ಯಾದಗಿರಿಃ ಬಾಲ್ಯವಿವಾಹ ತಡೆದ ಅಧಿಕಾರಿಗಳು, ಕಣ್ಣೀರು ಹಾಕಿದ ಪೋಷಕರು
ಶಹಾಪುರಃಬಾಲ್ಯವಿವಾಹ ತಡೆ, ಪಾಲಕರಲ್ಲಿ ಕಣ್ಣೀರು.!
ಯಾದಗಿರಿ: ಸಂಭ್ರಮದಿಂದ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಇನ್ನೇನು ತಾಳಿ ಕಟ್ಟುವ ಸಮಯ ಅನ್ನುವಷ್ಟರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮದುವೆ ಸ್ಥಳಕ್ಕೆ ಆಗಮಿಸಿ ಬಾಲ್ಯ ವಿವಾಹ ತಡೆದ ಘಟನೆ ಬುಧವಾರ ನಡೆದಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ರಾಮನಾಯಕ ತಾಂಡದಲ್ಲಿ ಮದುವೆಗೆ ಸಿದ್ಧವಾಗಿದ್ದ ಮದುಮಕ್ಕಳು ಅಪ್ರಾಪ್ತರು ಎಂಬ ಖಚಿತ ಮಾಹಿತಿ ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಕವಿತಾ, ಪೊಲೀಸರೊಂದಿಗೆ ಮದುವೆ ಸ್ಥಳಕ್ಕೆ ತೆರಳಿ ಮದುವೆ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಅಲ್ಲದೆ ಮದುವೆ ಆಗುತ್ತಿರುವ ಮದುಮಕ್ಕಳ ವಯಸ್ಸು ಕುರಿತು ಪರಿಶೀಲನೆ ನಡೆಸಿದರು. ಅಂಜುಬಾಯಿ (12), ಜೊತೆ ಆಕಾಶ ರಾಠೋಡ (16) ವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಲಾಗಿದೆ.
ಈ ಸಂದರ್ಭದಲ್ಲಿ ಗೋಗಿ ಪಿಎಸ್ಐ ಕೃಷ್ಣಾ ಸುಬೇದಾರ ಇದ್ದರು. ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಅಧಿಕಾರಿಗಳು ಬಾಲ್ಯವಿವಾಹದ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸಿದ್ದಾರೆ.