ಕಥೆ

ಚಿಂತೆಗಳೆಂಬ ಗಾಜಿನ ಲೋಟ ಓದಿ ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ ಓದಿ

ದಿನಕ್ಕೊಂದು ಕಥೆ

ಚಿಂತೆಗಳೆಂಬ ಗಾಜಿನ ಲೋಟ

ನಮ್ಮ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು, ತಪ್ಪುಗಳು, ಅಪರಾಧಿಭಾವ, ಬರುವುದು ತಪ್ಪಲ್ಲ. ಆದರೆ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಅದರ ಕುರಿತಾಗಿಯೇ ಯೋಚಿಸುತ್ತಿದ್ದರೆ, ಮನಸ್ಸು ದುರ್ಬಲಗೊಳ್ಳುತ್ತದೆ. ಸಮಸ್ಯೆಗಳ ಕುರಿತು ಹೆಚ್ಚಾಗಿ ಚಿಂತಿಸದೆ, ಮಲಗುವ ಮುನ್ನ ಎಲ್ಲಾ ಚಿಂತೆಗಳನ್ನು ಹೊರಹಾಕಿ ಮಲಗಿದರೆ, ಹೊಸ ದಿನವನ್ನು ಹೊಸದಾಗಿ ಆರಂಭಿಸಬಹುದು. ಆಗ ದೇಹ ಮನಸ್ಸು ಎರಡೂ ಸ್ವಸ್ಥವಾಗಿರುತ್ತದೆ.

ಒಂದು ಊರಿನಲ್ಲಿ ಒಬ್ಬ ಯುವಕನಿದ್ದ, ಆತ ಸಣ್ಣ ಪುಟ್ಟ ವಿಷಯಗಳನ್ನು ಯೋಚಿಸುತ್ತಾ ಮತ್ತಷ್ಟು ಚಿಂತೆಗಳನ್ನು ತುಂಬಿಸಿಕೊಂಡು ಹೊರೆ ತಾಳಲಾರದೆ ದಿನವಿಡೀ ಒದ್ದಾಡುತ್ತಿದ್ದ. ಕೆಲವೊಮ್ಮೆ ತನ್ನನ್ನೇ ತಾನೇ ಬೈದುಕೊಳ್ಳುತ್ತಿದ್ದ. ಯಾಕೆ ಹುಟ್ಟಿಸಿದೆ ? ಯಾಕೆ ಇಂಥ ಕಷ್ಟ ಕೊಟ್ಟೆ ಎಂದು ದೇವರನ್ನು ಕೇಳುತ್ತಿದ್ದ. ತನ್ನ ಜಾತಕ, ರಾಶಿ, ನಕ್ಷತ್ರ, ಹುಟ್ಟಿದ ಘಳಿಗೆ, ಯಾವುದು ಸರಿ ಇಲ್ಲ, ಅದೃಷ್ಟವು ನನಗೆ ಸಮಯದಲ್ಲಿ ಕೈಕೊಡುತ್ತದೆ. ಹೀಗೆ ಹೇಳುತ್ತಲೇ ಮತ್ತೆ ಇದನ್ನೇ ಮನಸ್ಸಿ ನಲ್ಲಿ ಯೋಚಿಸುತ್ತಿದ್ದ. ಕೆಲವೊಮ್ಮೆ ಆಡಿದ ವ್ಯಂಗ್ಯ ಮಾತು, ಮಾಡಿದ ಅವಮಾನ ಇವುಗಳ ಸುತ್ತಲೇ ಯೋಚನೆಯನ್ನು ಹರಿಬಿಡುತ್ತಾ ಅತಿಯಾಗಿ ಅವರ ಮೇಲೆ ದ್ವೇಷ ಬೆಳೆಸಿ ಸೇಡು ತೀರಿಸಿಕೊಳ್ಳುವುದು ಹೇಗೆಂದು ಮತ್ತೆ ಅದೇ ವಿಚಾರಗಳಿಗೆ ಹೊಸರೂಪ ಕೊಟ್ಟು ಮತ್ತಷ್ಟು ಹೆಚ್ಚು ಮಾಡಿಕೊಳ್ಳುತ್ತಿದ್ದ. ಹೀಗಾಗಿ ಅವನ ಹತ್ತಿರ ಉತ್ತಮವಾದ ಗೆಳೆಯರು ಇರಲಿಲ್ಲ. ಅವನಿಗೆ ಅದರಲ್ಲಿ ಆಸಕ್ತಿಯು ಇರಲಿಲ್ಲ. ಒಟ್ಟಾರೆ ಆ ಯುವಕ ಊಟ, ತಿಂಡಿ, ನಿದ್ದೆಯ ಸಮಯದಲ್ಲೂ ತನ್ನ ಸಮಸ್ಯೆಗಳನ್ನು ಮತ್ತಷ್ಟು ಹೆಣೆಯುತ್ತಾ, ಚಿಂತೆಯೆಂಬ ಬಲೆಯನ್ನು ತಾನೇ ನೇಯ್ದುಕೊಂಡು ಅದರಲ್ಲೆ ಒದ್ದಾಡುತ್ತಿದ್ದ.

