ಕಥೆ

ರೋಲ್ಸ್ ರಾಯ್ಸ್’ ಕಾರನ್ನು ಕಸ ತುಂಬಲು ಬಳಸಿದ ಭಾರತದ ಹೆಮ್ಮೆಯ ರಾಜ !!

ದಿನಕ್ಕೊಂದು ಕಥೆ

ರೋಲ್ಸ್ ರಾಯ್ಸ್’ ಕಾರನ್ನು ಕಸ ತುಂಬಲು ಬಳಸಿದ ಭಾರತದ ಹೆಮ್ಮೆಯ ರಾಜ !!

ಈಗ ಕಾಲ ಬದಲಾಗಿದೆ, ಆದರೆ ಹಿಂದಿನ ಕಾಲದಲ್ಲಿ ನಮ್ಮ ಜನರನ್ನು ಜಗತ್ತು ನೋಡುತ್ತಿದ್ದ ರೀತಿಯೇ ಬೇರೆ, ಭಾರತೀಯರು ಎಂದರೆ ಕೀಳು ಭಾವನೆ ತುಂಬಿ ತುಳುಕುತ್ತಿತ್ತು, ಅಂತಹ ಕಾಲದಲ್ಲಿ ನಮ್ಮ ದೇಶದ ರಾಜರು ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಾರು ಕಂಪನಿಗೆ ಬುದ್ದಿ ಕಲಿಸಿದ ಕತೆ ಇಲ್ಲಿದೆ, ಓದಿ.

ಒಮ್ಮೆ ರಾಜಸ್ಥಾನದ ಪ್ರತಿಷ್ಠಿತ ರಾಜಮನೆತನದ ಮೂರನೇ ರಾಜ ಜೈಸಿಂಗ್ ಲಂಡನ್ ಪ್ರವಾಸ ಕೈಗೊಂಡಿದ್ದರು. ಅದೊಂದು ದಿನ ಜೈಸಿಂಗ್ ಲಂಡನ್ನಿನ ಬಾಂಡ್ ಬೀದಿಯಲ್ಲಿ ಸಾಮಾನ್ಯ ಪ್ರಜೆಯಂತೆ ನಡೆದು ಬರುತ್ತಿದ್ದರು.

ನಡೆದು ಬರುತ್ತಿರುವ ವೇಳೆಯಲ್ಲಿ ಐಷಾರಾಮಿ ಕಾರು ಸಂಸ್ಥೆ ‘ರೋಲ್ಸ್ ರಾಯ್ಸ್’ ಮಾರಾಟ ಮಳಿಗೆ ಅವರ ಕಣ್ಣಿಗೆ ಬಿತ್ತು. ಅಂಗಡಿಯ ಒಳಗೆ ಬಂದ ಜೈಸಿಂಗರಿಗೆ ರೋಲ್ಸ್ ರಾಯ್ಸ್ ಕಾರು ಕೊಳ್ಳುವ ಮನಸ್ಸಾಯಿತು.

ಕಾರು ಖರೀದಿಸಲು ಅವರು ಮಾರಾಟ ಮಳಿಗೆಯ ಮಾಲೀಕನ ಬಳಿ ಬಂದು ಕಾರಿನ ಬೆಲೆಯನ್ನು ವಿಚಾರಿಸಿದರು. ಸಾಮಾನ್ಯವಾಗಿ ರೋಲ್ಸ್ ರಾಯ್ಸ್ ಕಾರು ಕೊಳ್ಳುವವರು ಶ್ರೀಮಂತರೇ ಆಗಿರುತ್ತಾರೆ ಎಂಬುದು ಮಾಲೀಕರ ನಂಬಿಕೆಯಾಗಿತ್ತು.

ಜೈಸಿಂಗ್ ಅವರ ಸಾಮಾನ್ಯ ವೇಷಭೂಷಣಗಳನ್ನು ನೋಡಿದ ಮಾಲೀಕ ಕಾರಿನ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ, ಉಡಾಪೆ ಮಾತುಗಳನ್ನಾಡಿ ತುಚ್ಛವಾಗಿ ಕಂಡನು. ಇದರಿಂದ ಅವಮಾನಿತರಾದ ಜೈಸಿಂಗ್ ನೇರವಾಗಿ ತಾವು ಉಳಿದುಕೊಂಡಿದ್ದ ಹೋಟೆಲ್ ಗೆ ಹೋದವರೆ, ತಮ್ಮ ಸೇವಕರಿಗೆ ತಾವು ಕಾರಿನ ಮಳಿಗೆಗೆ ಹೋಗಬೇಕೆಂದು ಆಜ್ಞೆ ಮಾಡಿದರು.

