ತನ್ನ ನಿಯತ್ತು, ಪ್ರಾಮಾಣಿಕತೆ ಬಿಡದ ನಾಯಿ ಕೊನೆಗೇನಾಯ್ತು..?
ದಿನಕ್ಕೊಂದು ಕಥೆ - ಉಪಕಾರಕ್ಕೆ ಪ್ರತಿಫಲ
ಒಂದಿ ಕಾಡಿನಲ್ಲಿ ಹುಲಿ, ಸಿಂಹಗಳೆಲ್ಲ ತುಂಬಾ ಕಾಲದ ಹಿಂದೆ ಅನಾನುಕೂಲದಿಂದ ಬೇರೆ ಕಡೆ ವಲಸೆ ಹೋಗಿದ್ದವು. ಅಲ್ಲಿ ಆನೆಯ ನೇತೃತ್ವದಲ್ಲಿ ಎಲ್ಲಾ ಪ್ರಾಣಿಗಳೂ ಹುಲಿ, ಸಿಂಹಗಳ ಭಯವಿಲ್ಲದೆ ಸಂತೋಷದಿಂದ ಬಾಳುತ್ತಿದ್ದವು. ಕಾಡಿನ ಪಕ್ಕದೂರಿನ ಮನುಷ್ಯರು ಆಗಾಗ ಪ್ರಾಣಿಗಳಿಗೆ ತೊಂದರೆ ಕೊಡುತ್ತಿದ್ದಿದ್ದು ಬಿಟ್ಟರೆ ಅವು ಸುಖಿ ಜೀವಿಗಳಾಗಿದ್ದವು.
ಆ ಊರಿನಲ್ಲಿ ಒಂದು ಬುದ್ಧಿವಂತ ಮತ್ತು ನಿಯತ್ತಿನ ನಾಯಿಯಿತ್ತು. ಅದು ಯಾವತ್ತೂ, ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ.
ಆದರೆ ತನಗೆ ತೊಂದರೆ ಕೊಟ್ಟವರಿಗೆ ಮಾತ್ರ ಕಚ್ಚದೇ ಬಿಡುತ್ತಿರಲಿಲ್ಲ. ಯಾರನ್ನೂ ಬೇಗ ನಂಬದೆ ನಂಬಿಕೆಗೆ ಅರ್ಹರೆಂದು ತಿಳಿದ ಮೇಲೆಯೇ ಅವರ ಜೊತೆಗೆ ಓಡಾಡಿಕೊಂಡು ಮನೆಗಳನ್ನು ಕಾಯುತ್ತಾ ಊರಿಗೇ ಕಾವಲುಗಾರನಾಗಿತ್ತು.
ಅದಕ್ಕೆ ಮನುಷ್ಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ವಿಶೇಷ ಶಕ್ತಿಯೂ ಇತ್ತು. ಈ ಶಕ್ತಿಯಿಂದ ಅದು ಬೇಗನೇ ಮನುಷ್ಯನ ಸ್ವಾರ್ಥ ಬುದ್ಧಿ, ದುಷ್ಟತನ ಗುರುತಿಸಿ ಅಂಥವರು ಹತ್ತಿರ ಬಂದರೆ ಗುರ್ರೆಂದು ಕಚ್ಚುತ್ತಿತ್ತು.
ಒಮ್ಮೆ ನಾಲ್ಕೈದು ಜನರಿಗೆ ಈ ನಾಯಿ ಕಚ್ಚಿದ್ದೇ ತಡ ಅದಕ್ಕೆ ಹುಚ್ಚು ಹಿಡಿದಿದೆಯೆಂದು ಊರಿನವರೆಲ್ಲ ಕೈಯಲ್ಲಿ ದೊಣ್ಣೆ ಹಿಡಿದು ಅದನ್ನು ಸಾಯಿಸಲು ಹೊರಟರು.
ಇದರಿಂದ ಹೆದರಿದ ನಾಯಿ ಹೇಗೋ ಮನುಷ್ಯರ ಕೈಯಿಂದ ತಪ್ಪಿಸಿಕೊಂಡು ಊರಿಂದ ಹೊರಗೆ ಓಡಿತು. ಓಡಿ ಓಡಿ ಸುಸ್ತಾದ ಅದು ಊರಿನ ಜನರ ಸಹವಾಸವೇ ಬೇಡ, ಅವರ ನೀಚ ಬುದ್ಧಿಯೆದುರು ತಾನು ಬದುಕಲು ಸಾಧ್ಯವಿಲ್ಲವೆಂದು ಆಶ್ರಯ ಕೇಳಿ ಪಕ್ಕದ ಕಾಡಿಗೆ ಬಂತು.
ಆದರೆ ಅಲ್ಲಿನ ಪ್ರಾಣಿಗಳು ತಮಗೆ ತೊಂದರೆ ಕೊಟ್ಟ ಮನುಷ್ಯರ ಜೊತೆಗಿದ್ದ ಊರಿನ ನಾಯಿ ಕಾಡಿಗೆ ಆಶ್ರಯ ಬೇಡಿ ಬಂದಿದ್ದನ್ನು ಒಪ್ಪಿಕೊಳ್ಳದೆ ಇದು ಮನುಷ್ಯನ ಕುತಂತ್ರವಿರಬಹುದೆಂದು ಅದನ್ನು ಹೊರಗೋಡಿಸಿದವು.
