ಡಿ.ಕೆ.ಶಿವಕುಮಾರ್ ಆಗ್ತಾರಾ ಹೋಮ್ ಮಿನಿಸ್ಟರ್?
ಅಹ್ಮದ್ ಪಟೇಲ್ ಗೆಲುವು: ಡಿಕೆಶಿ ಮೇಲೆ ಹೈಕಮಾಂಡ್ ಒಲವು!
ಏನೆಲ್ಲಾ ಆರೋಪಗಳಿರಬಹುದು ಆದರೆ ಕರ್ನಾಟಕದ ಖಡಕ್ ಲೀಡರ್ ಗಳ ಪೈಕಿ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ. ಸಿದ್ಧರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಇನ್ನೇನು ಸಚಿವ ಸ್ಥಾನವೂ ತಪ್ಪಿಹೋಯ್ತು. ಇನ್ನು ಡಿ.ಕೆ.ಶಿವಕುಮಾರ್ ಖೇಲ್ ಖತಂ
ಅಂತಲೇ ಭಾವಿಸಲಾಗಿತ್ತು. ಆದರೆ, ದೇಶದೆಲ್ಲೆಡೆ ಕಾಂಗ್ರೆಸ್ ಕುಸಿಯುತ್ತಿರುವ ವೇಳೆ ಕರ್ನಾಟಕದಲ್ಲಿ ಮಾತ್ರ ಡಿ.ಕೆ.ಶಿ ತನ್ನದೇ ಪ್ರಾಭಲ್ಯ ಮೆರೆಯತೊಡಗಿದರು. ಕಾಂಗ್ರೆಸ್ಸಿನ ಕಷ್ಟಕಾಲದಲ್ಲಿ ಸಹೋದರ ಸುರೇಶರನ್ನು ಲೋಕಸಭೆ ಚುನಾವಣೆಗಿಳಿಸಿ ಗೆಲ್ಲಿಸಿಕೊಂಡರು. ಬಳ್ಳಾರಿ, ಗುಂಡ್ಲುಪೇಟೆ ಉಪಚುನಾವಣೆಗಳ ನೇತೃತ್ವವಹಿಸಿಕೊಂಡು ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾದರು. ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಭಿನ್ನಮತೀಯ ಶಾಸಕರನ್ನು ಸೆಳೆದುಕೊಂಡು ಕಾಂಗ್ರೆಸ್ಸಿನ ಮೂರನೇ ಅಬ್ಯರ್ಥಿಯನ್ನೂ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇಂಧನ ಸಚಿವರಾದ ಬಳಿಕ ಅವರ ಖದರೇ ಬೇರೆಯಾಗಿದ್ದು ಪಕ್ಷದಲ್ಲಿ ಹಿಡಿತ ಸಾಧಿಸಿದರು.
ಬಿಹಾರ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದ ಡಿಕೆಶಿಗೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯ ಜವಬ್ದಾರಿಯೂ ಹೆಗಲೇರಿತು. ಪರಿಣಾಮ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನೂ ಗೆಲ್ಲಿಸುವ ಹೊಣೆ ಡಿಕೆಶಿಗೆ ನೀಡಲಾಯಿತು. ಗುಜರಾತಿನಲ್ಲಿ ಆಪರೇಷನ್ ಕಮಲದ ಭೀತಿಯಿಂದ ಮೊದಲೇ ಕಾಂಗ್ರೆಸ್ ಕೈ ನಡುಗತೊಡಗಿತ್ತು. ಆಗಲೇ ಕಾಂಗ್ರೆಸ್ಸಿ 6ಶಾಸಕರು ಕಮಲ ಹಿಡಿದಿದ್ದರು. ಇನ್ನುಳಿದವರ ಪೈಕಿ ಹಲವರು ಕಮಲದತ್ತ ವಾಲಿದ್ದಾರೆಂಬ ಕಾರಣಕ್ಕೆ ಭೀತಿಗೊಳಗಾದ
