ನಮ್ಮೂರ ಸಾಲಿ ಅಂದ್ರ ನಮ್ಮೂರ ಗುಡಿ ಇದ್ದಂಗಾ.!
ದಿನಕ್ಕೊಂದು ಕಥೆ
ನಮ್ಮೂರ ಸಾಲಿ ಅಂದ್ರ ನಮ್ಮೂರ ಗುಡಿ ಇದ್ದಂಗಾ!
ಒಮ್ಮೆ ಬೆಂಗಳೂರಿನ ಮ್ಯಾನೇಜ್ವೆುಂಟ್ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ಪ್ರವಾಸ ಮಾಡುತ್ತಿದ್ದರು. ರಸ್ತೆ ಮಾರ್ಗದಲ್ಲಿ ಹೋಗಬೇಕಾದರೆ ಹಳ್ಳಿಯೊಂದರಲ್ಲಿ ರೈತನೊಬ್ಬ ಎರಡು ಎತ್ತುಗಳನ್ನು ಕಟ್ಟಿ ಗಾಣದಿಂದ ಎಣ್ಣೆ ತೆಗೆಯುತ್ತಿದ್ದುದನ್ನು ಗಮನಿಸಿದರು. ಮೊದಲ ಬಾರಿ ಗಾಣವನ್ನು ಕಂಡ ವಿದ್ಯಾರ್ಥಿಗಳು ವಾಹನ ನಿಲ್ಲಿಸಿ ಗಾಣ ತಿರುಗುತ್ತಿರುವ ಹೊಲದ ಹತ್ತಿರ ಹೋದರು.
ಆ ರೈತ ಗಾಣದಿಂದ ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿದ್ದ. ಎತ್ತುಗಳು ತಮ್ಮಷ್ಟಕ್ಕೆ ತಿರುಗುತ್ತಿದ್ದವು, ಗಾಣದಿಂದ ಎಣ್ಣೆ ಹನಿಯುತ್ತಿತ್ತು. ಅದನ್ನು ಕಂಡು ಕುತೂಹಲಗೊಂಡ ವಿದ್ಯಾರ್ಥಿಗಳು ರೈತನನ್ನು ಮಾತಿಗೆ ಎಳೆದರು. ‘ನೀವು ಗಾಣಕ್ಕೆ ಎತ್ತುಗಳನ್ನು ಕಟ್ಟಿ ನಿಮ್ಮಷ್ಟಕ್ಕೆ ನೀವು ಹೊಲದಲ್ಲಿ ಕೆಲಸ ಮಾಡುತ್ತಿದ್ದೀರಿ, ಎತ್ತುಗಳು ಗಾಣವನ್ನ ತಿರುಗಿಸದೆ ಹಾಗೇ ನಿಂತುಬಿಟ್ಟರೆ ಏನುಮಾಡುತ್ತೀರಿ?’. ರೈತ ಉತ್ತರ ಕೊಟ್ಟ- ‘ಅದಕ್ಕಾಗಿಯೇ ಎತ್ತುಗಳ ಕೊರಳಿಗೆ ಗಂಟೆ ಕಟ್ಟಿರುವುದು; ಗಂಟೆಯ ಶಬ್ದ ನಿಂತಿತು ಅಂದರೆ ಎತ್ತುಗಳು ನಿಂತಿವೆ ಎಂದು ತಿಳಿಯುತ್ತದೆ,
ನಾನು ಹೋಗಿ ಎತ್ತುಗಳನ್ನು ಹೊಡೆದು ನನ್ನ ಕೆಲಸದಲ್ಲಿ ತೊಡಗುತ್ತೇನೆ’. ವಿದ್ಯಾರ್ಥಿಗಳ ತಂಡದಲ್ಲಿದ್ದ ಬುದ್ಧಿವಂತ ವಿದ್ಯಾರ್ಥಿಯೊಬ್ಬ ರೈತನಿಗೆ ಕೇಳಿದ, ‘ಗಂಟೆ ಶಬ್ದ ಕೇಳುತ್ತಿದ್ದರೆ ಎತ್ತುಗಳು ಗಾಣ ತಿರುಗಿಸುತ್ತಿವೆ ಎಂಬುದು ನಿಮಗೆ ತಿಳಿಯುತ್ತದೆ;
ಒಂದು ವೇಳೆ ಎತ್ತುಗಳು ಗಾಣವನ್ನು ತಿರುಗಿಸದೆ ನಿಂತಲ್ಲಿಯೇ ಕೊರಳನ್ನು ಅಲ್ಲಾಡಿಸಿ ಗಂಟೆ ಶಬ್ದ ಮಾಡುತ್ತಿದ್ದರೆ ಏನು ಮಾಡುತ್ತೀರಿ?’. ಆಗ ರೈತ, ‘ಹಾಗೆ ಮಾಡಲು ನಮ್ಮ ಎತ್ತುಗಳು ಕಾಲೇಜು ಕಲಿತಿಲ್ಲ’ ಅಂದನಂತೆ. ಇದೊಂದು ತಮಾಷೆ ವಿಷಯ ಅನ್ನಿಸಿಬಿಡುತ್ತದೆ.
