕೊಡು’ ಎಂದು ಪ್ರಾರ್ಥಿಸಿ ಕೆಳಗಿಳಿದು ಬಂದಳು. ಅಮ್ಮಿ ದಿನವೆಲ್ಲ ಗುಡಿಸಿಲಿನಲ್ಲೇ ಕುಳಿತಿದ್ದಳು. ರಸ್ತೆಯ ಕಡೆಯೇ ಗಮನ. ಮಧ್ಯಾಹ್ನವಾಯಿತು. ಸಾಯಂಕಾಲವೂ ಆಯಿತು. ಏನೂ ಬರಲಿಲ್ಲ.
ಅಮ್ಮಿಗೆ ನಿರಾಸೆ. ‘ನಮ್ಮ ಗುಡಿಸಿಲು ಗುಡ್ಡದಪ್ಪನಿಗೆ ಗೊತ್ತಾಗಲಿಲ್ಲವೇನೋ’ ಎಂದು ಚಿಂತಿಸುತ್ತಿದ್ದಳು. ಅಷ್ಟರಲ್ಲಿ ಯಾರೋ ಬಂದು ಕೂಲಿಯಪ್ಪನನ್ನು ಕರೆದು ‘ನಿಮಗೆ ಯಾರೋ ಹನುಮಂತಪ್ಪ ಅನ್ನೋರು ಪಾರ್ಸಲ್ ಕಳಿಸಿದ್ದಾರೆ ತೆಗೊಳ್ಳಿ’ ಎಂದರು.
ಕೂಲಿಯಪ್ಪ ‘ಯಾರೋ ಪಾರ್ಸಲ್ ಕಳಿಸುವಷ್ಟು ದೊಡ್ಡೋರು ನಾವಲ್ಲ.
ಯಾವ ಹನುಮಂತರಾಯರೂ ನಮಗೆ ಗೊತ್ತಿಲ್ಲ. ನಮಗಿದು ಬೇಡ’ ಎಂದಾಗ, ಅಮ್ಮಿ ಓಡಿ ಬಂದು ನೀವದನ್ನು ಈಸ್ಕೊಳ್ಳಿ ಎಂದು ದುಂಬಾಲು ಬಿದ್ದಳು. ಕೂಲಿಯಪ್ಪ ಅಮ್ಮಿಯತ್ತ ವಿಚಿತ್ರವಾಗಿ ನೋಡಿ ಪಾರ್ಸಲ್ ಪಡೆದುಕೊಂಡ.
ಒಡೆದು ನೋಡಿದ. ಒಳಗೆ ಗಂಡು ಮಗುವಿನ ಬಟ್ಟೆಗಳು, ಟೋಪಿ, ಕಾಲ್ಚೀಲಗಳು, ಮಕ್ಕಳ ಪೌಡರ್ ಮುಂತಾದವೆಲ್ಲ ಇದ್ದವು. ಮನೆಯವರೆಲ್ಲರೂ ಇದನ್ನು ಕಳಿಸಿದವರು ಯಾರಂತ ಗೊತ್ತಾಗಲಿಲ್ಲವೆಂದು ಮಾತನಾಡಿ ಕೊಳ್ಳುತ್ತಿದ್ದಾಗ, ಅಮ್ಮಿ ಮಾತನಾಡಲಿಲ್ಲ. ಏಕೆಂದರೆ ಪಾರ್ಸಲ್ ಕಳಿಸಿದವರು ಯಾರೆಂದು ಅವಳಿಗೆ ಮಾತ್ರ ಗೊತ್ತಿತ್ತು. ಆದರೆ ನಿಜವಾಗಿ ಕಳಿಸಿದವರು ಅಮ್ಮಿ ಅಂದು ಕೊಂಡವರಲ್ಲ!
ಬೆಳಗ್ಗೆ ಅಮ್ಮಿ ಹನುಮಂತನ ಮುಂದೆ ಕಣ್ಮುಚ್ಚಿ ಬೇಡಿಕೊಳ್ಳುತ್ತಿದ್ದಾಗ ಅಲ್ಲಿಗೆ ಶ್ರೀಮಂತರೊಬ್ಬರು ಬೆಳಗಿನ ವಾಯು ವಿಹಾರಕ್ಕೆಂದು ಬಂದಿದ್ದರು.
ಎಲ್ಲವನ್ನೂ ಕೇಳಿಸಿಕೊಂಡಿದ್ದರು. ಅಮ್ಮಿ ಅವರನ್ನು ಗಮನಿಸಿರಲಿಲ್ಲ. ಅವರು ಆಕೆಯ ಮುಗ್ಧ ನಂಬಿಕೆಯನ್ನು ಕಂಡು ಮಗುವಿನ ನಂಬಿಕೆ ಸುಳ್ಳಾಗಬಾರದೆಂದು ಪಾರ್ಸಲನ್ನು ಹನುಮಂತರಾಯನ ಹೆಸರಿನಲ್ಲಿ ಕಳಿಸಿದ್ದರು!
ಅವರಿಗೆ ಹಣದ ಶ್ರೀಮಂತಿಕೆಯೊಂದಿಗೆ ಹೃದಯ ಶ್ರೀಮಂತಿಕೆಯೂ ಇತ್ತು! ಬದುಕಿನಲ್ಲಿ ನಮಗೆ ಮುಗ್ಧ ನಂಬಿಕೆ ಇರಬೇಕು! ಅಥವಾ ಹೃದಯ ಶ್ರೀಮಂತಿಕೆ ಇರಬೇಕು! ದೇವರು ಇವೆರಡನ್ನೂ ಒಂದು ಕಡೆ ಸೇರಿಸಬೇಕು! ಆಗ ಪವಾಡ ನಡೆಯಲೇಬೇಕು!
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882