#DKShi Dream : ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಚಂಡಿಕಾ ಹೋಮದ ಮೊರೆ ಹೋಗಿದ್ದೇಕೆ?
-ಮಲ್ಲಿಕಾರ್ಜುನ ಮುದನೂರ್
ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಚಿವ ಸಂಪುಟ ಸೇರಲು ಏನೆಲ್ಲಾ ಹರಸಾಹಸ ಪಡಬೇಕಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಚಿವ ಸಂಪುಟ ಸೇರಿದ ಬಳಿಕ ಪವರ್ ಮಿನಿಸ್ಟರ್ ಆಗಿ ಪವರ್ ಫುಲ್ ಆಗಿದ್ದ ಡಿಕೆಶಿ ಗುಜರಾತ್ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಶಾಸಕರನ್ನು ಕರ್ನಾಟಕಕ್ಕೆ ಕರೆತಂದು ಅವರ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಗುಜರಾತಿನಿಂದ ಸೋನಿಯಾಗಾಂಧಿ ಅವರ ಆಪ್ತ ಅಹ್ಮದ್ ಪಟೇಲ್ ರನ್ನು ಗೆಲ್ಲಿಸಿ ರಾಜ್ಯಸಭೆಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಹತ್ತಿರವಾಗಲು ಹೊರಟಿದ್ದ ಡಿಕೆಶಿಗೆ ಐಟಿ ಶಾಕ್ ನೀಡಿತ್ತು.
ಐಟಿ ಶಾಕ್ ನಿಂದ ಹೊರಬಂದಿರುವ ಡಿಕೆಶಿ ಮತ್ತೆ ಸಿಎಂ ಕನಸಿನ ಬೆನ್ನು ಹತ್ತಿ ಹೊರಟಿದ್ದಾರೆ. ಒಂದು ಕಡೆ ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸರ್ಕಾರದ ಸಾಧನಾ ಸಂಭ್ರಮ ಸಮಾವೇಶ ನಡೆಯುತ್ತಿವೆ. ಮತ್ತೊಂದು ಕಡೆ ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶಗಳು ನಡೆಯುತ್ತಿವೆ. ಪರಮೇಶ್ವರ್ ನೇತೃತ್ವದ ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆಶಿ ತಮ್ಮ ಎಂದಿನ ಗತ್ತಿನಲ್ಲೇ ಮಾತನಾಡಿ ಜನರ ಗಮನ ಸೆಳೆಯುತ್ತಿದ್ದಾರೆ. ಬಿಜೆಪಿ ವಿರುದ್ಧ ಕಿಡಿ ಕಾರುತ್ತಿರುವ ಡಿಕೆಶಿ ಜೆಡಿಎಸ್ ನತ್ತ ಮೃಧು ಧೋರಣೆ ತೋರುತ್ತಿರುವುದು ಕಂಡು ಬರುತ್ತಿದೆ.
ಈ ಹಿಂದೆ ಒಕ್ಕಲಿಗ ಸಮುದಾಯದ ಸಭೆಯೊಂದರಲ್ಲಿ ನನಗೆ ರಾಜ್ಯಾಧಿಕಾರದ ಯೋಗ ಬಂದಾಗ ಸಮುದಾಯ ಬೆನ್ನಿಗೆ ನಿಲ್ಲಬೇಕೆಂದು ಮನವಿ ಮಾಡಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆಗೆ ವೇದಿಕೆಯೊಂದರಲ್ಲಿ ಆತ್ಮೀಯ ಮಾತುಕತೆ ನಡೆಸಿದ್ದು ಓಪನ್ ಸೀಕ್ರೆಟ್. ಹೀಗಾಗಿ, ಒಂದು ವೇಳೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಬರದಿದ್ದರೆ ಜೆಡಿಎಸ್ ಬೆಂಬಲದೊಂದಿಗೆ ಮುಖ್ಯಮಂತ್ರಿ ಗಾದಿಗೇರುವ ಕನಸು ಡಿಕೆಶಿ ಅವರದ್ದಾಗಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
