ನಿಜವಾದ ಸಂಬಂಧಗಳು ಅದ್ಭುತ ಕಥೆ ಇದನ್ನೋದಿ
ನಿಜವಾದ ಸಂಬಂಧಗಳು
ಹಿಮಾಲಯದ ತಪ್ಪಲಿನಲ್ಲಿ ಇದ್ದದ್ದು ಪಾಂಚಗಾವ. ಅದೊಂದು ಪುಟ್ಟ ಹಳ್ಳಿ. ಅಲ್ಲಿ ಗೋವರ್ಧನದಾಸ ಒಂದು ಕಿರಾಣಿ ಸಾಮಾನುಗಳ ಅಂಗಡಿ ಇಟ್ಟುಕೊಂಡು ಸಂಸಾರ ನಡೆಸುತ್ತಿದ್ದ. ಅವನ ಸೋದರಳಿಯ ಸುಂದರ ಕೆಲಸದಲ್ಲಿ ಸಹಾಯಕನಾಗಿದ್ದ.
ಒಂದು ದಿನ ಸಂಜೆ ಗೋವರ್ಧನದಾಸ ಮನೆಗೆ ಬರುತ್ತಿದ್ದಾಗ ಮನೆಯ ಮುಂದೆ ಕಟ್ಟೆಯ ಮೇಲೆ ಏನೋ ಬಿದ್ದಂತೆ ಕಂಡಿತು. ಹತ್ತಿರ ಹೋಗಿ ನೋಡಿದರೆ ಅದೊಂದು ರಣಹದ್ದು. ಅದು ಹಾರಲು ಪ್ರಯತ್ನಿಸುತ್ತಿದೆ. ಆದರೆ, ಹಾರಲಾಗುತ್ತಿಲ್ಲ. ಅದರ ಕಾಲಿಗೇನೋ ಪೆಟ್ಟಾಗಿರಬೇಕು. ಹೊರಗೆ ವಿಪರೀತ ಚಳಿ ಬೇರೆ. ಅದು ಗಡಗಡನೆ ನಡುಗುತ್ತಿದೆ.
ರಾತ್ರಿಯೆಲ್ಲ ಹೀಗೆಯೇ ಚಳಿಯಲ್ಲಿ ಬಿದ್ದಿದ್ದರೆ ಅದು ಸತ್ತೇ ಹೋಗುತ್ತದೆ ಎನ್ನಿಸಿತು. ಗೋವರ್ಧನದಾಸ ಕರುಣೆಯಿಂದ ಆ ರಣಹದ್ದನ್ನು ನಿಧಾನವಾಗಿ ಎತ್ತಿಕೊಂಡು ಮನೆಯೊಳಗೆ ಕರೆದೊಯ್ದ. ಪಡಸಾಲೆಯ ಮೂಲೆಯಲ್ಲಿ ಮಲಗಿಸಿದ. ದೂರದಲ್ಲಿ ಸ್ವಲ್ಪ ಬೆಂಕಿ ಹಾಕಿ ಬೆಚ್ಚಗೆ ಮಾಡಿದ.
ಅದಕ್ಕೊಂದಿಷ್ಟು ಆಹಾರ ತಂದು ಹಾಕಿದ. ಎರಡು ದಿನಗಳಲ್ಲಿ ರಣಹದ್ದು ಸರಿಯಾಯಿತು. ಗರಿಗೆದರಿ ಹಾರಿ ಹೋಗಿಬಿಟ್ಟಿತು. ಗೋವರ್ಧನದಾಸನಿಗೆ ಸಂತೋಷ.
ರಣಹದ್ದು ಹಾರಿ ತನ್ನ ಮನೆಗೆ ಹೋಗಿ ತನ್ನ ಬಾಂಧವರನ್ನೆಲ್ಲ ಕರೆದು ಸೇರಿಸಿತು. ಅವರಿಗೆಲ್ಲ ಗೋವರ್ಧನದಾಸ ಮಾಡಿದ ಉಪಕಾರವನ್ನು ತಿಳಿಸಿ ಆತನಿಗೆ ತಾವೆಲ್ಲ ಸೇರಿ ಹೇಗಾದರೂ ಮಾಡಿ ಕೃತಜ್ಞತೆ ತೀರಿಸಬೇಕು ಎಂದಿತು.
