ದಿನಕ್ಕೊಂದು ಕಥೆ
ಪ್ರೀತಿಗಿಂತ ಶ್ರೀಮಂತಿಕೆ ಬೇರಿಲ್ಲ
ಪ್ರೀತಿಗೆ ಶ್ರೀಮಂತಿಕೆಯು ಕಡ್ಡಾಯ ಎಂದು ತಿಳಿದು, ಸಂಪತ್ತು ಮತ್ತು ಅಂತಸ್ತನ್ನು ಮಾತ್ರ ಪ್ರೀತಿಸುವ ಜನರಿದ್ದಾರೆ. ಆದರೆ ಈ ಪ್ರೇಮ ನಿಸ್ವಾರ್ಥದ್ದು. ಹಣ ಶಾಶ್ವತವಲ್ಲ, ಎಷ್ಟೋ ಶ್ರೀಮಂತರ ಬಳಿ ದುಡ್ಡಿಗೆ ಕೊರತೆಯಿಲ್ಲದಿದ್ದರೂ, ಜೀವನದಲ್ಲಿ ಪ್ರೀತಿ ಇರುವುದಿಲ್ಲ. ಅಂತಹವರು ಯಾರೇ ಪ್ರೀತಿಸಿದರೂ ಅದು ಹಣಕ್ಕಾಗಿಯೇ ಎಂದು ಭಾವಿಸಿ ದುಃಖಿತರಾಗಿರುತ್ತಾರೆ. ಹಣಕ್ಕೆ ಕೊರತೆಯಿದ್ದರೂ, ನಿಸ್ವಾರ್ಥ ಪ್ರೀತಿ ಜತೆಯಲ್ಲಿದ್ದರೆ, ಏನು ಆಗಬಹುದು ಎಂಬುದನ್ನು ಒಂದು ಕಥೆ ರೂಪದ ಉದಾಹರಣೆಗೆ ನೋಡೋಣ.
ಪಟ್ಟಣದಲ್ಲಿ ಗಂಡ ಮತ್ತು ಹೆಂಡತಿ ಸುಖವಾಗಿ ಬಾಳುತ್ತಿದ್ದರು. ಹೆಂಡತಿ ಮನೆಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡರೆ, ಗಂಡ ಹೊರಗೆ ಹೋಗಿ ಶ್ರದ್ಧೆಯಿಂದ ದುಡಿಯುತ್ತಿದ್ದ.
ಹೀಗಿರುವಾಗ ಒಂದು ದಿನ, ಸಂಜೆ ಮನೆಗೆ ಬಂದ ಗಂಡನ ಮುಖದಲ್ಲಿ ಆತಂಕ ಮನೆ ಮಾಡಿತ್ತು. ಹಣೆಯೆಲ್ಲಾ ಬೆವರಾಗಿತ್ತು, ತಲೆ ಮೇಲೆ ಕೈ ಹೊತ್ತು ಕುಳಿತಿದ್ದ. ಗಂಡನ ಈ ಸ್ಥಿತಿ ಕಂಡು ಹೆಂಡತಿಗೆ ಗಾಬರಿಯಾಯಿತು. ಎಷ್ಟು ಬಾರಿ ಕೇಳಿದರೂ ಆತ ಮಾತನಾಡಲಿಲ್ಲ. ಸ್ವಲ್ಪ ಸಮಯದ ನಂತರ ಸುಧಾರಿಸಿಕೊಂಡು, “ನನ್ನನ್ನು ಕೆಲಸದಿಂದ ತೆಗೆದುಹಾಕಿದರು” ಎಂದು ನುಡಿದ. ಆ ಮಾತು ಕೇಳಿ ಹೆಂಡತಿಯೂ ಮೌನವಾದಳು. ಮನೆ ಬಾಡಿಗೆ, ದೈನಂದಿನ ಖರ್ಚುಗಳೆಲ್ಲವೂ ಆತನ ಸಂಬಳವನ್ನೇ ಅವಲಂಬಿಸಿದ್ದವು. ಮುಂದೆ ಜೀವನ ಹೇಗೆ ಸಾಗಿಸಬಹುದು ಎಂಬ ಆತಂಕ ಇಬ್ಬರನ್ನೂ ಕಾಡಿತು.
