ಸ್ವಾವಲಂಬನೆ ಜೀವನ ನಡೆಸಿದಾಗ ಸಮಾಜದಲ್ಲಿ ಮಹಿಳೆಯರು ಸದೃಢಃ ಡಾ.ಮಾಲಕರಡ್ಡಿ
ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಯಾದಗಿರಿ: ಸ್ವಯಂ ಉದ್ಯೋಗದೊಂದಿಗೆ ಸ್ವಾಲಂಬನೆ ಜೀವನ ನಡೆಸಿದಾಗ ಮಹಿಳೆಯರು ಕೂಡ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಬಹುದು ಎಂದು ಶಾಸಕ ಡಾ:ಎ.ಬಿ.ಮಾಲಕರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಯಾದಗಿರಿ ವತಿಯಿಂದ ಜಿಲ್ಲಾ ಬಾಲಭವನದಲ್ಲಿ ಹಮ್ಮಿಕೊಂಡಿದ್ದ “ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2018” ಮತ್ತು “ಸವಿರುಚಿ ಸಂಚಾರಿ ಕ್ಯಾಂಟಿನ್” ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ತ್ರೀಶಕ್ತಿ ಸಂಘಗಳಿಂದ ಉತ್ಪಾದಿತ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಪ್ರೋತ್ಸಾಹದೊಂದಿಗೆ ಜಾಗೃತಗೊಳಿಸುವುದು ಅಗತ್ಯವಾಗಿದೆ. ಸರ್ಕಾರದಿಂದ ಸಿಗುವ ವಿವಿಧ ಯೋಜನೆಗಳನ್ನು ಸದುಪಯೋಗಿಸಿಕೊಂಡು ಅಭಿವೃದ್ಧಿ ಹೊಂದಿ ಮಹಿಳೆಯರು ಸಮಾಜದಲ್ಲಿ ಮಾದರಿಯಾಗಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಪ್ರಕಾಶ.ಜಿ.ರಜಪೂತ ಅವರು ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಅಮೋಘವಾದ ಸಾಧನೆ ಮಾಡಿ ತೋರಿಸಿದ್ದಾರೆ. ನಾಡಿನಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವುದರೊಂದಿಗೆ ಮಹಿಳೆಯರು ಮಕ್ಕಳ ಭವಿಷ್ಯ ಉಜ್ವಲ್‍ಗೊಳಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಮಹಿಳಾ ಪ್ರಗತಿ ಸಾಧ್ಯ ಎಂದರು.
ಬಾಲ ನ್ಯಾಯ ಮಂಡಳಿ ಸದಸ್ಯೆ ಮತ್ತು ನ್ಯಾಯವಾದಿಗಳಾದ ಶ್ರೀಮತಿ ನಿರ್ಮಲಾ ಹೂಗಾರ ಅವರು ಉಪನ್ಯಾಸ ನೀಡಿ ಎಲ್ಲಿಯವರಿಗೆ ದೌರ್ಜನ್ಯವನ್ನು ಸಹಿಸಿಕೊಂಡು ಮುನ್ನಡೆಯುತ್ತಾರೆಯೋ, ಅಲ್ಲಿಯವರೆಗೆ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತವೆ. ಹೀಗಾಗಿ ಇವುಗಳ ವಿರುದ್ಧ ಮಹಿಳೆಯರು ಎಚ್ಚೆತ್ತುಕೊಂಡಾಗ ಪ್ರಕರಣಗಳು ಕಡಿವಾಣ ಹಾಕಲು ಸುಲಭ ಎಂದು ತಿಳಿಸಿದರು.
ಸರಕಾರಿ ಇಲಾಖೆ ಅಧಿಕಾರಿಗಳಿಂದ ಇಲಾಖೆಯಲ್ಲಿನ ಮಹಿಳೆಯರಿಗೆ ಲೈಂಗಿಕ್ ದೌರ್ಜನ್ಯ ಅಥವಾ ಅಸಭ್ಯ ವರ್ತನೆ ತೋರಿದಾಗ ಅಂತಹ ಅಧಿಕಾರಿಗಳ ವಿರುದ್ಧ ನೊಂದ ಮಹಿಳೆಯರು ದೂರು ನೀಡಿದರೆ, ಸೆಕ್ಷನ್-376 ‘ಗ’ ಪ್ರಕಾರ ಐದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ ಎಂದರು.
