ಕಥೆ

ರೈತನಿಗೆ ಮನ್ನಣೆ ನೀಡಿದ ಲಿಂಕನ್

ದಿನಕ್ಕೊಂದು ಕಥೆ ಓದಿ

ದಿನಕ್ಕೊಂದು ಕಥೆ

ರೈತನಿಗೆ ಮನ್ನಣೆ ನೀಡಿದ ಲಿಂಕನ್

ಯಾವುದೇ ಒಂದು ಪ್ರದೇಶದ ಜನಜೀವನವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಅಲ್ಲಿ ನಗರವಾಸಿಗಳು ಮತ್ತು ಗ್ರಾಮ ವಾಸಿಗಳೆಂಬುದಾಗಿ ಎರಡು ಪ್ರಕಾರದಲ್ಲಿ ಜನರನ್ನು ವಿಂಗಡಿಸಬಹುದು. ನಗರಗಳಲ್ಲಿರುವ ಜನರು ಸುಶಿಕ್ಷಿತರು, ಹೆಚ್ಚು ಸೌಕರ್ಯಗಳಿಂದ ಕೂಡಿದ ಜೀವನವನ್ನು ನಡೆಸುತ್ತಾರೆ. ಆಧುನಿಕ ವಿಜ್ಞಾನದ ಫಲವಾಗಿ ದೊರೆತ ಎಲ್ಲ ಸೌಲಭ್ಯಗಳನ್ನು ಬಳಸಿ, ಸುಖಮಯವಾದ ವಾತಾವರಣದಲ್ಲಿ ಬದುಕುವುದಲ್ಲದೆ, ಆಧುನಿಕ ಸಂಪರ್ಕ ಮಾಧ್ಯಮಗಳಿಂದಾಗಿ ವಿಶೇಷವಾದ ಅನುಭವ ಮತ್ತು ಜ್ಞಾನವನ್ನೂ ಪಡೆದಿರುತ್ತಾರೆ. ಗ್ರಾಮವಾಸಿಗಳು ಇಂತಹ ಸೌಕರ್ಯಗಳ ಕೊರತೆಯಿಂದಾಗಿ ಬಹಳ ಹಿಂದುಳಿದವರಾಗಿದ್ದು, ಸಾರ್ವತ್ರಿಕವಾಗಿ ತಾತ್ಸಾರಕ್ಕೆ ಗುರಿಯಾಗುತ್ತಾರೆ. ಆದರೆ ಆದರ್ಶಪ್ರಾಯರೂ, ಔದಾರ್ಯವಂತರೂ ಆದ ಜನರು ಹಳ್ಳಿಗರೊಡನೆಯೂ ಹೇಗೆ ವ್ಯವಹರಿಸುತ್ತಾರೆಂಬುದನ್ನು ಅಬ್ರಹಾಂ ಲಿಂಕನ್ನರ ನಿರ್ದಶದಿಂದ ಗುರುತಿಸಬಹುದಾಗಿದೆ.

ಅಮೆರಿಕಾ ದೇಶದ ಜನಪ್ರಿಯ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ಅಧ್ಯಕ್ಷರಾಗುವ ಮೊದಲೇ ತಮ್ಮ ಸಾರ್ವಜನಿಕ-ಸಂಪರ್ಕ, ಸಮಾಜಸೇವೆ, ಭಾಷಣ-ಕಲೆ ಮೊದಲಾದ ಗುಣಗಳಿಂದಾಗಿ ಸುಪ್ರಸಿದ್ಧರಾಗಿದ್ದರು. ಅವರನ್ನು ನಗರದ ನಾನಾ ಸಂಘ ಸಂಸ್ಥೆಗಳು ಉಪನ್ಯಾಸಕ್ಕಾಗಿ ಆಹ್ವಾನಿಸುತ್ತಿದ್ದವು ಹಾಗೂ ಅವರ ವಿದ್ವತ್ ಪೂರ್ಣ ಉಪನ್ಯಾಸಗಳನ್ನು ಕೇಳುವುದಕ್ಕಾಗಿ ಅಪಾರ ಸಂಖ್ಯೆಯಲ್ಲಿ ಜನರು ನೆರೆಯುತ್ತಿದ್ದರು.