ಮರುದಿನ ಬೆಳಗ್ಗೆ ಎದ್ದ ಗಂಡ, “ನಾನು ಸುಮ್ಮನೆ ಕೂರುವುದಿಲ್ಲ, ಬೇರೆ ಕಡೆ ಕೆಲಸ ಹುಡುಕುತ್ತೇನೆ” ಎಂದು ಹೊರಟ. ಆದರೆ ಪ್ರಯತ್ನಿಸಿದರೂ ಕೆಲಸ ಸಿಗಲಿಲ್ಲ. ಹೀಗೆ ದಿನಗಳು ಕಳೆದವು. ಕೆಲಸ ಮಾತ್ರ ದೊರೆಯಲೇ ಇಲ್ಲ.
ಕೊನೆಗೆ, ತನ್ನ ವೃತ್ತಿಯ ಕ್ಷೇತ್ರವನ್ನೇ ಬದಲಾಯಿಸಬೇಕು ಎಂದು ನಿರ್ಧರಿಸಿದ ಆತ, ಹೆಂಡತಿಯನ್ನು ಕರೆದು, “ಇದು ಕೊನೆಯ ದಿನ, ನಾಳೆಯಿಂದ ನಾನು ಕೆಲಸ ಹುಡುಕುವುದಿಲ್ಲ. ಬೇರೆ ಏನಾದರೂ ಮಾಡಲು ಪ್ರಯತ್ನಿಸುತ್ತೇನೆ” ಎಂದ. ಅದಕ್ಕೆ ಹೆಂಡತಿ ನಸುನಕ್ಕು, “ಇಲ್ಲ, ನಿಮಗೆ ಇಂದು ಖಂಡಿತ ಕೆಲಸ ಸಿಕ್ಕೇ ಸಿಗುತ್ತದೆ. ಸಂಜೆ ನಿಮಗೆ ಒಂದು ದೊಡ್ಡ ಸರ್ಪ್ರೈಸ್ ಕೂಡ ಕಾದಿರುತ್ತದೆ” ಎಂದು ವಿಶ್ವಾಸದಿಂದ ಹೇಳಿ ಕಳುಹಿಸಿದಳು.
ಹೆಂಡತಿಯ ಮೇಲಿನ ಅಪಾರ ಪ್ರೀತಿಯಿಂದ, ಆಕೆ ತನಗಾಗಿ ಏನು ಸರ್ಪ್ರೈಸ್ ಸಿದ್ಧಪಡಿಸಿದ್ದಾಳೆ, ಒಂದು ವೇಳೆ ತನಗೆ ಕೆಲಸ ಸಿಗದಿದ್ದರೆ ಸರ್ಪ್ರೈಸ್ ನೀಡುವುದಿಲ್ಲವಾ ಎಂದು ಗಂಡ ಆಲೋಚಿಸಿದ. ಆದರೆ, ಒಳ್ಳೆಯದೇ ಆಗುತ್ತದೆ ಎಂದು ಧನಾತ್ಮಕವಾಗಿ ಯೋಚಿಸುತ್ತಾ ಕೆಲಸ ಹುಡುಕಲು ಮುಂದಾದ.
ಕೊನೆಗೂ ಆತನ ಶ್ರಮಕ್ಕೆ ಪ್ರತಿಫಲ ಸಿಕ್ಕಿತು. ಮಧ್ಯಾಹ್ನದ ವೇಳೆಗೆ ಆತನಿಗೆ ಹೊಸ ಕೆಲಸ ದೊರೆಯಿತು. ತಕ್ಷಣವೇ ಹೆಂಡತಿಗೆ ಕರೆ ಮಾಡಿ, “ನನಗೆ ಕೆಲಸ ಸಿಕ್ಕಿತು! ನೀನು ಸರ್ಪ್ರೈಸ್ ರೆಡಿ ಮಾಡು!” ಎಂದು ಸಂತೋಷದಿಂದ ಹೇಳಿದ.
