ಅಮಲಿನಲ್ಲಿ ತಪ್ಪಿದ ಹಾದಿ ಯುವತಿಯರೇ ಮೈಮೇಲೆ ಎಚ್ಚರಿಕೆ ಇರಲಿ
ದಿನಕ್ಕೊಂದು ಕಥೆ
ಅಮಲಿನಲ್ಲಿ ತಪ್ಪಿದ ಹಾದಿ
ಆಕೆ MBBS ವಿದ್ಯಾರ್ಥಿನಿ. ಆ ದಿನದ ತಡರಾತ್ರಿಯ ಬ್ಯಾಚುಲರ್ ಪಾರ್ಟಿಯಲ್ಲಿ ಮದ್ಯದ ಲಹರಿಯಲ್ಲಿ ತನ್ನ ಪ್ರಿಯಕರನ ಜೊತೆ ಯಾವುದೇ ಸುರಕ್ಷಾ ವಿಧಾನವನ್ನು ಬಳಸದೆ ಮಾಡಿದ ತಪ್ಪಿನಿಂದಾಗಿ ಆಕೆಯ ಹೊಟ್ಟೆಯಲ್ಲಿ ಮಾಂಸಪಿಂಡವೊಂದು ಬೆಳೆಯುತ್ತಿರುವುದು ಆಕೆಗೆ ಗೊತ್ತಾದಾಗ ತಡವಾಯಿತು.
ಅಬೋರ್ಷನ್ ಮಾಡಲು ಡಾಕ್ಟರ್ ಬಳಿ ಹೋದಾಗ ಆಕೆಯು ತುಂಬಾ ವೀಕ್ ಆಗಿದ್ದರಿಂದ ಆಕೆಗೆ ಜೀವಹಾನಿ ಸಂಭವಿಸಬಹುದು ಎಂದು ಡಾಕ್ಟರ್ ಹೇಳಿದಾಗ, ಆ ಮಗುವನ್ನು ಹೆರುವುದಲ್ಲದೇ ಬೇರೆ ದಾರಿಯಿರಲಿಲ್ಲ.
ಹೆತ್ತವರು ವಿದೇಶದಲ್ಲಿ ಇರುವ ಒಬ್ಬಾಕೆ ಗೆಳತಿಯ ಮನೆಯಲ್ಲಿ ಹಣೆಯ ಬಲಭಾಗದಲ್ಲಿ ದೊಡ್ಡ ಕಪ್ಪು ಮಚ್ಚೆಯಿರುವ ಒಂದು ಗಂಡು ಮಗುವಿಗೆ ಜನ್ಮನೀಡಿದಳು. ತನ್ನ ಅಂಗ ಸೌಂದರ್ಯವನ್ನು ಕೆಡಿಸಿದ ರಾಕ್ಷಸ ಮಗು. ಆಕೆ ಮನದೊಳಗೆ ಶಪಿಸಿದಳು.
ತನ್ನ ಪ್ರಸವ ವೇದನೆ ಆರುವುದಕ್ಕೆ ಮುಂಚೆಯೇ ತನ್ನ ಜೀವನವನ್ನು ಹಾಳು ಮಾಡಲು ಕಾರಣವಾದ ಆ ನವಜಾತ ಮಗುವನ್ನು ಎಲ್ಲಾದರೂ ಬಿಸಾಕಲು ಗೆಳತಿಯ ಕಾರಿನಲ್ಲಿ ನಗರವಿಡೀ ಸುತ್ತಾಡಿದಳು.
ಕೊನೆಗೆ ಒಂದು ಅನಾಥಾಶ್ರಮದ ಗೇಟಿನ ಬಳಿ ಆ ಮಗುವನ್ನು ಬಿಟ್ಟು ಹಿಂತಿರುಗಿದಳು. ಜನವರಿ ತಿಂಗಳ ಕೊರೆಯುವ ಚಳಿಯಲ್ಲಿ ಆ ಮಗು ಹಸಿವಿನಿಂದ ಅಳುತ್ತಿದ್ದಾಗಲೂ ಆಕೆಯ ಮನಸು ಕರಗದೆ ಒಮ್ಮೆ ಹಿಂತಿರುಗಿಯೂ ನೋಡದೆ ಅಲ್ಲಿಂದ ಜಾಗ ಖಾಲಿ ಮಾಡಿದಳು.
ಮುಂದೆ ಆಕೆಯ ಕೋರ್ಸ್ ಎಲ್ಲಾ ಮುಗಿದ ನಂತರ ಒಂದು ಡಾಕ್ಟರ್ ಜೊತೆ ಮದುವೆಯಾಗಿ ಮೂರು ಮಕ್ಕಳ ತಾಯಿಯಾದಳು. ಎರಡು ಗಂಡು ಒಂದು ಹೆಣ್ಣು. ಸುಖ ಸಂಸಾರವಾಗಿತ್ತು.