ಇಂದಿನ ಶಿಕ್ಷಣದ ಪರಿಣಾಮ ಇದು. ಧಾರವಾಡ ಜಿಲ್ಲೆಯ ಗ್ರಾಮೀಣ ಸರ್ಕಾರಿ ಶಾಲೆಗಳ ವಾತಾವರಣ ಸುಧಾರಿಸುವ ದೃಷ್ಟಿಯಿಂದ ‘ಸ್ಕೂಲ್ ಎಜುಕೇಷನ್ ಪ್ರೋಗ್ರಾಂ’, ತಂತ್ರಜ್ಞಾನದ ಮೂಲಕ ಮಕ್ಕಳು ಕಲಿಯಬಹುದಾದ ಪ್ರಕಲ್ಪ ಹಾಗೂ ನೀರು, ನೈರ್ಮಲ್ಯ, ಶುಚಿತ್ವದ ಕುರಿತು ಶಾಲಾಮಕ್ಕಳಲ್ಲಿ ಜಾಗೃತಿ ಮೂಡಿಸುವ ಯೋಜನೆಯೊಂದನ್ನು ‘ಸ್ವಾಮಿ ವಿವೇಕಾನಂದ ಯೂತ್ ಮೂವ್ವೆುಂಟ್’ ಸ್ವಯಂಸೇವಾಸಂಸ್ಥೆ ಕೈಗೆತ್ತಿಕೊಂಡಿದೆ. ಇದರ ಅಂಗವಾಗಿ ಹಲವು ಗ್ರಾಮಾಂತರ ಶಾಲೆಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಶಿಕ್ಷಕರು, ಶಾಲಾ ಸಿಬ್ಬಂದಿ, ಮಕ್ಕಳೊಂದಿಗೆ ಸಮಾಲೋಚಿಸಿದಾಗ ಹಲವು ಕುತೂಹಲಕರ ಹಾಗೂ ಪ್ರೇರಣೆ ನೀಡುವ ಅನುಭವ ನಮಗಾಗಿದೆ.
ಧಾರವಾಡ ಜಿಲ್ಲೆಯ ಕೋಟೂರು ಸರ್ಕಾರಿ ಶಾಲೆಗೆ ಇತ್ತೀಚೆಗೆ ಭೇಟಿಕೊಟ್ಟಿದ್ದೆ. ಅದರ ಆವರಣ ಪ್ರವೇಶಿಸುತ್ತಿದ್ದಂತೆ ವಾತಾವರಣ ಎಷ್ಟೊಂದು ಸ್ವಚ್ಛವಾಗಿದೆ ಎನ್ನಿಸಿತು. ‘ಇಂದು ನಾವು ಶಾಲೆಗೆ ಬರುತ್ತೇವೆ ಎಂದು ಆವರಣವನ್ನು ಇಷ್ಟು ಸ್ವಚ್ಛ ಮಾಡಲಾಗಿದೆಯೆ?’ ಎಂದು ಅಲ್ಲಿಯ ಸಿಬ್ಬಂದಿಯನ್ನು ವಿಚಾರಿಸಿದೆ.
‘ಹಾಗೇನಿಲ್ಲ, ಪ್ರತಿನಿತ್ಯ ಇಷ್ಟೇ ಸ್ವಚ್ಛವಾಗಿರುತ್ತದೆ; ಶಾಲೆಗೆ ಭೂಮಿದಾನ ಮಾಡಿದ ದಾನಿಗಳ ಹೊಲ ಶಾಲೆಯ ಪಕ್ಕದಲ್ಲೆ ಇದೆ. ಅದನ್ನು ನೋಡಿಕೊಳ್ಳುವ ಮಹದೇವಪ್ಪ ದಂಪತಿ ಪ್ರತಿನಿತ್ಯ ಶಾಲೆಯ ಆವರಣ ಸ್ವಚ್ಛಗೊಳಿಸುತ್ತಾರೆ ಎಂದು ವಿವರಿಸಿದರು. ಕುತೂಹಲಗೊಂಡ ನಾನು ಹತ್ತಿರದಲ್ಲೇ ದನ ಮೇಯಿಸುತ್ತಿದ್ದ ಮಹದೇವಪ್ಪನವರ ಬಳಿ ತೆರಳಿ ಮಾತನಾಡಿಸಿದೆ.