ಆಗ ಮತ್ತೊಂದು ರಣಹದ್ದು ಸಲಹೆ ನೀಡಿತು. ‘ನಾವು ಅಲ್ಲಲ್ಲಿ ಹಾರಾಡುವಾಗ ಯಾವುದಾದರೂ ಬೆಲೆಬಾಳುವ ವಸ್ತು ಕಣ್ಣಿಗೆ ಬಿದ್ದರೆ ಅದನ್ನು ಎತ್ತಿಕೊಂಡು ಹೋಗಿ ಗೋವರ್ಧನದಾಸನ ಮನೆಯ ಅಂಗಳದಲ್ಲಿ ಹಾಕಿ ಬಂದು ಬಿಡೋಣ’. ಎಲ್ಲ ರಣಹದ್ದುಗಳು ಅದನ್ನೇ ಸರಿ ಎಂದವು.
ಮರುದಿನದಿಂದ ಈ ಹದ್ದುಗಳು ಎಲ್ಲ ಕಡೆಗೆ ಹಾರಾಡುತ್ತ, ಎಲ್ಲೆಲ್ಲಿ ಆಭರಣಗಳು ಕಂಡವೋ, ಬೆಲೆಬಾಳುವ ಬಟ್ಟೆಗಳು ಕಂಡವೋ ಅವನ್ನೆಲ್ಲ ಸರಕ್ಕನೇ ಹಾರಿ ಕೆಳಗೆ ಬಂದು ಎತ್ತಿಕೊಂಡು ಗೋವರ್ಧನ ದಾಸನ ಮನೆಯ ಅಂಗಳಕ್ಕೆ ಹಾಕಿ ಹೋಗತೊಡಗಿದವು. ಗೋವರ್ಧನದಾಸನಿಗೆ ಆಶ್ಚರ್ಯ ಹಾಗೂ ಭಯ. ಅವು ಯಾರ ವಸ್ತುಗಳೋ ತಿಳಿಯದು.
ಅವನು ಪ್ರಾಮಾಣಿಕನಾದ್ದರಿಂದ ಅವೆಲ್ಲ ವಸ್ತುಗಳನ್ನು ಬೇರೆಯಾಗಿಯೇ ತೆಗೆದಿಟ್ಟ. ಅವನ ಸೋದರಳಿಯ ಸುಂದರ ಮಾವ ಮನೆಯಲ್ಲಿ ಇಲ್ಲದಿದ್ದಾಗ ಬಿದ್ದ ವಸ್ತುಗಳನ್ನು ತಾನೇ ಎತ್ತಿ ಬಳಸಿಕೊಳ್ಳುತ್ತಿದ್ದ.
ಅನೇಕ ಜನ ನಾಗರಿಕರು ತಮ್ಮ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡವರು ಹೋಗಿ ರಾಜನಿಗೆ ದೂರು ಕೊಟ್ಟರು. ರಾಜ ತನ್ನ ದೂತರಿಗೆ ಹೇಳಿ ರಣಹದ್ದುಗಳ ಹಾರಾಟದ ಬಗ್ಗೆ ಗಮನವಿಡುವಂತೆ ಸೂಚಿಸಿದ. ಸುಂದರನಿಗೆ ದುರಾಸೆ ಬಂದಿತು.
ತಾನೇ ಹೋಗಿ ರಾಜನಿಗೆ ತನ್ನ ಮಾವನೇ ಎಲ್ಲ ವಸ್ತುಗಳನ್ನು ಹೊಡೆದಿದ್ದಾನೆ ಎಂದು ತಿಳಿಸಿದರೆ ಅವನನ್ನು ರಾಜದೂತರು ಬಂಧಿಸುತ್ತಾರೆ. ಆಗ ಅವನು ಕೂಡಿಹಾಕಿದ್ದ ವಸ್ತುಗಳೆಲ್ಲ ತನ್ನವೇ ಆಗುತ್ತವೆ ಎಂದುಕೊಂಡು ದೂರು ಕೊಟ್ಟ.
