‘ಅಹಂಭಾವ ತರವಲ್ಲ’ ಆನೆ & ಇರುವೆ ಕಥೆ ಓದಿ
ಜಂಭದ ಆನೆ
ಒಂದು ಕಾಡಿನಲ್ಲಿ ಒಂದು ಅನೆಯಿತ್ತು. ತಾನು ಬಹಳ ಶಕ್ತಿ ಶಾಲಿಯೆಂದು ಅದಕ್ಕೆ ತುಂಬಾ ಅಹಂಭಾವ. ಸಣ್ಣ ಪ್ರಾಣಿಗಳನೆಲ್ಲಾ ಅದು ಹಿಂಸಿಸುತ್ತಿತ್ತು.
ಒಂದು ದಿನ ಆನೆ ನಡೆದು ಹೋಗುತ್ತಿದ್ದಾಗ ಎದುರಿಗೆ ಇರುವೆಯ ಗೂಡೊಂದು ಸಿಕ್ಕಿತು. ನೂರಾರು ಇರುವೆಗಳು ಆಹಾರವನ್ನು ಕಚ್ಚಿಕೊಂಡು ಅತ್ತಿತ್ತ ಹೋಗುತ್ತಿದ್ದುವು. ಅದನ್ನು ನೋಡಿ ಆನೆ :
“ನನಗೆ ಜಾಗ ಬಿಡಿ. ಇಲ್ಲದಿದ್ದರೆ ನಿಮ್ಮನ್ನು ಒಂದೇ ಏಟಿಗೆ ತುಳಿದುಹಾಕಿಬಿಟ್ಟೆನು!” ಎಂದು ಅಬ್ಬರಿಸಿತು.
“ಆನೇರಾಯ, ನೀನು ಬಲಶಾಲಿಯೆಂದು ಗೊತ್ತು. ಆದರೆ ನಾವು ನಿನಗೇನು ಮಾಡಿದ್ದೇವೆ?” ಎಂದು ಕೇಳಿತು ಒಂದು ಇರುವೆ.
“ಎಷ್ಟು ಸಣ್ಣ ಪ್ರಾಣಿ ನೀನು! ನನ್ನನ್ನು ಪ್ರಶ್ನಿ ಸ್ತಿಯಾ?” ಎಂದು ಹೊಂಕರಿಸಿತು ಆನೆ. “ಸಣ್ಣ ಪ್ರಾಣಿ ಆದರೇನಂತೆ? ನನಗೂ ಬುದ್ದಿಯಿದೆ. ಬೇಕಾದರೆ ಪಂದ್ಯದಲ್ಲಿ ನಿನ್ನನ್ನು ಸೋಲಿಸುತ್ತೇನೆ” ಎಂದಿತು ಇರುವೆ.
ಆನೆ ಜಂಭದಿಂದ ನಕ್ಕು “ಆಗಲಿ, ಅದಕ್ಕೇನಂತೆ? ನೀನು ಸೋತರೆ ನಿನ್ನ ಜೊತೆಗೆ ಈ ಗೂಡನ್ನು ತುಳಿದುಹಾಕ್ತೇನೆ” ಎಂದಿತು.
ಪಂದ್ಯ ಆರಂಭವಾಯಿತು : ಓಡುವ ಪಂದ್ಯ, ಆನೆಗೂ ಇರುವೆಗೂ! ಎಂಥ ಮೋಜು ಎಂದುಕೊಳ್ಳುತ್ತಾ ಕಾಡಿನ ಪ್ರಾಣಿಗಳೆಲ್ಲಾ ನೆರೆದುವು.
ಆನೆ ಸ್ವಲ್ಪ ದೂರ ಓಡಿತು. ಅನಂತರ ಕೆಳಗೆ ನೋಡಿದಾಗ ತನ್ನ ಪಕ್ಕದಲ್ಲೇ ಇರುವೆ ಬರುತ್ತಿದ್ದುದನ್ನು ನೋಡಿ “ನೀನೂ ಇಲ್ಲೆ ಇದ್ದೀಯಾ?” ಎನ್ನುತ್ತಾ ಮತ್ತು ಜೋರಾಗಿ ಓಡತೊಡಗಿತು. ಓಡಿ ಓಡಿ ಅದಕ್ಕೆ ಉಬ್ಬಸ ಬಂತು.
ಆನೆ ಒಂದು ಕ್ಷಣ ನಿಂತು ಬಾಗಿ ನೋಡಿದಾಗ ತನ್ನ ಪಕ್ಕದಲ್ಲೇ ಇರುವೆ ಬರುತ್ತಿದ್ದುದು ಕಂಡಿತು. ಆನೆಗೆ ಹುಚ್ಚೆ ಹಿಡಿಯಿತು. ವೇಗವಾಗಿ ಓಡುತ್ತಾ ಹೋಗಿ ಆಳವಾದ ಹೊಂಡಕ್ಕೆ ಬಿದ್ದು ಬಿಟ್ಟಿತು.
ವಾಸ್ತವವಾಗಿ ಆನೆ ಪ್ರತಿ ಬಾರಿ ಕೆಳಗೆ ನೋಡಿದಾಗಲೂ ಕಂಡದ್ದು ಪಂದ್ಯ ಕಟ್ಟಿದ ಇರುವೆಯಲ್ಲಾ; ಅದರ ಸ್ನೇಹಿತರಾದ ಬೇರೆ ಇರುವೆಗಳು! ಆನೆ ತುಂಬಾ ಅಹಂಭಾವಿ ಆದುದರಿಂದ ಸಣ್ಣ ಇರುವೆಯನ್ನು ಗಮನಿಸುವ ಸ್ಥಿತಿಯಲ್ಲಿ ಇರಲಿಲ್ಲ.
ಆದುದರಿಂದ ವ್ಯಕ್ತಿ ಸಣ್ಣವನೆ ಆಗಲಿ, ದೊಡ್ಡವನೆ ಆಗಲಿ ಗೌರವ ನೀಡಬೇಕು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882