ಒಮ್ಮೆ ಬೃಹತ್ ನಗರ ಟೌನ್ ಹಾಲಿನಲ್ಲಿ ಅವರ ಭಾಷಣ ನಡೆದಾಗ ಅವರ ಹಳ್ಳಿಯ ರೈತನೊಬ್ಬನು ಅದನ್ನು ಕೇಳಲೆಂದು ಆಗಮಿಸಿದ್ದ. ಲಿಂಕನ್ನರ ಭಾಷಣದಿಂದ ಪ್ರಭಾವಿತನಾದ ಆ ರೈತ ಉಪನ್ಯಾಸ ಮುಕ್ತಾಯವಾಗುತ್ತಿದ್ದಂತೆಯೇ ವೇದಿಕೆಯ ಮೇಲೇರಿ ಬಿಟ್ಟ. “ಯಾರೀತ?” ಎಂದು ಎಲ್ಲರಿಗೂ ಅಚ್ಚರಿಯೆನ್ನಿಸಿತು! ಆ ರೈತನಾದರೋ ಲಿಂಕನ್ನರ ಹೆಗಲ ಮೇಲೆ ಕೈಯಿರಿಸಿ, ಆತ್ಮೀಯತೆಯಿಂದ “ಲೋ ಅಬ್ರಹಾಂ ನಮ್ಮೂರಿನ ಹುಡುಗ ನೀನು. ಈ ಊರಿನಲ್ಲಿ ಎಷ್ಟು ದೊಡ್ಡ ಜನ ಆಗಿದ್ದೀಯಾ? ನಿನ್ನ ಉಪನ್ಯಾಸ ಕೇಳಲು ಎಷ್ಟೊಂದು ಜನ ಸೇರಿದ್ದಾರೆ! ನನಗೆ ಭಾರಿ ಅಭಿಮಾವೆನ್ನಿಸುತ್ತಿದೆ” ಎಂದು ನುಡಿದ.

ಲಿಂಕನ್ನರೂ ಬಹು ಸಂತೋಷದಿಂದ ಹಸ್ತ ಲಾಘವ ಮಾಡುತ್ತಾ “ಅರೆ ನೀವಾ? ನಮ್ಮೂರಿಂದ ನನ್ನ ಭಾಷಣ ಕೇಳಲೆಂದು ಬಂದಿರಾ? ಊರಿನಲ್ಲೆಲ್ಲ ಕ್ಷೇಮವೇ?” ಎಂದು ವಿಚಾರಿಸಿ ಇತರ ಗಣ್ಯರಿಗೆ ರೈತನನ್ನು ಪರಿಚಯಿಸಿದರು. ರೈತನೋ ಭಾರಿ ಖುಷಿಯಿಂದ “ನನಗೆಷ್ಟು, ಗೌರವ ನೀಡಿದೆ ನೀನು!” ಎಂದು ನುಡಿದ. ಇದನ್ನು ಗಮನಿಸಿದ ಜನರು ಗಣ್ಯನೇತಾರನಾಗಿದ್ದೂ, ಹಳ್ಳಿಯ ಸಾಮಾನ್ಯ ರೈತನಿಗೆ ಮನ್ನಣೆ ನೀಡಿದ ಲಿಂಕನ್ನರ ಔದಾರ್ಯವನ್ನು ಮೆಚ್ಚಿಕೊಂಡರು.

ಎಷ್ಟೇ ಉನ್ನತಸ್ಥಾನವನ್ನೇರಿದವನಾಗಿದ್ದರೂ ತನ್ನ ಮೂಲಸ್ಥಾನದ ಮಹತ್ವವನ್ನು ಮರೆಯದೆ ತನ್ನ ಹಳೆಯ ಪರಿಚಿತರನ್ನೂ, ಗೆಳೆಯರನ್ನೂ ನೆನಪಿನಲ್ಲಿರಿಸಿಕೊಂಡು, ಗೌರವಾದರದಿಂದ ಕಾಣಬಲ್ಲವರು ಆದರ್ಶ ಪ್ರಾಯರೆನಿಸಿಕೊಳ್ಳುವರು. ಮಹಾತ್ಮಾ ಗಾಂಧಿಯವರು ಇಂಗ್ಲೆಂಡಿಗೆ ಹೋಗಿ ‘ಬಾರ್-ಎಟ್-ಲಾ’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ‘ಬ್ಯಾರಿಸ್ಟರ್’ ಎನಿಸಿದ್ದರೂ, ತಮ್ಮ ಹುಟ್ಟೂರನ್ನು ಮರೆಯದೆ, ಭಾರತಕ್ಕೆ ಹಿಂದಿರುಗಿ, ತಮ್ಮ ದೇಶದ ಉದ್ಧಾರಕ್ಕಾಗಿ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ, ಯಶಸ್ಸು ಗಳಿಸಿದರು. ಭಾರತದ ‘ರಾಷ್ಟ್ರಪಿತ’ ರೆನಿಸಿದರು.

ನೀತಿ :– ಜನನಿಯೂ ಜನ್ಮಭೂಮಿಯೂ ಸ್ವರ್ಗಕ್ಕಿಂತಲೂ ಮಿಗಿಲಾದುದು ಎಂಬ ಮಾತು ಇಂತಹ ಮಹಾಪುರುಷರಿಂದಾಗಿಯೇ ಸಾರ್ಥಕವೆನ್ನಿಸಿದೆ. ತಮ್ಮವರನ್ನು, ತಮ್ಮೂರು, ತಮ್ಮ ದೇಶದವರನ್ನು ಗೌರವಿಸಿ ಅದರಿಂದ ಎಲ್ಲರಿಗೂ ಗೌರವ ದೊರಂತಾಗುವುದು.

🖊️ಸಂಗ್ರಹ🖋️
*ಷ.ಬ್ರ.ಡಾ.ಅಭಿನವ ರಾಮಲಿಂಗ ಶ್ರೀ*
📞 – 9341137882.

Related Articles

Leave a Reply

Your email address will not be published. Required fields are marked *

Back to top button