ಕ್ಯಾಂಪಸ್ ಕಲರವ

ದೋರನಹಳ್ಳಿಯಲ್ಲಿ ಬೆಳ್ಳಿ ಚುಕ್ಕಿ ಧ್ವನಿ ಸುರಳಿ ಬಿಡುಗಡೆ

ಸಾಹಿತ್ಯ ಸಂಗೀತ ಒಂದೇ ನಾಣ್ಯದ ಎರಡು ಮುಖ-ವೀರಮಹಾಂತಶ್ರೀ

ಯಾದಗಿರಿ, ಶಹಾಪುರಃ ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳು. ಸಾಹಿತ್ಯ ಉತ್ತಮವಾಗಿದ್ದು, ಅದಕ್ಕೆ ತಕ್ಕ ರಾಗ ಸಂಯೋಜನೆ ಮಾಡಿದ್ದಲ್ಲಿ ಅದರ ಸೌಂದರ್ಯತೆ ಹೆಚ್ಚಾಗಲಿದೆ. ