ಪ್ರಮುಖ ಸುದ್ದಿ

ಮಣ್ಣಿನ ಉಂಡೆಯಲ್ಲಿ ವಜ್ರ..!

ದಿನಕ್ಕೊಂದು ಕಥೆ ಓದಿ

ಮಣ್ಣಿನ ಉಂಡೆಯಲ್ಲಿ ವಜ್ರ

ಒಬ್ಬ ಮನುಷ್ಯ ಸಮುದ್ರ ತೀರಕ್ಕೆ ಹೋಗಿ ತೆರೆಗಳೊಂದಿಗೆ ಆಟವಾಡಿ ಸ್ನಾನ ಮಾಡಿದ. ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿಗಾಗಿ ಸ್ಥಳ ಹುಡು ಕಾಡಿದ. ಹತ್ತಿರದಲ್ಲೆಲ್ಲೂ ಮರಗಳಿರಲಿಲ್ಲ. ಮುಂದೆ ಕೆಲವು ದೊಡ್ಡ ದೊಡ್ಡ ಬಂಡೆಗಳಿದ್ದವು. ಅವುಗಳ ಹಿಂದೆ ಬೆಟ್ಟದ ಪ್ರದೇಶ. ಮರಗಳ ಕೆಳಗೆ ಮಲಗಿ ವಿಶ್ರಾಂತಿ ಪಡೆಯುವುದು ಅವನ ಉದ್ದೇಶದಿಂದ ಬೆಟ್ಟದ ಕಡೆಗೆ ನಡೆದ.

ಅವನಿಗೆ ಮರಗಳ ಹಿಂದೆ ಒಂದು ಗುಹೆ ಕಾಣಿಸಿತು. ಕುತೂಹಲದಿಂದ ಅಲ್ಲಿಗೆ ಹೋದ. ಅದೊಂದು ದೊಡ್ಡ ಗುಹೆ. ಸಾಕಷ್ಟು ಸ್ವಚ್ಛವಾಗಿದೆ. ಯಾರೋ ಅಲ್ಲಿ ಇದ್ದು, ಹೋದ ಲಕ್ಷಣಗಳಿವೆ. ಯಾರೋ ಗರಿಯ ಚಾಪೆಯನ್ನು ಹಾಸಿ ಬಿಟ್ಟು ಹೋಗಿದ್ದಾರೆ. ಇವನು ಚಾಪೆಯ ಮೇಲೆ ಮಲಗಿ ನಿದ್ರೆಹೋದ. ಗುಹೆ ತಂಪಾಗಿತ್ತು. ಚೆನ್ನಾಗಿ ಗಾಳಿ ಬರುತ್ತಿತ್ತು. ಒಂದೆರಡು ತಾಸು ನಿದ್ರೆ ಮುಗಿಸಿ ಎದ್ದ. ಮೈ ಮುರಿದು ಹೊರಡಲು ಸಿದ್ಧನಾದ. ಹೊರಡುವ ಮುನ್ನ ಗುಹೆಯ ಮೂಲೆಯಲ್ಲಿದ್ದ ಒಂದು ಬಟ್ಟೆಯ ಚೀಲವನ್ನು ಗಮನಿಸಿದ, ಅದನ್ನೆತ್ತಿಕೊಂಡು ನೋಡಿದ. ಅದರಲ್ಲಿ ನೂರಾರು ಮಣ್ಣಿನ ಉಂಡೆಗಳು. ಪ್ರತಿ ಯೊಂದೂ ಸುಮಾರು ಟೆನ್ನೀಸ್ ಚೆಂಡಿನಷ್ಟು ದೊಡ್ಡದಾಗಿತ್ತು. ಬಹುಶಃ ಈ ಗುಹೆ ಯಲ್ಲಿ ಯಾರೋ ಕೆಲವರು ಮಕ್ಕಳನ್ನು ಕರೆದುಕೊಂಡು ಬಂದು ಉಳಿದಿರಬಹುದು. ಆಗ ಮಕ್ಕಳು ಈ ಮಣ್ಣಿನ ಉಂಡೆಗಳನ್ನು ಮಾಡಿ ಇಟ್ಟಿರ ಬಹುದೆಂದು ಊಹಿಸಿದ.