ನಿರೀಕ್ಷಿಸಿದ ಹಾಗೆಯೇ ಆ ಮಕ್ಕಳು ಕೂಡ ಕಲಿತು ಡಾಕ್ಟರ್ ಆದರು. ಅವರು ಕೂಡ ಮದುವೆಯಾದಾಗ ಇನ್ನಿಬ್ಬರು ಡಾಕ್ಟರ್ ಸೊಸೆಯಂದಿರು ಆ ಮನೆಗೆ ಅಥಿತಿಯಾಗಿ ಬಂದರು. ಮನೆಯಲ್ಲಿ ಸಂತೋಷದ ವಾತಾವರಣ. ಕಾಲಚಕ್ರ ಉರುಳತೊಡಗಿತ್ತು.
ಆ ಸಂತೋಷದ ದಿನಗಳು ಹೆಚ್ಚುಕಾಲ ಉಳಿಯಲಿಲ್ಲ.
ಆಕೆ ಮತ್ತು ಆಕೆಯ ಪತಿಯು ಡ್ಯೂಟಿ ಮುಗಿಸಿ ಬರುವಾಗ ಒಂದು ಅಪಘಾತದಲ್ಲಿ ಆಕೆಯ ಪತಿ ಸಾವನ್ನಪ್ಪಿದರು. ಆಕೆಯ ಕಾಲು ಮುರಿಯಿತು. ಆಕೆ ತನ್ನ ಮಕ್ಕಳಿಗೆ ಭಾರವಾಗತೊಡಗಿದಳು. ಆಕೆ ಮನೆಯ ಕತ್ತಲ ಕೋಣೆಯಲ್ಲಿ ಬಂಧಿಸಲ್ಪಟ್ಟಳು.
ಆಕೆಯ ಸಂಪಾದನೆ ಇಲ್ಲದಾದಾಗ ಮಕ್ಕಳ ಸ್ವಭಾವ ಕೂಡ ಬದಲಾಯಿತು. ಅಮ್ಮನ ಆರೈಕೆ ಮಾಡಲು ನಮ್ಮಿಂದ ಸಾಧ್ಯವಿಲ್ಲ ಅಂತ ಆ ಸೊಸೆಯಂದಿರು ಖಡಕ್ಕಾಗಿಯೇ ಹೇಳಿದರು.
ತಮ್ಮ ಪತಿಯಂದಿರು ಡ್ಯೂಟಿಗೆ ಹೋಗುವಾಗ ಮನೆಗೆ ಬರುವ ತಮ್ಮ ಪ್ರಿಯಕರರ ಜೊತೆ ಸಮಯವನ್ನು ಕಳೆಯಲು ಆ ತಾಯಿ ಅಡಚಣೆಯಾಯಿತು. ಆಕೆಯನ್ನು ಮಕ್ಕಳು ಮತ್ತು ಸೊಸೆಯಂದಿರು ಎಲ್ಲಾದರೂ ಬಿಟ್ಟು ಬರಲು ನಿರ್ದರಿಸಿದರು.
ರಾತ್ರಿ ಊಟದಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಕೊಡುತ್ತಾರೆ. ಗಾಡನಿದ್ದೆಯಲ್ಲಿದ್ದ ಆಕೆಯನ್ನು ಮಕ್ಕಳು ಮತ್ತು ಸೊಸೆಯರು ಒಂದು ಬಸ್ ಸ್ಟಾಪಿನ ಹಿಂದೆ ಇರುವ ಅಂಗಡಿಯ ಮುಂದೆ ಮಲಗಿಸಿ ಬರುತ್ತಾರೆ.
ಎಚ್ಚರವಾದಾಗ ತಾನು ಮನೆಯಲ್ಲಿ ಅಲ್ಲ ಮಲಗಿರುವುದು ಎಂಬ ಸತ್ಯವನ್ನು ಆಕೆಗೆ ನಂಬಲು ತುಂಬಾ ಸಮಯ ಬೇಕಾಯಿತು. ಬೀದಿನಾಯಿಗಳು ಆಕೆಯನ್ನು ದುರುಗುಟ್ಟಿ ನೋಡುತ್ತಿದ್ದವು.
ಆಕೆ ಮೊದಲ ಬಾರಿ ಆಕೆಯ ಮೊದಲ ಮಗುವಿನ ಬಗ್ಗೆ ನೆನೆದು ಕಣ್ಣೀರಿಟ್ಟಳು. ಆ ನವಜಾತ ಮಗುವನ್ನು ನಾನು ಬೀದಿಯಲ್ಲಿ ಬಿಸಾಕಿದಾಗ ಹೀಗೇ ಬೀದಿನಾಯಿಗಳು ಕಚ್ಚಿ ತಿಂದಿರಬಹುದೇ? ಓ ದೇವರೇ ನನ್ನ ಮಗನನ್ನು ಚೆನ್ನಾಗಿಡು.