ಹೈಕಮಾಂಡ್ ಗುಜರಾತಿನ 44 ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡಿತ್ತು. ಶಾಸಕರನ್ನು ಈಗಲ್ ಟನ್ ರೆಸಾರ್ಟಿನಲ್ಲಿಟ್ಟು ಸಚಿವ ಡಿಕೆಶಿಗೆ ಶಾಸಕರ ದೇಖಬಾಲ್ ಜವಬ್ದಾರಿ ವಹಿಸಲಾಗಿತ್ತು. ಪರಿಣಾಮ ಡಿಕೆಶಿ ಇಡೀ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಕಂಟ್ರೋಲಿಗೆ ತೆಗೆದುಕೊಂಡರು. ಅದೇ ವೇಳೆ ಡಿಕೆಶಿ ಮನೆ ಮೇಲೆ ಐಟಿ ರೇಡಾಯ್ತು. ರಾಜ್ಯದ ತುಂಬ ಡಿಕೆಶಿಯದ್ದೇ ಮಾತು. ಪರ-ವಿರೋಧ ಪ್ರತಿಭಟನೆಗಳು, ಆರೋಪ-ಪ್ರತ್ಯಾರೋಪಗಳು ನಡೆದವು. ಆದರೆ, ಯಾವುದಕ್ಕೂ ದೃತಿಗೆಡದ ಡಿಕೆಶಿ ಮಾತ್ರ ಐಟಿ ರೇಡ್ ಮುಗಿದಾಕ್ಷಣ ಯಾವುದೇ ಹಿಂಜರಿಕೆಯಿಲ್ಲದೆ ಗುಜರಾತ್ ಶಾಸಕರ ಬಳಿಗೆ ತೆರಳಿ ಮತ್ತೆ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡರು. ಅಷ್ಟರಲ್ಲೇ ಕೆಪಿಸಿಸಿ ಇನ್ನು ತಾನೇ ಗುಜರಾತ್ ಶಾಸಕರ ಉಸ್ತುವಾರಿ ವಹಿಸಿಕೊಳ್ಳುವುದಾಗಿ ಹೇಳಿಕೊಂಡಿತ್ತಾದ್ರೂ ಡಿಕೆಶಿ ಮಾತ್ರ ಅದಕ್ಕೆ ಅವಕಾಶ ನೀಡದೆ ಸಹೋದರ ಡಿ.ಕೆ.ಸುರೇಶರ ಮೂಲಕ ಗುಜರಾತ್ ಶಾಸಕರ ಉಸ್ತುವಾರಿ ತಮ್ಮ ಮೇಲೆ ಇರುವಂತೆ ನೋಡಿಕೊಂಡರು.
ಅಲ್ಲದೆ ಗುಜರಾತ್ ಶಾಸಕರಿಗೆ ಬಿಜೆಪಿಯ ಯಾವ ನಾಯಕರೂ ಸಂಪರ್ಕ ಮಾಡದಂತೆ ಎಚ್ಚರಿಕೆವಹಿಸಿದರು. ಕೊನೆಗೆ ಬೆಂಗಳೂರಿನಿಂದ ಗುಜರಾತಿನವರೆಗೆ ಶಾಸಕರೊಂದಿಗೆ ಇದ್ದೂ ರಾಜ್ಯಸಭೆ ಚುನಾವಣೆ ಮುಗಿಸಿದರು. ಪರಿಣಾಮ 44ಮತಗಳೊಂದಿಗೆ ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್ ಪಟೇಲ್ ಐದನೇ ಬಾರಿಗೆ ರಾಜ್ಯಸಭೆ ಪ್ರವೇಶಿಸಲು ನೆರವಾಗಿದ್ದಾರೆ. ಗುಜರಾತ್ ರಾಜ್ಯಸಭೆ ಚುನಾವಣೆಯನ್ನು ಪ್ರತಿಷ್ಠಯಾಗಿ ಸ್ವೀಕರಿಸಿದ್ದ ಬಿಜೆಪಿ ಅದ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅನೇಕ ತಂತ್ರಗಾರಿಕೆ ಹೂಡಿದ್ದರು. ಬಿಜೆಪಿಯ ಮೂರನೇ ಅಬ್ಯರ್ಥಿಯ ಗೆಲುವಿಗಿಂತ ಹೆಚ್ಚಾಗಿ ಅಮಿತ್ ಶಾ ಅವರ ರಾಜಕೀಯ ವೈರಿ ಅಹ್ಮದ್ ಪಟೇಲ್ ರನ್ನು ಸೋಲಿಸಬೇಕೆಂಬುದೇ ಮುಖ್ಯ ಉದ್ದೇಶವಾಗಿತ್ತು. ಆದ್ರೆ, ಇಡೀ ದೇಶ ಗೆಲ್ಲುತ ಹೊರಟಿರುವ ಬಿಜೆಪಿಯ ಚಾಣಕ್ಯ ಅಮಿತ್ ಶಾ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವ ಮೂಲಕ ಡಿಕೆಶಿ ಗೆಲುವಿನ ನಗೆ ಬೀರಿದ್ದಾರೆ.