‘ಮಹದೇವಪ್ಪ, ಶಾಲೆಯ ಆವರಣ ಇಷ್ಟು ಚೆನ್ನಾಗಿ ಸ್ವಚ್ಛಗೊಳಿಸಿದ್ದೀರಿ, ನಿಮಗೆ ಅದಕ್ಕೇನೂ ಸಂಬಳ ಕೊಡುವುದಿಲ. ಆದರೂ ನಿತ್ಯ ಸ್ವಚ್ಛಗೊಳಿಸುತ್ತೀರಿ ಎಂದು ತಿಳಿಯಿತು. ಶಾಲೆಯ ಬಗ್ಗೆ ನಿಮಗೇಕಿಂಥ ಆಸಕ್ತಿ?’ ಎಂದು ಕೇಳಿದೆ. ‘ಸರ, ನಮ್ಮೂರ ಸಾಲಿ ಅಂದ್ರ ನಮ್ಮೂರ ಗುಡಿ ಇದ್ದಂಗಾ!’ ಎಂದು ಆತ ನೀಡಿದ ಉತ್ತರ ಒಂದು ಕ್ಷಣ ನನ್ನಲ್ಲಿ ಬೆರಗು ಮೂಡಿಸಿತು! ಮರುಪ್ರಶ್ನೆ ಮಾಡಿದೆ- ‘ಏನು ಓದಿದ್ದೀರಿ?’. ‘ನಾಲ್ಕನೇ ಕ್ಲಾಸ್ ಓದೀನೀ’ ಅಂದರು ಮಹದೇವಪ್ಪ.
ನಾಲ್ಕನೇ ತರಗತಿ ಓದಿದ ಇವರಿಗೆ ತಮ್ಮೂರ ಶಾಲೆ ಗುಡಿ ಇದ್ದಂಗೆ, ಸ್ವಚ್ಛವಾಗಿಟ್ಟುಕೊಳ್ಳಬೇಕು ಅನಿಸುತ್ತೆ. ಡಿಗ್ರಿ, ಮಾಸ್ಟರ್ ಡಿಗ್ರಿ, ಪಿಎಚ್.ಡಿ ಮಾಡಿದವರಿಗೆ ‘ಗಾಣಕ್ಕೆ ಕಟ್ಟಿದ ಎತ್ತು ನಿಂತಲ್ಲೆ ನಿಂತು ಕೊರಳು ಅಲ್ಲಾಡಿಸಿ ಗಂಟೆ ಶಬ್ದ ಮಾಡಿದರೆ…?’ ಅನ್ನುವ ಯೋಚನೆ ಬರುತ್ತದಲ್ಲ ಅನ್ನಿಸಿ, ‘ನಿಜವಾದ ಶಿಕ್ಷಣ ಅಂದ್ರೆ ಏನು?’ ಎಂಬ ಪ್ರಶ್ನೆ ಮನಸ್ಸಿನಲ್ಲೇ ಎದ್ದಿತ್ತು! ಇತ್ತೀಚೆಗೆ ಆ ಶಾಲೆಯಲ್ಲಿ ‘ಸ್ಕೂಲ್ ಎಜುಕೇಷನ್ ಪ್ರೋಗ್ರಾಂ’ನ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಮಹದೇವಪ್ಪ ದಂಪತಿಯನ್ನು ವೇದಿಕೆ ಮೇಲೆ ಕರೆದು ‘ಸ್ವಾಮಿ ವಿವೇಕಾನಂದ ಯೂತ್ ಮೂವ್ವೆುಂಟ್’ ಸಂಸ್ಥೆ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಶಾಲೆಯಲ್ಲಿ ಉತ್ತಮ ಫಲಿತಾಂಶ ಬಂದಾಗ ಶಿಕ್ಷಕರನ್ನು, ಉತ್ತಮ ಅಂಕ ಪಡೆದಾಗ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಆದರೆ ದಿನನಿತ್ಯ ಶಾಲೆಯ ವಾತಾವರಣವನ್ನು ಸ್ವಚ್ಛವಾಗಿಡುವ ಮಹದೇವಪ್ಪರಂಥವರನ್ನು ಯಾರೂ ಗುರುತಿಸುವುದಿಲ್ಲ.