ಇವನ ಈ ದುಸ್ಥಿತಿಯನ್ನು ಕಂಡ ಒಬ್ಬನೇ ಗೆಳೆಯ, ಬೇಕಾದಷ್ಟು ಸಲ ಬುದ್ಧಿವಾದ ಹೇಳಿದ. ಆದರೂ ಇದರಿಂದ ಅವನು ಹೊರಬಂದಿರಲಿಲ್ಲ. ಇವನು ಇದೇ ಸ್ಥಿತಿಯಲ್ಲಿ ಇದ್ದರೆ ಹುಚ್ಚನಾಗಿ ಬಿಡುತ್ತಾನೆ ಎಂದು ಯೋಚಿಸಿ, ಸ್ನೇಹಿತನಿಗೆ “ಇಲ್ಲೇ ಪಕ್ಕದ ಗ್ರಾಮದಲ್ಲಿ ಒಬ್ಬ ಝೆನ್ ಗುರು ಇದ್ದಾರೆ ನೀನು ಅವರ ಬಳಿ ಹೋಗಿ ನಿನ್ನ ಎಲ್ಲಾ ಸಮಸ್ಯೆಗಳನ್ನು ಹೇಳಿಕೊ, ಅವರು ಖಂಡಿತ ಏನಾದರೂ ಪರಿಹಾರ ಹೇಳುತ್ತಾರೆ” ಹೇಳಿದ. ಆ ಯುವಕ ಪಕ್ಕದ ಗ್ರಾಮಕ್ಕೆ ಬಂದು ಹಳ್ಳಿಯಲ್ಲಿದ್ದ ಗುರುಗಳ ಮನೆಯನ್ನು ಹುಡುಕಿ ಕೊಂಡು ಅಲ್ಲಿಗೆ ಬಂದನು. ಗುರುಗಳಿಗೆ ನಮಸ್ಕರಿಸಿ, ನಾನು ಚಿಂತೆಗಳಿಂದ ಬಳಲಿದ್ದೇನೆ, ಕೂತರೂ, ನಿಂತರೂ, ಮಲಗಿದರೂ ಎಲ್ಲೇ ಹೋದರು, ಯಾರೊಡನೆ ಮಾತಾಡಿದರು, ಹೇಗೆ ಇದ್ದರೂ ನನಗೆ ಏನೇನು ಯೊಚನೆಗಳು ಬಂದು ಮತ್ತು ಅವು ಎಲ್ಲೂ ಹೋಗದೆ ಅಲ್ಲೇ ಉಳಿದು ಅವುಗಳಿಂದ ನನಗೆ ಮುಕ್ತಿಯೇ ಸಿಗುವುದಿಲ್ಲ. ಮತ್ತಷ್ಟು ಹೊಸ ಹೊಸ ತೊಂದರೆಗಳಲ್ಲಿ ಸಿಲುಕಿ ಚಿಂತೆಯ ಹೊರೆಯನ್ನೇ ನಾನು ಹೊತ್ತು ಕೊಂಡಿದ್ದೇನೆ ಇದರಿಂದ ನನ್ನ ತಲೆ ಭಾರವಾಗಿದೆ ತಲೆ ಸಿಡಿಯುತ್ತಿದೆ ಇದರಿಂದ ಹೇಗೆ ಹೊರಬರಲಿ ಗುರುಗಳೇ? ದಯವಿಟ್ಟು ಮಾರ್ಗ ತೋರಿ ಎಂದು ಕಾಲಿಗೆ ನಮಸ್ಕಾರ ಮಾಡಿದ.