ಚೀಲವನ್ನು ಹೆಗಲಿಗೇರಿಸಿ ಮತ್ತೆ ಸಮುದ್ರದೆಡೆಗೆ ಹೊರಟ. ತೀರದಲ್ಲಿ ನೀರಿನ ಅಲೆಗಳ ಪಕ್ಕದಲ್ಲೇ ನಡೆಯುತ್ತಿದ್ದ. ಆಗ ಚೀಲದ ಭಾರವನ್ನು ಕಡಿಮೆ ಮಾಡ ಬೇಕೆನ್ನಿಸಿತು ಆತನಿಗೆ. ಒಂದು ಉಂಡೆಯನ್ನು ತೆಗೆದು ಶಕ್ತಿ ಪ್ರಯೋಗಿಸಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ನೀರಿನಲ್ಲಿ ಎಸೆದು ಬಿಟ್ಟ. ನಂತರ ಸ್ವಲ್ಪ ದೂರ ನಡೆದು ಮತ್ತೊಂದು ಉಂಡೆಯನ್ನು ಎಸೆದ ಅವನಿಗೆ ಅದೊಂದು ಬಗೆಯ ಆಟವೇ ಆಯಿತು. ಕೆಲ ಸಮಯದ ನಂತರ ಆತ ಹತ್ತಿರದ ಕಲ್ಲುಬಂಡೆ ಯೊಂದನ್ನು ಏರಿ ನಿಂತ. ಅಲ್ಲಿಂದಲೂ ಒಂದೆರಡು ಉಂಡೆಗಳನ್ನು ನೀರಿಗೆಸೆದ. ಇನ್ನು ಮೂರ್ನಾಲ್ಕು ಉಂಡೆಗಳು ಉಳಿದಿದ್ದವು. ಮತ್ತೊಂದನ್ನು ತೆಗೆದು ಎಸೆಯುವುದಕ್ಕೆ ಹೋದಾಗ ಕಾಲು ಜಾರಿತು. ಕೈಯಲ್ಲಿಯ ಉಂಡೆ ಬಂಡೆಯ ಮೇಲೆ ಬಿದ್ದು ಒಡೆಯಿತು. ಒಳಗಿನಿಂದ ಫಳ್ಳೆಂದು ಬೆಳಕು ಮಿಂಚಿತು. ಏನದು ಎಂದು ಬಗ್ಗಿನೋಡಿ ತೆಗೆದುಕೊಂಡ. ಅದೊಂದು ಹೊಳೆಹೊಳೆಯುವ ವಜ್ರ! ಅವನಿಗೆ ಆಶ್ಚರ್ಯ! ಉಳಿದೆರಡು ಉಂಡೆಗಳನ್ನು ಒಡೆದು ನೋಡಿದ. ಅವುಗಳಲ್ಲಿಯೂ ಒಂದೊಂದು ವಜ್ರ .ಅವುಗಳನ್ನು ಕಂಡು ಅವನಿಗೆ ಸಂತೋಷವಾಗಲಿಲ್ಲ. ಬದಲಿಗೆ ಅಳು ಬಂತು. ಕೆಳಗೆ ಕುಳಿತು ಬಿಕ್ಕಳಿಸಿ ಅತ್ತ. ಅವನ ಚೀಲದಲ್ಲಿ ನೂರಾರು ಮಣ್ಣಿನ ಉಂಡೆಗಳಲ್ಲಿ ವಜ್ರಗಳು ಕುಳಿತಿದ್ದವು. ಅವುಗಳ ಬೆಲೆ ಅರಿಯದೇ ಅವುಗಳನ್ನು ಕೇವಲ ಮಣ್ಣಿನ ಉಂಡೆಗಳೆಂದು ಬಗೆದು ನೀರಿಗೆ ಎಸೆದು ಬಿಟ್ಟಿದ್ದ! ಅವುಗಳ ಬೆಲೆ ಮೊದಲೇ ತಿಳಿದಿದ್ದರೆ ಆತ ಭಾರೀ ಶ್ರೀಮಂತನಾಗಿ ಬಿಡುತ್ತಿದ್ದ.

ನೀತಿ :– ಜೀವನದಲ್ಲಿ ನಮಗೆ ಬೇಕೋ, ಬೇಡವೋ ನೂರಾರು ಘಟನೆಗಳು ನಡೆಯುತ್ತವೆ. ನೂರಾರು ಜನರ ಸಂಪರ್ಕ ಬರುತ್ತದೆ. ಅವು ಪ್ರತಿಯೊಂದೂ ಮಣ್ಣಿನ ಉಂಡೆಗಳಿದ್ದಂತೆ. ಅವುಗಳನ್ನು ಹತ್ತಿರದಿಂದ ಗಮನಿಸಿದ್ದರೆ, ಪ್ರೀತಿಯಿಂದ ತಟ್ಟದಿದ್ದರೆ ಒಳಗಿನ ವಜ್ರ ಕಾಣಲಿಕ್ಕಿಲ್ಲ. ಅವನ್ನು ನಾವು ಮರೆತು ಬಿಡುತ್ತೇವೆ. ಒಳಗಿನ ವಜ್ರವನ್ನು ಕಾಣುವ ಅವಕಾಶದಿಂದ ವಂಚಿತರಾಗುತ್ತೇವೆ. ನಮ್ಮ ಸಂಪರ್ಕಕ್ಕೆ ಬಂದ ಪ್ರತಿ ವ್ಯಕ್ತಿಯೂ ಒಂದು ವಜ್ರವೆಂಬಂತೆ ಭಾವಿಸಿ ನಡೆದರೆ ಬರಿ ತಪ್ಪುಗಳನ್ನೇ ಕಾಣುವುದು ತಪ್ಪಿ ಎಲ್ಲರಲ್ಲೂ ಒಳ್ಳೆಯದನ್ನು ಕಾಣುವ ಮನೋಭಾವ ಬೆಳೆಯುತ್ತದೆ ಅಲ್ಲವೇ?

🖊️ಸಂಗ್ರಹ🖋️
*ಡಾ.ಈಶ್ವರಾನಂದ ಸ್ವಾಮೀಜಿ.*
📞 – 9341137882.

Related Articles

Leave a Reply

Your email address will not be published. Required fields are marked *

Back to top button