ಸ್ವಾಮಿ ವಿವೇಕಾನಂದ ಯೂತ್ ಮೂವ್ವೆುಂಟ್ ಅವರನ್ನು ಗುರುತಿಸಿ ಸನ್ಮಾನಿಸಿದಾಗ ಆ ದಂಪತಿ ಭಾವುಕರಾಗಿದ್ದು ಮಾತ್ರವಲ್ಲ, ಅಲ್ಲಿದ್ದ ಹಲವರಿಗೆ ‘ಹೌದಲ್ಲ, ನಾವು ಇಷ್ಟುದಿನ ಇವರನ್ನು ಗುರುತಿಸಲೇ ಇಲ್ಲವಲ್ಲ’ ಎಂಬ ಪಾಪಪ್ರಜ್ಞೆ ಕಾಡಿರಲೂಬಹುದು! ಈ ಶಾಲೆಗೆ ಭೂದಾನ ಮಾಡಿದವರ ಬಗ್ಗೆ ಕೂಡ ಬರೆಯಲೇಬೇಕು. ಈ ಶಾಲೆ ಇರುವುದು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ಧಾರವಾಡ ಹೈಕೋರ್ಟ್ಪೀಠದಿಂದ ಐದಾರು ಕಿ.ಮೀ. ದೂರದಲ್ಲಿ. ಧಾರವಾಡದಲ್ಲಿ ಹೈಕೋರ್ಟ್ಪೀಠ ಸ್ಥಾಪನೆ ಆಗುತ್ತದೆಂಬ ಸೂಚನೆ ಸಿಕ್ಕಾಗ ಭೂಮಿಯ ಬೆಲೆ ಗಗನಕ್ಕೆ ಏರಿತು.
ಅದರ ಮುನ್ಸೂಚನೆ ಅರಿತ ಹಲವರು ಮೊದಲೇ ರೈತರಿಂದ ಲಕ್ಷದ ಬೆಲೆಯಲ್ಲಿ ಭೂಮಿ ಖರೀದಿಸಿ 4-5 ವರ್ಷ ಅವಧಿಯಲ್ಲಿ ಕೋಟ್ಯಂತರ ರೂಪಾಯಿಗಳಿಗೆ ಮಾರಾಟ ಮಾಡಿ 8-10 ಪಟ್ಟು ಹೆಚ್ಚು ಲಾಭ ಗಳಿಸಿದ್ದಾರೆ. ಈ ಶಾಲೆಗೆ ಭೂಮಿದಾನ ಮಾಡಿದ ಯಲ್ಲಪ್ಪಗೌಡ ಮರಿಗೌಡರ ಕೂಡ ವ್ಯಾವಹಾರಿಕ ದೃಷ್ಟಿಯಲ್ಲೇ ಯೋಚಿಸಿದ್ದರೆ ಇಂದು ಈ ಊರಿನಲ್ಲಿ ಸರ್ಕಾರಿ ಶಾಲೆಯೊಂದು ತಲೆಯೆತ್ತಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ! ಎಷ್ಟಿದ್ದರೂ ಸಾಲದೆಂಬ ಪ್ರವೃತ್ತಿ ಬೆಳೆಯುತ್ತಿರುವ ಇಂದಿನ ಕಾಲದಲ್ಲಿ ಸರ್ಕಾರಿ ಶಾಲೆಗಾಗಿ ಭೂಮಿದಾನ ಮಾಡಿದ ಯಲ್ಲಪ್ಪಗೌಡ ಮರಿಗೌಡರಂತಹ ದಾನಿಗಳೂ ಇದ್ದಾರಲ್ಲ ಎಂಬುದೇ ಸಮಾಧನದ ಸಂಗತಿ.
ನಾಲ್ಕನೇ ತರಗತಿಯವರೆಗಷ್ಟೇ ಓದಿ ಶಾಲೆಯನ್ನೇ ಗುಡಿ ಎನ್ನುವ ಮಹದೇವಪ್ಪ, ಸ್ವಾರ್ಥವನ್ನೆಲ್ಲ ಮರೆತು ಮುಂದಿನ ಎಷ್ಟೋ ತಲೆಮಾರಿಗಾಗಿ ತಮ್ಮದೇ ಭೂಮಿಯನ್ನು ದಾನಮಾಡಿದ ಯಲ್ಲಪ್ಪಗೌಡ ಮರಿಗೌಡ ಅವರನ್ನು ಕಂಡಾಗ ಹಾಗೂ ಮ್ಯಾನೇಜ್ವೆುಂಟ್ ವಿದ್ಯಾರ್ಥಿಗಳಿಗೆ ಗಾಣಕ್ಕೆ ಕಟ್ಟಿದ ಎತ್ತು ಕೊರಳಾಡಿಸುತ್ತ ಗಂಟೆ ಶಬ್ದ ಮಾಡುತ್ತಿದ್ದರೆ ಎನ್ನುವ ಪ್ರಶ್ನೆ ಕಾಡಿದಾಗ ನನ್ನ ಮನಸ್ಸಿನಲ್ಲಿ ಬಂದ ಪ್ರಶ್ನೆ… ನಿಜವಾಗಿಯೂ ಅನಕ್ಷರಸ್ಥರು ಯಾರು?!
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882