ಗುರುಗಳು ಅವನ ಸಮಸ್ಯೆ ಕೇಳಿ, ಏನು ಮಾತನಾಡದೆ ಹಾಗೆ ಹೋದರು. ಇವನಿಗೆ ಅವರ ರೀತಿ ವಿಚಿತ್ರ ಅನಿಸಿದರು ಅಲ್ಲೇ ಕುಳಿತಿದ್ದ. ಸ್ವಲ್ಪ ಹೊತ್ತಿನ ನಂತರ ಗುರುಗಳು ಒಂದು ಗಾಜಿನ ಲೋಟದಲ್ಲಿ ಅರ್ಧದಷ್ಟು ನೀರು ತುಂಬಿ ಅವನ ಮುಂದೆ ನಿಂತರು. ಯುವಕನು ಏನಿರಬಹುದೆಂದು ಆಶ್ಚರ್ಯದಿಂದ ಎದ್ದು ನಿಂತನು. ಕೈ ಉದ್ದ ಮಾಡಿ ಗಾಜಿನ ಲೋಟವನ್ನು ಯುವಕನ ಮುಂದೆ ಹಿಡಿದು, ಈ ಗಾಜಿನ ಲೋಟ ಎಷ್ಟು ಭಾರವಿರಬಹುದು ಎಂದು ಕೇಳಿದರು. ಸರಿಯಾಗಿ ಗೊತ್ತಿಲ್ಲ ಆದರೆ ಹೆಚ್ಚೇನು ಭಾರ ಇರುವುದಿಲ್ಲ ಎಂದ. ಗುರುಗಳು,ಇದನ್ನು ಹೀಗೆಯೇ ಒಂದು ನಿಮಿಷ ಹಿಡಿದು ನಿಂತರೆ ಏನಾಗುತ್ತದೆ ಎಂದು ಕೇಳಿದರು. ಆ ಯುವಕ ತಕ್ಷಣ, ಒಂದು ನಿಮಿಷ ಹಿಡಿದು ನಿಂತರೆ ಏನೂ ಆಗುವುದಿಲ್ಲ ಎಂದನು. ಒಂದು ಗಂಟೆ ಹಿಡಿದು ನಿಂತರೆ ಎಂದು ಕೇಳಿದರು, ಸ್ವಲ್ಪ ಕೈ ತೋಳು ನೋವು ಬರುತ್ತದೆ ಎಂದ. ಒಂದು ದಿನವಿಡಿ ಹೀಗೆ ಕೈಯನ್ನು ಉದ್ದಕ್ಕೆ ಮುಂದೆ ಚಾಚಿ ದಿಡಿದು ನಿಂತರೆ ಏನಾಗುತ್ತದೆ ಎಂದಾಗ, ಯುವಕ ಹೇಳಿದ ಕೈ ತುಂಬಾ ನೋವಾಗಿ ಮಾಂಸಖಂಡಗಳು ಮರಗಟ್ಟಬಹುದು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರಿಗೆ ತೋರಿಸಬೇಕಾಗಿ ಬರುತ್ತದೆ ಎಂದ.

ನೀನು ಸರಿಯಾಗಿ ಹೇಳಿದೆ ಎಂದು, ಪುನಃ ಗುರುಗಳು “ನಾವು ಗಾಜಿನ ಲೋಟ ಹಿಡಿದು ನಿಂತ ಇಷ್ಟೂ ಸಮಯದಲ್ಲಿ ಗಾಜಿನ ಲೋಟದ ತೂಕದಲ್ಲಿ ಏನಾದರೂ ವ್ಯತ್ಯಾಸ ಆಯಿತಾ?” ಎಂದು ಪ್ರಶ್ನಿಸಿದಾಗ ಯುವಕ ಇಲ್ಲ ಎಂದ. “ಹಾಗಾದರೆ ನನ್ನ ಕೈಗೆ ಏಕೆ ನೋವಾಯಿತು” ಎಂದು ಗುರುಗಳು ಕೇಳಿದರು? ಯುವಕ ಅದಕ್ಕೆ ಉತ್ತರ ಕೊಡದೆ ತಲೆ ತಗ್ಗಿಸಿ ನಿಂತ. ಮತ್ತೆ ಮುಂದುವರಿಸಿ ಗಾಜಿನ ಲೋಟ ಹಿಡಿದು ನಿಂತ ನನಗೆ ಕೈ ನೋವು ಬಂದರೆ ಏನು ಮಾಡಬೇಕು? ಎಂದರು . ಕೊಂಚವು ಯೋಚಿಸದೆ ಯುವಕ, ಗಾಜಿನ ಲೋಟವನ್ನು ಕೆಳಗೆ ಕೆಳಗಿಡಬೇಕು ಅಷ್ಟೇ ಎಂದ.

ನೀತಿ :– ಚಿಂತೆಗಳು ಮನಸ್ಸನ್ನು ದುರ್ಬಲಗೊಳಿಸುತ್ತವೆ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಚಿಂತೆಗಳಿಂದ ಮುಕ್ತಿ ಹೊಂದಿದಾಗ ಮನಸ್ಸಿಗೆ ಶಾಂತಿ ಸಿಗುತ್ತದೆ

🖊️ಸಂಗ್ರಹ🖋️
*ಡಾ.ಈಶ್ವರಾನಂದ ಸ್ವಾಮೀಜಿ.*
📞 – 9341137882.

Related Articles

Leave a Reply

Your email address will not be published. Required fields are marked *

Back to top button