ಕಲೆ, ಸಂಸ್ಕೃತಿ, ಸಿನಿಮಾ, ನಾಟಕಗಳಿಂದ ಮನಸ್ಸು ಅರಳಲಿದೆಃ ಉಪಾಸೆ
ಯಾದಗಿರಿಃ ವಾರ್ತಾ ಇಲಾಖೆ ಆಯೋಜಿಸಿರುವ ಚಿತ್ರೋತ್ಸವ ಸಪ್ತಾಹಕ್ಕೆ ಚಾಲನೆ
ಯಾದಗಿರಿ: ಕಲೆ, ಸಂಸ್ಕೃತಿ, ಸಿನಿಮಾ, ನಾಟಕ ಇವೆಲ್ಲಾ ಮನಸ್ಸನ್ನು ಅರಳಿಸಲಿವೆ ಎಂದು ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಅವರು ಅಭಿಪ್ರಾಯಪಟ್ಟರು.
ನಗರದ ಸ್ವಪ್ನ ( ಸಪ್ನಾ) ಚಿತ್ರ ಮಂದಿರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಲನ ಚಿತ್ರಗಳ ಚಿತ್ರೋತ್ಸವ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನ ನೋವು-ಸಂಕಟಗಳನ್ನು ಹೋಗಲಾಡಿಸುವ ಶಕ್ತಿ, ಕಲೆ, ಸಾಹಿತ್ಯ ಹಾಗೂ ಸಿನಿಮಾಗಳಿಗೆ ಇದೆ. ಮುಂದಿನ ದಿನಗಳಲ್ಲಿ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಚಲನ ಚಿತ್ರಮಂದಿರಗಳನ್ನು ನಿರ್ಮಿಸಿ, ಉಚಿತವಾಗಿ ಜನರಿಗೆ ಚಲನ ಚಿತ್ರಗಳನ್ನು ತೋರಿಸುವ ಮೂಲಕ ನಾಡು-ನುಡಿ ಬೆಳಗಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಇಂದಿನಿಂದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಏಳು ಚಿತ್ರಗಳು ಪ್ರತಿದಿನ 10 ಗಂಟೆಗೆ ಪ್ರದರ್ಶನಗೊಳ್ಳುತ್ತಿದ್ದು, ಇವುಗಳನ್ನು ನಾಗರಿಕರು ವೀಕ್ಷಿಸುವ ಮೂಲಕ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಚಿತ್ರೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಪ್ರೇಕ್ಷಕರಿಗೆ ಕರೆ ನೀಡಿದರು.
ಈ ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸಿದ್ದೇಶ್ವರಪ್ಪ ಜಿ.ಬಿ, ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶರಣು ಬಿ. ಗದ್ದುಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
uttam varadi sir