ರಾಜದೂತರು ಗೋವರ್ಧನದಾಸನನ್ನು ಬಂಧಿಸಿ ಕರೆದೊಯ್ದರು. ಗೋವರ್ಧನದಾಸ ರಾಜನ ಮುಂದೆ ನಡೆದದ್ದನ್ನೆಲ್ಲ ವಿವರವಾಗಿ ತಿಳಿಸಿ ತನಗೆ ದೊರೆತ ಎಲ್ಲ ವಸ್ತುಗಳನ್ನು ಒಪ್ಪಿಸಿದ. ಕಳೆದುಕೊಂಡಿದ್ದ ಜನ ಬಂದು ತಮ್ಮ ತಮ್ಮ ವಸ್ತುಗಳನ್ನು ಪಡೆದು ಹೋದರು. ಕೆಲವರ ವಸ್ತುಗಳು ಮಾತ್ರ ಸಿಗಲೇ ಇಲ್ಲ. ಯಾಕೆಂದರೆ ಅವುಗಳನ್ನು ಸುಂದರ ಹೊಡೆದಿದ್ದ.
ಇಷ್ಟೆಲ್ಲಾ ವಸ್ತುಗಳನ್ನೂ ಪ್ರಾಮಾಣಿಕವಾಗಿ ಮರಳಿಸಿದ ದಾಸ ಕೆಲವನ್ನೇ ಯಾಕೆ ಇಟ್ಟುಕೊಂಡಿರಬೇಕು ಎಂದು ಸಂಶಯದಿಂದ ದೂತರಿಗೆ ಸೂಚನೆ ಕೊಟ್ಟಾಗ ಅವರು ಸುಂದರನಿಗೆ ತಿಳಿಯದಂತೆ ಅವನನ್ನು ಹಿಂಬಾಲಿಸಿ ಆ ವಸ್ತುಗಳನ್ನು ವಶಪಡಿಸಿಕೊಂಡು ಅವನನ್ನು ಬಂಧಿಸಿದರು.
ಗೋವರ್ಧನದಾಸನಿಗೆ ತುಂಬಾ ದುಃಖವಾಯಿತು. ರಣಹದ್ದುಗಳಿಗಿದ್ದ ಕೃತಜ್ಞತೆ ಮನುಷ್ಯನಾದ, ಅಳಿಯನಾದ ಸುಂದರನಿಗೆ ಇಲ್ಲದೇ ಹೋಯಿತಲ್ಲ ಎಂದು ಸಂಕಟಪಟ್ಟ.
ನಮ್ಮ ಬದುಕಿನಲ್ಲಿ ಅನೇಕ ಬಾರಿ ಹಾಗೆ ಆಗಿದ್ದು ಉಂಟಲ್ಲವೇ? ಸಂಬಂಧವೇ ಇಲ್ಲದವರು, ಸಂಬಂಧದಲ್ಲಿ ಅತ್ಯಂತ ದೂರವಾದವರು ಅನಿರೀಕ್ಷಿತವಾಗಿ, ಅನಪೇಕ್ಷಿತವಾಗಿ ಸಹಾಯ ಮಾಡುತ್ತಾರೆ.
ಆದರೆ, ಅತ್ಯಂತ ಹತ್ತಿರದ ರಕ್ತ ಸಂಬಂಧಿಗಳೇ ನಮ್ಮ ಬುಡಕ್ಕೆ ಕತ್ತರಿ ಇಡುತ್ತಾರೆ. ನಿಜವಾದ ಸಂಬಂಧ ಈ ಆತ್ಮೀಯತೆಯ ಬಂಧವೇ. ತೋರಿಕೆಯ ಸಂಬಂಧಗಳಿಗಿಂತ ನಮ್ಮ ಹೃದಯದ ಭಾವನೆಗಳಿಗೆ ಸಂವಾದಿಯಾಗುವ ಪರಿಚಯವಿಲ್ಲದ ಜನ, ಪಶು ಪಕ್ಷಿಗಳು ಎಷ್ಟೋ ಪಾಲು ಮೇಲು ಎನ್ನಿಸುತ್ತದೆ.ನೀವೇನಂತಿರಿ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882