ನಿನ್ನೆ ಮತದಾನದ ಬಳಿಕವೂ ಹಲವು ಗೊಂದಲಗಳು ಸೃಷ್ಟಿಯಾಗಿದ್ದು ಚುನಾವಣ ಆಯೋಗವೇ ಆರೇಳು ತಾಸುಗಳ ಕಾಲ ವಿಚಾರಿಸಿ ಮದ್ಯರಾತ್ರಿಗೆ ಫಲಿತಾಂಶ ಪ್ರಕಟಿಸುವ ಸ್ಥಿತಿ ನಿರ್ಮಾಣವಾಯಿತು. ಇಷ್ಟೆಲ್ಲಾ ರಾಜಕೀಯ ಮೇಲಾಟಗಳ ಬಳಿಕ ಕೊನೆಹಂತದಲ್ಲಿ ಅಹ್ಮದ್ ಪಟೇಲ್ ರೋಚಕ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಅಹ್ಮದ್ ಪಟೇಲ್ ಗೆಲುವಿನಲ್ಲಿ ಡಿಕೆಶಿ ಪಾತ್ರ ಮುಖ್ಯವಾಗಿರುವ ಕಾರಣಕ್ಕೆ ಅಹ್ಮದ್ ಪಟೇಲ್ ಹಾಗೂ ಸೋನಿಯಾ ಗಾಂಧಿ ಅವರು ಫೋನ್ ಮೂಲಕ ಡಿಕೆಶಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆ ಮೂಲಕ ಸೋನಿಯಾ ಗಾಂಧಿ ಅವರ ಥಿಂಕ್ ಟ್ಯಾಂಕ್ ಎಂದೇ ಕರೆಯಲ್ಪಡುವ ಅಹ್ಮದ್ ಪಟೇಲರ ಗೆಲುವಿಗೆ ಹೆಗಲು ನೀಡಿದ ಡಿಕೆಶಿಗೆ ಹೈಕಮಾಂಡ್ ಕೈಬಿಡುವುದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಪರಿಣಾಮ ಐಟಿ ರೇಡ್ ವಿಷಯದಲ್ಲಿ ಏನೇ ಆರೋಪಗಳಿದ್ದರೂ ಡಿಕೆಶಿ ಅವರನ್ನಂತೂ ಸಚಿವ ಸಂಪುಟದಿಂದ ಕೈಬಿಡಿರಲು ಕಾಂಗ್ರೆಸ್ ನಿರ್ಧರಿಸಿದೆ. ಅಲ್ಲದೆ ಖಾಲಿ ಇರುವ ಗೃಹ ಸಚಿವ ಸ್ಥಾನವನ್ನು ಡಿಕೆಶಿಗೆ ನೀಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ರಾಜಕೀಯ ವಿಶ್ಲೇಷಕರು ಲೆಕ್ಕಹಾಕತೊಡಗಿದ್ದಾರೆ.
ಐಟಿ ದಾಳಿಗೆ ಒಳಗಾಗಿರುವ ಡಿಕೆಶಿಗೆ ತಕ್ಷಣಕ್ಕೆ ಪ್ರತಿಫಲ ಸಿಗದೇ ಹೋದರೂ ಸಹ ಪಕ್ಷದಲ್ಲೇ ತಮ್ಮದೇ ಆದ ಸ್ಥಾನಮಾನ ಸಿಗಲಿದೆ. ಮುಂದೊಂದು ದಿನ ಡಿಕೆಶಿಗೆ ಅಹ್ಮದ್ ಪಟೇಲ್ ರ ಗೆಲುವಿನ ಪ್ರತಿಫಲ ಸಿಗುವುದಂತೂ ಸುಳ್ಳಲ್ಲ. ಈ ಹಿಂದೆ ಡಿಕೆಶಿ ಸಚಿವ ಸಂಪುಟ ಸೇರಲು ಸರ್ಕಸ್ ಮಾಡಬೇಕಾಯಿತು.