ಕಾರಿನ ಮಳಿಗೆ ವರೆಗು ರತ್ನಗಂಬಳಿ ಹಾಸು ಉರುಳಿತು. ಜೈಸಿಂಗ್ ರಾಜನ ಪೋಷಾಕಿನಲ್ಲಿ ಕಾರಿನ ಮಳಿಗೆಗೆ ಆಗಮಿಸಿದರು. ಇದನ್ನು ಕಂಡ ಮಾಲೀಕ ಕಂಗಾಲಾದನು. ಸ್ವಲ್ಪ ಹೊತ್ತಿನ ಮುಂಚೆ ಇಲ್ಲಿಗೆ ಬಂದಿದ್ದ ಸಾಮಾನ್ಯ ವ್ಯಕ್ತಿ ಇವರೇನಾ?ಎಂದು ಆಶ್ಚರ್ಯವಾಯಿತು.

ರಾಜ ಜೈಸಿಂಗ್ ಕೂಡಲೆ ಅಂಗಡಿಯಲ್ಲಿಟ್ಟಿದ್ದ ಒಟ್ಟು ಆರು ಕಾರುಗಳನ್ನು ಖರೀದಿಸಿ, ಸಾಗಾಣಿಕೆಯ ವೆಚ್ಚವನ್ನು ತಾವೇ ಪಾವತಿ ಮಾಡಿ ಭಾರತಕ್ಕೆ ತಂದರು.

ಅಷ್ಟಕ್ಕೆ ಸುಮ್ಮನಾಗದ ಜೈಸಿಂಗ್ ಆರು ಐಷಾರಮಿ ಕಾರುಗಳನ್ನು ನಗರದ ಬೀದಿ ಕಸ ತುಂಬಿ ಸಾಗಿಸಲು ಬಳಸುವಂತೆ ತಮ್ಮ ರಾಜ್ಯದ ನಗರಪಾಲಿಕೆಗೆ ಆಜ್ಞೆ ಮಾಡಿದರು. ಅದರಂತೆ ರೋಲ್ಸ್ ರಾಯ್ಸ್ ಕಾರು ಕಸದ ವಾಹನವಾಯಿತು.

ದಿನಕಳೆದಂತೆ ಈ ಸುದ್ದಿ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿತು. ರೋಲ್ಸ್ ರಾಯ್ಸ್ ಕಂಪನಿಯ ಪ್ರತಿಷ್ಟೆ ಮತ್ತು ಬೇಡಿಕೆ ಕುಸಿಯತೊಡಗುತ್ತದೆ. ಕಂಪನಿಯ ಮರ್ಯಾದೆ ಹೋಗುತ್ತಿರುವುದರಿಂದ ಕಂಗೆಟ್ಟ ರೋಲ್ಸ್ ರಾಯ್ಸ್ ಕಂಪನಿ, ರಾಜ ಜೈಸಿಂಗ್ ಅವರಿಂದ ವಿವರಣೆ ಕೇಳಿತು.

ಜೈಸಿಂಗ್ ಲಂಡನ್ನಿನ ಶೋರೂಮಿನಲ್ಲಿ ತಮಗಾದ ಅವಮಾನವನ್ನು ವಿವರಿಸಿದರು. ಕೂಡಲೆ ಕಂಪನಿಯು ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆ ಕೇಳಿತು. ಅಷ್ಟಲ್ಲದೆ ಮತ್ತೆ ಆರು ಹೊಸ ಕಾರುಗಳನ್ನು ಕೊಡುತ್ತೇವೆ, ಕಾರಿನಲ್ಲಿ ಕಸ ಸಾಗಾಣಿಕೆ ಮಾಡುವುದನ್ನು ದಯವಿಟ್ಟು ಕೂಡಲೆ ನಿಲ್ಲಿಸಿ ಎಂದು ಬೇಡಿಕೊಂಡಿತು.

ರಾಜ ಕಂಪನಿಯ ಕೋರಿಕೆಯನ್ನು ಮನ್ನಿಸಿ, ಕಸ ಸಾಗಾಟವನ್ನು ನಿಲ್ಲಿಸಿ ಆರು ಹೊಸ ಕಾರುಗಳನ್ನು ಉಚಿತವಾಗಿ ಪಡೆದರು. ಆ ಮೂಲಕ ಒಬ್ಬ ಭಾರತೀಯನಿಗೆ ಬ್ರಿಟಿಷ್ ಕಂಪನಿಯ ರೋಲ್ಸ್ ರಾಯ್ಸ್ ನಿಂದ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡು ಸ್ವಾಭಿಮಾನಿ ಭಾರತೀಯರಿಗೆ ಮಾದರಿಯಾದರು.

ಹಿಂದಿನ ಕಾಲದಲ್ಲಿ ಭಾರತದಲ್ಲಿರುವ ಹೆಚ್ಚಿನ ಜನ ಬಡವರು ಎಂಬ ತಿಳಿವಳಿಕೆಯೂ ಏನೋ ? ಅದನ್ನೆಲಾ ಮೆಟ್ಟಿ ನಿಂತು ನಮ್ಮ ದೇಶದ ಪ್ರತಿಷ್ಠೆಯನ್ನು ಕಾಪಾಡುವಲ್ಲಿ ಸಫಲರಾದ ಜೈಸಿಂಗ್ ಅವರಿಗೆ ಭಾರತೀಯರಾರಾಗಿ ನಾವೆಲ್ಲರೂ ಕೃತಜ್ಞತೆ ಸಲ್ಲಿಸೋಣ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button