ಒಂದು ವೇಳೆ ಕಾಂಗ್ರೆಸ್ ಪಕ್ಷವೇ ಸರಳ ಬಹುಮತ ಗಳಿಸಿದರೂ ಸಹ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿರುವ ಸಿದ್ಧರಾಮಯ್ಯ ಅವರಿಗೆ ಹೈಕಮಾಂಡ್ ಮತ್ತೊಮ್ಮೆ ಸಿಎಂ ಗಾದಿ ನೀಡುವುದು ಕಷ್ಟಸಾಧ್ಯ. ಆಗ ಪಕ್ಷದ ಪರವಾಗಿ ಬಿಗಿಯಾಗಿ ಹೋರಾಟ ಮಾಡಿದ ನನಗೆ ಸಿಎಂ ಆಗುವ ಅವಕಾಶ ಬಂದೇ ಬರುತ್ತದೆ. ರಾಜ್ಯದ ದೊಡ್ಡ ಸಮುದಾಯದ ಪೈಕಿ ಒಂದಾದ ಒಕ್ಕಲಿಗ ಸಮುದಾಯ ನನ್ನ ಬೆನ್ನಿಗೆ ನಿಂತರೆ ಕಾಂಗ್ರೆಸ್ ಪಕ್ಷ ಸಿಎಂ ಸ್ಥಾನ ನೀಡಲು ಇಲ್ಲ ಅನ್ನಲಾಗದು ಎಂಬುದು ಡಿಕೆಶಿ ಸ್ಟ್ಯಾಟಜಿ.
ಈಗಾಗಲೇ ರಾಜ್ಯದಾದ್ಯಂತ ತನ್ನದೇ ಆದ ಶಾಸಕರ ಗುಂಪನ್ನು ಕಟ್ಟುತ್ತಿರುವ ಡಿಕೆಶಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಬೆಂಬಲಿಗರನ್ನು ಬಿಟ್ಟಿದ್ದಾರೆ. ಮತ್ತು ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸಿ ಶಾಸಕರನ್ನಾಗಿಸಲು ಹೊರಟಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಹೆಚ್ಚಿನ ಶಾಸಕರು ತನ್ನ ಪರವಾಗಿ ಧ್ವನಿ ಎತ್ತಬೇಕೆಂಬುದು ಡಿಕೆಶಿ ಪ್ಲಾನ್ ಆಗಿದೆ. ಹೀಗಾಗಿ, ಒಂದು ಕಡೆ ಜನಬಲ, ಮತ್ತೊಂದು ಕಡೆ ಪಕ್ಷದಲ್ಲಿ ಹಿಡಿತ ಸಾಧಿಸುವುದು, ಮಗದೊಂದು ಕಡೆ ಜೆಡಿಎಸ್ ಪಕ್ಷವೂ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ನೋಡಿಕೊಳ್ಳುವಂಥ ಜಾಣ್ಮೆಯ ನಡೆಯನ್ನು ಡಿಕೆಶಿ ಇಡುತ್ತಿದ್ದಾರೆಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.
ಈ ಎಲ್ಲಾ ರಾಜಕೀಯ ತಂತ್ರಗಾರಿಕೆಯ ಜೊತೆಗೆ ದೈವ ಬಲವೂ ಜೊತೆಗೂಡಿದರೆ ಕರ್ನಾಟಕದ ಮುಖ್ಯಮಂತ್ರಿ ಆಗುವುದು ಖಾಯಂ ಎಂದು ನಂಬಿರುವ ಡಿಕೆಶಿ ಈಗ ಚಂಡಿಕಾ ಹೋಮದ ಮೊರೆ ಹೋಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಶತ ಚಂಡಿಕಾ ಹೋಮ ಆಯೋಜಿಸಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಹೋಮ ನಡೆಯಲಿದ್ದು ಜನೇವರಿ 8ಕ್ಕೆ ಪೂರ್ಣಾಹುತಿ ಆಗಲಿದೆ. ಚಂಡಿಕಾ ಹೋಮದ ಮೂಲಕ ತಮ್ಮ ಗುರಿಗೆ ಯಾವುದೇ ವಿಘ್ನಗಳು ಬಾರದಂತೆ ದೇವರ ಮೊರೆ ಹೋಗಿರುವ ಡಿಕೆಶಿ ಕನಸಿನ ಬೆನ್ನುಹತ್ತಿದ್ದಾರೆ. ಡಿಕೆಶಿ ಕನಸು ನನಸಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.