ಕೆಪಿಸಿಸಿ ಅದ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಿಕೆಶಿಗೆ ತೀರ ಇತ್ತೀಚೆಗೆ ಕೈ ತಪ್ಪಿಸಲಾಯಿತು. ಆದರೆ, ಇನ್ನು ಮುಂದೆ ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿಯ ಮಾತು ನಡೆಯಲಿದೆ. ಯಾಕಂದ್ರೆ, ಎಲ್ಲೆಡೆ ಮುಳುಗುತ್ತಿರುವ ಹಡಗು ಕಾಂಗ್ರೆಸ್ ಎಂಬ ಮಾತು ಸಹಜವಾಗಿ ಕೇಳಿಬರುತ್ತಿರುವ ವೇಳೆ ಪಕ್ಷ ಸಂಘಟಿಸುವ ಡಿಕೆಶಿ ಅಂತವರು ಹೈಕಮಾಂಡಿಗೆ ಮುಖ್ಯವಾಗ್ತಾರೆ. ನರೇಂದ್ರ ಮೋದಿಯವರ ಮೇಲೂ ಆರೋಪಗಳಿದ್ದವು. ಮೋದಿ ನೇತೃತ್ವ ಬಿಜೆಪಿಗೆ ಶಾಪವಾಗಲಿದೆ ಎಂಬ ಅಭಿಪ್ರಾಯವು ಇತ್ತು. ಆದರೂ ಸಹ ಬಿಜೆಪಿ ತೆಗೆದುಕೊಂಡ ಬೋಲ್ಡ್ ಡಿಸಿಜನ್ ಅವರನ್ನು ಪ್ರಧಾನಿಯನ್ನಾಗಿಸಿತು. ಅಮಿತ್ ಶಾ ಅವರನ್ನು ಯಶಸ್ವಿ ಬಿಜೆಪಿ ನಾಯಕರನ್ನಾಗಿಸಿತು ಎಂಬ ಉದಾಹರಣೆಗಳನ್ನೇ ನೀಡುವ ಮೂಲಕ ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಡಿಕೆಶಿ ಪರ ಬ್ಯಾಟ್ ಬೀಸಲು ಶುರು ಮಾಡಿದ್ದಾರೆ. ಪರಿಣಾಮ ಕಾಂಗ್ರೆಸ್ ಹೈಕಮಾಂಡ್ ಸಹ ಏನೆಲ್ಲಾ ಆರೋಪಗಳಿದ್ದರೂ ಸಹ ಡಿಕೆಶಿ ಕೈ ಬಿಡದೆ ಬೆನ್ನಿಗೆ ನಿಲ್ಲುತ್ತದೆ. ಮುಂಬರುವ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವವಹಿಸಿದರೂ ಅಚ್ಚರಿ ಪಡಬೇಕಿಲ್ಲ ಅನ್ನೋದು ಕಾಂಗ್ರೆಸ್ಸಿನ ಹಿರಿಯ ನಾಯಕರ ವಾದವಾಗಿದೆ.
ಮತ್ತೊಂದು ಕಡೆ ಅಕ್ರಮ ಸಂಪಾದನೆಯ ಆರೋಪ ಹೊತ್ತಿರುವ ಡಿ.ಕೆ.ಶಿವಕುಮಾರ್ ಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ಕೊಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆಂಬ ವಾದವೂ ಸಹ ಇದೆ. ಅಂತೆಯೇ ಖುದ್ದು ಸಿಎಂ ಸಿದ್ಧರಾಮಯ್ಯ ಅವರೇ ಡಿಕೆಶಿಗೆ ಅಡ್ಡಗಾಲು ಹಾಕುತ್ತಾರೆಂಬ ಮಾತೂ ಇದೆ. ಅಷ್ಟೇ ಅಲ್ಲದೆ ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಮೋದಿ ಮತ್ತು ಅಮಿತ್ ಶಾ ಟೀಮ್ ಡಿಕೆಶಿಗೆ ಬ್ರೇಕ್ ಹಾಕಲು ಮತ್ಯಾವ ತಂತ್ರ ಹಣೆಯಲಿದೆ. ಒಂದು ವೇಳೆ ಕಾಂಗ್ರೆಸ್ ಡಿಕೆಶಿಗೆ ಹೆಚ್ಚಿನ ಮಾನ್ಯತೆ ನೀಡಿದರೆ ಮತದಾರರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನೂ ಕಾದು ನೋಡಬೇಕಿದೆ.
-ಸಂ