ಸಂಜೆ ಮನೆಗೆ ಬಂದಾಗ, ಆತನ ಕಣ್ಣುಗಳು ಅರಳಿದವು. ಮನೆ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ದೀಪದ ಬೆಳಕು ಮನೆಯ ಕತ್ತಲನ್ನು ಹಿಮ್ಮೆಟ್ಟಿಸಿ ಒಳಗೆ ಕರೆಯುವಂತೆ ಭಾಸವಾಯಿತು. ಡೈನಿಂಗ್ ಟೇಬಲ್ ಮೇಲೆ ವಿಧ ವಿಧದ ರುಚಿಕರ ಖಾದ್ಯಗಳು ತುಂಬಿದ್ದವು. ಟೇಬಲ್ ಮೇಲೆ ಒಂದು ಪತ್ರವೂ ಇತ್ತು. ಅದರಲ್ಲಿ “ನನಗೆ ಮೊದಲೇ ತಿಳಿದಿತ್ತು, ನನ್ನ ಗಂಡನಿಗೆ ಖಂಡಿತ ಕೆಲಸ ಸಿಕ್ಕೇ ಸಿಗುತ್ತದೆ ಎಂದು. ನಿಮ್ಮ ಖುಷಿಯನ್ನು ಆಚರಿಸಲು ಇಷ್ಟೊಂದು ಬಗೆಬಗೆಯ ಖಾದ್ಯಗಳನ್ನು ತಯಾರಿಸಿದ್ದೇನೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ” ಎಂದಿತ್ತು.
ಗಂಡನಿಗೆ ಸಂತೋಷವೋ ಸಂತೋಷ. ತನ್ನ ಹೆಂಡತಿಗೆ ತನಗೆ ಇಂದು ಕೆಲಸ ಸಿಗುತ್ತದೆ ಎಂದು ಹೇಗೆ ತಿಳಿಯಿತು ಎಂದು ಆಶ್ಚರ್ಯಪಟ್ಟ. ಅವಳ ಬಗ್ಗೆ ಹೆಮ್ಮೆ ಪಟ್ಟ. ತಕ್ಷಣ ಅವಳನ್ನು ಹುಡುಕಿ, ಗಾಢವಾಗಿ ತಬ್ಬಿಕೊಂಡು, ತಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳಿದ.
ಆಗ, ಹೆಂಡತಿಯ ಕೈಲಿದ್ದ ಇನ್ನೊಂದು ಪತ್ರ ಕೆಳಗೆ ಬಿತ್ತು. ಗಂಡ ಅದನ್ನು ಕುತೂಹಲದಿಂದ ತೆಗೆದುಕೊಂಡು ಓದಿದ. ಅದರಲ್ಲಿ “ನಿಮಗೆ ಒಂದು ವೇಳೆ ಕೆಲಸ ಸಿಗಲಿಲ್ಲ ಎಂದರೇನು? ನಾನು ನಿಮ್ಮ ಜೊತೆ ಇದ್ದೇನೆ. ಇಬ್ಬರೂ ಸೇರಿ ಏನಾದರೂ ಹೊಸದನ್ನು ಪ್ರಾರಂಭಿಸೋಣ. ನಾನು ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳಲು ಈ ಬಗೆಬಗೆಯ ಖಾದ್ಯ ತಯಾರಿಸಿದ್ದೇನೆ. ಚೆನ್ನಾಗಿ ಊಟ ಮಾಡಿ, ನಾಳೆಯಿಂದ ಮತ್ತೆ ಹೊಸ ಹುರುಪಿನಿಂದ ಕೆಲಸ ಹುಡುಕಿದರಾಯಿತು.”ಬರೆದಿತ್ತು.
ನೀತಿ :– ನಿಜವಾದ ಪ್ರೀತಿ, ಎಂಥ ಕಷ್ಟದ ಪರಿಸ್ಥಿತಿಯನ್ನಾದರೂ ಎದುರಿಸುವ ಧೈರ್ಯ ಮತ್ತು ಶಕ್ತಿ ಇರುತ್ತದೆ. ಇಲ್ಲಿ, ಹೆಂಡತಿಯು ತನ್ನ ಪ್ರೀತಿಯ ಮೂಲಕ ಗಂಡನ ಕಷ್ಟವನ್ನು ಹಂಚಿಕೊಂಡು, ಅವನಿಗೆ ಧೈರ್ಯ ತುಂಬಿದಳು. ಪ್ರೀತಿಯೇ ನಿಜವಾದ ಸಂಪತ್ತು.
🖊️ಸಂಗ್ರಹ🖋️
*ಷ.ಬ್ರ.ಡಾ.ಅಭಿನವ ರಾಮಲಿಂಗ ಶ್ರೀ*
📞 – 9341137882, 9845763534.