ಮಹಿಳೆಯರನ್ನು ಮಾನವೀಯತೆ ದೃಷ್ಟಿಯಿಂದ ಕಾಣುವುದರಿಂದಲೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸಬಹುದು, ಮಾನವೀಯತೆಯ ಬದುಕು ಎಲ್ಲರಲ್ಲಿಯೂ ಬರಬೇಕು ಎಂದು ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ತಡೆ ಕಾಯ್ದೆ ಬಗ್ಗೆ ವಿವರಿಸಿದರು.
ಡಾ:ಜೋತಿಲತಾ ತಡಿಬಿಡಿಮಠ ಅವರು “ಮತದಾರರಿಗೆ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ” ಕುರಿತು ಉಪನ್ಯಾಸ ನೀಡುತ್ತಾ ಮತದಾನದ ಹಕ್ಕು ಮಹಿಳೆಯರಿಗೆ ಪವಿತ್ರವಾಗಿದೆ. ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿಸುವ ಶಕ್ತಿ ಮಹಿಳಾ ಮತದಾನದಲ್ಲಿ ಇದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಲ್ಲ, 18 ವಯಸ್ಸಿನ ಮೇಲ್ಪಟ್ಟ ಪ್ರತಿಯೊಬ್ಬ ಹೆಣ್ಣುಮಕ್ಕಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ ಮತದಾನದ ಹಕ್ಕು ಪಡೆಯಬೇಕು ಎಂದು ಅವರು ತಿಳಿಸಿದರು.
ನ್ಯಾಯವಾದಿಗಳಾದ ಶ್ರೀಮತಿ ಸಾವಿತ್ರಿಬಾಯಿ ಪಾಟೀಲ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005, ವರದಕ್ಷಿಣೆ ತಡೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭ ಕ್ರೀಡೆ, ರಾಜಕೀಯ ಮತ್ತು ವಿವಿಧ ರಂಗದಲ್ಲಿ ಸಾಧನೆ ಮಾಡಿದವರನ್ನು ಮತ್ತು ಸುರಪುರ, ಶಹಾಪೂರ, ಯಾದಗಿರಿ, ಗುರುಮಠಕಲ್ ಭಾಗದ ಅಂಗನವಾಡಿಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುಂಚೆ ವಿವಿಧ ಸ್ತ್ರೀಶಕ್ತಿ ಸಂಘಗಳಿಂದ ಉತ್ಪಾದಿತ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಶಶಿಕಲಾ ಕ್ಯಾತನಾಳ, ಜಿಲ್ಲಾ ಅಂತರಿಕ ದೂರು ಸಮಿತಿ ಅಧ್ಯಕ್ಷರಾದ ಶ್ರೀಮತಿ ಶಾರದಾ ಅಡಕಿ, ಸ್ವ-ಸಹಾಯ ಸಂಘ, ದೇವದಾಸಿ ಪುನರ್ ವಸತಿ ಯೋಜನೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ಮಹಾಲಿಂಗಮ್ಮ, ಬಾಲಭವನ ಸೊಸೈಟಿ ಸದಸ್ಯರಾದ ಮಲ್ಲಮ್ಮ ಕೋಮರ, ಶ್ರೀ ಮಾಣಿಕ ರೆಡ್ಡಿ, ಶ್ರೀಮತಿ ಸುನಂದ ಪಾಟೀಲ, ವಕೀಲರಾದ ಶ್ರೀಮತಿ ಅಮೃತಾ, ಸುವರ್ಣ ಹೂಗಾರ, ಶ್ರೀಮತಿ ಮಹಾನಂದ ಪಾಟೀಲ, ಅಂಗವಿಕಲ ಅಧಿಕಾರಿ ಶರಣಗೌಡ ಸೇರಿದಂತೆ ಇತರರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಶ್ರೀ ಶ್ರೀಕಾಂತ ಕುಲಕರ್ಣಿ ಅವರು ಸ್ವಾಗತಿಸಿದರು. ಶ್ರೀಮತಿ ಗುರುದೇವಿ ಹಿರೇಮಠ ನಿರೂಪಿಸಿ ವಂದಿಸಿದರು.