ನಾಯಿ ಅನಾಥವಾಗಿ ದಿಕ್ಕು ತೋಚದೆ ಹೇಗಾದರೂ ಕಾಡಿನೊಳಗೆ ಹೋಗುವ ಅವಕಾಶಕ್ಕೆ ಕಾಯುತ್ತಾ ಕಾಡಿನ ಪಕ್ಕದಲ್ಲೇ ಜೀವನ ಸಾಗಿಸಲಾರಂಭಿಸಿತು.
ಹೀಗಿರುವಾಗ ಕಾಡಿನಲ್ಲಿ ಚೆನ್ನಾಗಿ ತಿಂದು ದಷ್ಟಪುಷ್ಟವಾಗಿ ಎಲ್ಲೆಂದರಲ್ಲಿ ಆರಾಮವಾಗಿ ತಿರುಗಾಡುತ್ತಿರುವ ಮೊಲ, ಜಿಂಕೆ, ಸಾರಂಗ, ಕಾಡೆಮ್ಮೆಗಳಂತಹ ಪ್ರಾಣಿಗಳ ಮೇಲೆ ಊರಿನ ಜನರಿಗೆ ಆಸೆ ಹುಟ್ಟಿತು. ಅವರು ಗುಟ್ಟಾಗಿ ಬಂದು ದಿನವೂ ಒಂದೊಂದೇ ಪ್ರಾಣಿಯನ್ನು ಕೊಂದು ತೆಗೆದುಕೊಂಡು ಹೋಗಲಾರಂಭಿಸಿದರು.
ಕಾಡಿನ ಪಕ್ಕದಲ್ಲಿ ಇದನ್ನೆಲ್ಲ ನೋಡುತ್ತಿದ್ದ ನಾಯಿಗೆ ಏನಾದರೂ ಮಾಡಿ ಕಾಡು ಪ್ರಾಣಿಗಳನ್ನು ಮನುಷ್ಯನಿಂದ ಕಾಪಾಡಬೇಕೆನಿಸಿತು. ಆದರೆ ಅವುಗಳ ಎದುರು ಹೋದರೆ ಮತ್ತೆ ತನ್ನ ಮಾತು ನಂಬದೆ ತನ್ನನ್ನೇ ಬಡಿದಟ್ಟಬಹುದೆಂದು ತಾನೇ ಒಂದು ತೀರ್ಮಾನಕ್ಕೆ ಬಂತು.
ಜನರು ಕಾಡಿನೊಳಗೆ ಬಂದು ಪ್ರಾಣಿಯನ್ನು ಬೇಟೆಯಾಡುವಾಗ ನಾಯಿ ಅವರ ಮೇಲೆರಗಿ ಮನಬಂದಂತೆ ಕಚ್ಚಲಾರಂಭಿಸಿತು. ಮೊದಲು ಹೆದರಿದ ಜನರು ನಂತರ ತಿರುಗಿಬಿದ್ದು ನಾಯಿಯ ಮೇಲೆ ಪ್ರತಿದಾಳಿ ಮಾಡಿದರು.
ಹೆದರದ ನಾಯಿ ಅವರನ್ನು ಬಿಡದೆ ಕಚ್ಚತೊಡಗಿತು. ಈ ಗಲಾಟೆಯ ಸದ್ದು ಕೇಳಿ ಓಡಿ ಬಂದ ಪ್ರಾಣಿಗಳಿಗೆ ನಿಜ ವಿಷಯವೇನೆಂದು ಅರ್ಥವಾಯಿತು.
ತಕ್ಷಣ ಅವರ ರಾಜನಾದ ಆನೆ ಮನುಷ್ಯರನ್ನು ತುಳಿದು ಕೊಂದು ಹಾಕಿತು. ಬುದ್ಧಿವಂತ ನಾಯಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಪ್ರಾಣಿಗಳ ರಕ್ಷಣೆಗಾಗಿ ನಿಂತಿದ್ದರಿಂದ ರಾಜ ಆನೆ ನಾಯಿಯನ್ನು ಕಾಡಿನೊಳಗೆ ಸೇರಿಸಿಕೊಂಡು ತನ್ನ ದಂಡನಾಯಕನನ್ನಾಗಿಸಿತು.
ಅಂದಿನಿಂದ ಪ್ರಾಣಿಗಳು ಆನೆಯ ನಾಯಕತ್ವದಲ್ಲಿ ಮತ್ತು ನಾಯಿಯ ರಕ್ಷಣೆಯಲ್ಲಿ ಮನುಷ್ಯರ ತೊಂದರೆಗೆ ಹೆದರದೆ ಒಗ್ಗಟ್ಟಾಗಿ ಅವರಿಗೇ ಸರಿಯಾದ ಪಾಠ ಕಲಿಸುತ್ತಾ ಸಂತೋಷದಿಂದ ಬಾಳಿದವು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882