ಐಟಿ ದಾಳಿ ಅಂತ್ಯ: ಮಾಧ್ಯಮಗೋಷ್ಠಿ ಬಳಿಕ ಡಿಕೆಶಿ ಹೋಗಿದ್ದೆಲ್ಲಿಗೆ ಗೊತ್ತಾ?
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಸಚಿವ ಡಿಕೆಶಿ ಹಾಗೂ ಆಪ್ತರ ಮನೆ ಮೇಲೆ ನಡೆಯುತ್ತಿದ್ದ ಐಟಿ ದಾಳಿ ಇಂದು ಅಂತ್ಯವಾಗಿದೆ. ಐಟಿ ದಾಳಿ ಅಂತ್ಯವಾದ ಬಳಿಕ ಮನೆಯಿಂದ ಹೊರಬಂದ ಡಿಕೆಶಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಸಹಕರಿಸಿದ ಮಾಧ್ಯಮಗಳು, ಕಾಂಗ್ರೆಸ್ ಪಕ್ಷ ಹಾಗೂ ಇತರೆ ನಾಯಕರು, ಕಾರ್ಯಕರ್ತರು ಮತ್ತು ಅಧಿಕಾರಿಗಳಿಗೆ ಧನ್ಯವಾದ ಎಂದಿದ್ದಾರೆ.
ನಾನೇನು ಹಳ್ಳಿಯಿಂದ ಕಿವಿಗೆ ಹೂವಿಟ್ಟುಕೊಂಡು ಬಂದಿಲ್ಲ ಅಂದಿದ್ದಾರೆ. ಅಂತೆಯೆ ನಾನು ಕಾನೂನು ಚೌಕಟ್ಟಿನಲ್ಲೇ ವ್ಯವಹಾರ ಮಾಡಿದ್ದೇನೆ. ಈ ಬಗ್ಗೆ ಸದ್ಯ ಏನೂ ಹೆಳೋದಿಲ್ಲ. ಪಂಚನಾಮೆ ವರದಿ ಮೂಲಕ ನಿಮಗೇ ತಿಳಿಯಲಿದೆ. ಬಳಿಕ ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಅಂದಿದ್ದಾರೆ.
ಸದ್ಯ ನಾನು ನಂಬಿರುವ ನನ್ನಿಷ್ಟದ ದೇವರಿಗೆ ಹೊರಟಿದ್ದೇನೆಂದು ತಿಳಿಸಿದ್ದಾರೆ. ಆದರೆ, ಯಾವ ದೇವರು, ದೇಗುಲ ಎಲ್ಲಿದೆ ಎಂಬುದನ್ನು ಮಾತ್ರ ಡಿಕೆಶಿ ಬಿಟ್ಟುಕೊಟ್ಟಿಲ್ಲ. ದೇವರ ದರ್ಶನದ ಬಳಿಕ ನನ್ನನ್ನು ನಂಬಿ ಬಂದಿರುವ ಗುಜರಾತಿನ ಶಾಸಕರನ್ನು ಭೇಟಿ ಮಾಡುತ್ತೇನೆಂದು ತಿಳಿಸಿದರು.
ಬಳಿಕ ಎರಡು ಕಾರುಗಳಲ್ಲಿ ಡಿಕೆಶಿ ಮತ್ತಿತರರು ಇಷ್ಟ ದೇವರ ದರ್ಶನಕ್ಕೆ ಹೊರಟರು. ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು. ಅಜ್ಜಯ್ಯನ ಆಶೀರ್ವಾದ ಪಡೆದರು. ಬಳಿಕ ಕಬಾಳಮ್ಮ ದೇವಿ ದರ್ಶನ ಪಡೆದರೆಂದು ತಿಳಿದುಬಂದಿದೆ.
ಐಟಿ ಅಧಿಕಾರಿಗಳು ಮೂರು ಕಾರುಗಳಲ್ಲಿ ತೆರಳಿದ್ದಾರೆ. ಇಂದು ಸಂಜೆ ಒಳಗೆ ಆದಾಯ ತೆರಿಗೆ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ.