ಮೂರು ದಿನಗಳ ಕಾಲ ಬಲಿರಾಜ್ಯವೆಂದು ಗುರುತಿಸಲ್ಪಡಲಿ..!
ಬಲಿಪಾಢ್ಯಮಿ ಕುರಿತು ಅದ್ಭುತ ಮಾಹಿತಿ ದಿನಕ್ಕೊಂದು ಕಥೆ ಓದಿ
ದಿನಕ್ಕೊಂದು ಕಥೆ
ಮೂರು ದಿನಗಳ ಕಾಲ ಬಲಿರಾಜ್ಯವೆಂದು ಗುರುತಿಸಲ್ಪಡಲಿ..!
ಬಲಿರಾಜನು ಅತ್ಯಂತ ದಾನಶೂರ. ಬಾಗಿಲಿಗೆ ಬಂದ ಅತಿಥಿಯು ಏನೇ ಬೇಡಿದರೂ ಅದನ್ನು ಅವನಿಗೆ ದಾನವೆಂದು ಕೊಡುತ್ತಿದ್ದ. ದಾನ ಕೊಡುವುದು ಒಂದು ಒಳ್ಳೆಯ ಗುಣವಾಗಿದ್ದರೂ ಗುಣದ ಅತಿರೇಕವು ದೋಷವೇ ಆಗಿದೆ. ಯಾರಿಗೆ ಏನು, ಯಾವಾಗ ಮತ್ತು ಎಲ್ಲಿ ದಾನ ಕೊಡಬೇಕು ಎನ್ನುವುದನ್ನು ಶಾಸ್ತ್ರ ಮತ್ತು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸತ್ಪಾತ್ರರಿಗೆ ದಾನ ಕೊಡಬೇಕು, ಅಪಾತ್ರರಿಗೆ ಕೊಡಬಾರದು. ಅಪಾತ್ರರಿಗೆ ಸಂಪತ್ತನ್ನು ದಾನ ಮಾಡಿದರೆ ಅವರು ಮದೋನ್ಮತ್ತರಾಗಿ ಮನಬಂದಂತೆ ವರ್ತಿಸುತ್ತಾರೆ.
ಬಲಿರಾಜನು ಯಾರಿಗಾದರೂ, ಯಾವಾಗ ಬಂದರೂ ಮತ್ತು ಅವರು ಏನು ಕೇಳಿದರೂ ದಾನವೆಂದು ಕೊಡುತ್ತಿದ್ದ. ಆಗ ಭಗವಾನ ಶ್ರೀವಿಷ್ಣುವು ವಟುವಿನ ಅವತಾರ (ವಾಮನಾವತಾರ) ತಾಳಿ, (ವಟುವು ಚಿಕ್ಕವನಾಗಿರುತ್ತಾನೆ ಮತ್ತು ‘ಓಂ ಭವತಿ ಭಿಕ್ಷಾಂ ದೇಹಿ|’ ಅಂದರೆ ‘ಭಿಕ್ಷೆ ಕೊಡಿ’ ಎಂದು ಕೇಳುತ್ತಾನೆ.) ವಾಮನನು ಬಲಿರಾಜನ ಬಳಿ ಹೋಗಿ ಭಿಕ್ಷೆಯನ್ನು ಕೇಳಿದಾಗ, ಬಲಿರಾಜ “ಏನು ಬೇಕು” ಎಂದು ಕೇಳಿದ. ಆಗ ವಾಮನನು ತ್ರಿಪಾದ (ಮೂರು ಹೆಜ್ಜೆ) ಭೂಮಿಯನ್ನು ದಾನವಾಗಿ ಕೇಳಿದ. “ವಾಮನನು ಯಾರು ಮತ್ತು ಆ ದಾನದಿಂದ ಏನಾಗಲಿದೆ” ಎನ್ನುವುದರ ಬಗ್ಗೆ ಜ್ಞಾನವಿಲ್ಲದ ಬಲಿರಾಜ ದಾನಕೊಡಲು ಒಪ್ಪಿಕೊಂಡ.
ವಾಮನನು ವಿರಾಟರೂಪವನ್ನು ತಾಳಿ ಒಂದು ಕಾಲಿನಿಂದ ಸಂಪೂರ್ಣ ಭೂಮಿಯನ್ನು ವ್ಯಾಪಿಸಿದ. ಎರಡನೆಯ ಕಾಲಿನಿಂದ ಇಡಿ ಅಂತರಿಕ್ಷವನ್ನು ವ್ಯಾಪಿಸಿಕೊಂಡ ಹಾಗೂ ಅವನು “ಮೂರನೆಯ ಕಾಲನ್ನು ಎಲ್ಲಿಡಲಿ?” ಎಂದು ಬಲಿರಾಜನನ್ನು ಕೇಳಿದ. ಆಗ ಬಲಿರಾಜ, “ಮೂರನೆಯ ಕಾಲನ್ನು ನನ್ನ ತಲೆಯ ಮೇಲೆ ಇಡಿ” ಎಂದು ಹೇಳಿದ. ಆಗ ಮೂರನೆಯ ಪಾದವನ್ನು ಆತನ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುವುದೆಂದು ನಿರ್ಧರಿಸಿ ವಾಮನನು, “ನಿನಗೆ ಏನಾದರೂ ವರ ಕೇಳುವುದಿದ್ದರೆ ಕೇಳು (ವರಂ ಬ್ರೂಹಿ)” ಎಂದ.
ಆಗ ಬಲಿರಾಜನು “ಪೃಥ್ವಿಯ ಮೇಲಿನ ನನ್ನ ಎಲ್ಲ ರಾಜ್ಯವು ಮುಕ್ತಾಯವಾಗಲಿದೆ ಮತ್ತು ನೀವು ನನ್ನನ್ನು ಪಾತಾಳಕ್ಕೆ ತಳ್ಳುವವರಿದ್ದೀರಿ. ಆದುದರಿಂದ ಈ ಮೂರು ಪಾದ ಭೂಮಿದಾನದಿಂದ ಘಟಿಸಿದಂತಹ ಪೃಥ್ವಿಯ ರಾಜ್ಯವು ಪ್ರತಿವರ್ಷವೂ ಮೂರು ದಿನಗಳ ಕಾಲವಾದರೂ ನನ್ನ ರಾಜ್ಯವೆಂದು ಗುರುತಿಸಲ್ಪಡಲಿ. ಪ್ರಭೂ, ಯಮನ ಪ್ರೀತ್ಯರ್ಥವಾಗಿ ದೀಪದಾನವನ್ನು ಮಾಡುವವರಿಗೆ ಯಮಯಾತನೆಯಾಗದಿರಲಿ, ಅವರಿಗೆ ಅಪಮೃತ್ಯು ಬರದಿರಲಿ ಮತ್ತು ಅವರ ಮನೆಯಲ್ಲಿ ಲಕ್ಷ್ಮೀಯು ನಿರಂತರವಾಗಿ ವಾಸಿಸಲಿ” ಎಂದು ವರವನ್ನು ಬೇಡಿದ. ಆ ಮೂರು ದಿನಗಳೆಂದರೆ ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪ್ರತಿಪದಾ. ಇದಕ್ಕೆ ಬಲಿರಾಜ್ಯವೆನ್ನುತ್ತಾರೆ.
🖊️ಸಂಗ್ರಹ🖋️
*ಡಾ.ಈಶ್ವರಾನಂದ ಸ್ವಾಮೀಜಿ.*
📞 – 9341137882.