ಮೊದಲ ಬಾರಿ ಆಕೆ ಆ ಮಗನಿಗಾಗಿ ದೇವರಲ್ಲಿ ಬೇಡಿಕೊಂಡಳು. ಎಲ್ಲವನ್ನೂ ನೆನೆದು ಪ್ರಜ್ಞೆ ತಪ್ಪಿ ಅಲ್ಲೇ ಕುಸಿದು ಬಿದ್ದು ಬಿಟ್ಟಳು. ಪುನಃ ಎಚ್ಚರವಾದಾಗ ವೃದ್ದಾಶ್ರಮ ಒಂದರ ಬೆಡ್ ಮೇಲೆ ಮಲಗಿದ್ದಳು. ಪಕ್ಕದಲ್ಲಿ ತನ್ನ ವಯಸಿನ ಹಲವರು ತಾಯಂದಿರು.
ಅಷ್ಟರಲ್ಲಿ ಒಬ್ಬ ಯುವಕ ಎಲ್ಲಿ ನನ್ನ ಹೊಸ ಅಮ್ಮ ಅಂತ ಕೇಳುತ್ತಾ ಅಲ್ಲಿಗೆ ಬರುತ್ತಾನೆ. ತಾವು ಡಾಕ್ಟರ್ ಅಲ್ಲವೇ? ಹೌದು ಎಂಬಂತೆ ಆಕೆ ತಲೆ ಆಡಿಸಿದಳು. ಏನೂ ಚಿಂತೆ ಮಾಡಬೇಡಿ ಬೇಗ ಗುಣಮುಖರಾಗಿ ಈ ಬಡ ತಾಯಂದಿರಿಗೆ ನೀವೇ ಚಿಕಿತ್ಸೆ ಮಾಡಬೇಕು.
ಆತ ಮುಂದುವರಿಸುತ್ತಾ – ಹೆತ್ತು ಹೊತ್ತು ಸಾಕಿ ಸಲಹಿದ ಮಕ್ಕಳಿಗೆ ತಾಯಂದಿರು ಭಾರವಾಗಿ ಬೀದಿಯಲ್ಲಿ ಬಿಸಾಕಿದ ತಾಯಂದಿರನ್ನು ಕರೆತಂದು ಅವರ ಸಂತೋಷದಲ್ಲಿ ಖುಷಿಯನ್ನು ಕಾಣುತ್ತೇನೆ. ಒಬ್ಬ ಮಗನಿಗೆ ಒಬ್ಬಳು ತಾಯಿಯ ಮಮತೆಯನ್ನು ಅನುಭವಿಸಬಹುದು. ಆದರೆ ನನಗೆ ಈ ಎಲ್ಲಾ ತಾಯಂದಿರ ಪ್ರೀತಿ ಮಮತೆ ಸಿಗುತ್ತಿರುವ ನಾನು ಅದೃಷ್ಟವಂತ.
ನನಗೂ ತಾಯಿಯಿದ್ದಾಳೆ ಎಲ್ಲಿದ್ದಾಳೆ ಅಂತ ಗೊತ್ತಿಲ್ಲ. ತನ್ನ ಶರ್ಟಿನ ಬಟನನ್ನು ತೆಗೆದು ಕೈಯ ತೋಳಿನ ಭಾಗದಲ್ಲಿ ಆದ ಗಾಯವನ್ನು ತೋರಿಸುತ್ತಾ – ಅಂದು ನನ್ನ ತಾಯಿ ನನ್ನನ್ನು ಬೀದಿಯಲ್ಲಿ ಬಿಸಾಕಿದಾಗ ಬೀದಿ ನಾಯಿಗಳು ಕಚ್ಚಿದ್ದು.
ನನಗೆ ಆಕೆಯ ಮೇಲೆ ದ್ವೇಷವಿಲ್ಲ. ಆಕೆಯನ್ನು ಒಮ್ಮೆ ನೋಡಬೇಕು, ಒಮ್ಮೆ ಮುದ್ದಿಸಬೇಕು, ಆಕೆಯ ಮಡಿಲಲ್ಲಿ ಮಲಗಿ ಕೇಳಬೇಕು ನಾನು ನಿಮಗೆ ಯಾಕೆ ಬೇಡವಾದೆ ಅಂತ. ಆತನ ಕಣ್ಣುಗಳು ತುಂಬಿದವು.
ಆಕೆಗೆ ಆಕಾಶವೇ ತನ್ನ ತಲೆಯಮೇಲೆ ಕಳಚಿ ಬೀಳುವ ಅನುಭವವಾಯಿತು. ಆಕೆ ನೋಡಿದಳು ಆ ಯುವಕನ ಹಣೆಯ ಬಲಭಾಗದಲ್ಲಿ ದೊಡ್ಡ ಕಪ್ಪು ಮಚ್ಚೆ……! ಓ ದೇವರೇ ನನ್ನ ಮಗ…….!!
ಮದುವೆಗೂ ಮುಂಚೆ ಪ್ರಿಯಕರನ ಮುಂದೆ ವಿವಸ್ತ್ರರಾಗುವ ಹೆಣ್ಣು ಮಕ್ಕಳಿಗೆ ಈ ಚಿಕ್ಕ ಕಥೆಯನ್ನು ಅರ್ಪಿಸುವೆ. ಮಾಡುವ ತಪ್ಪಿಗೆ ಕಾಲವೇ ಉತ್ತರಿಸುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882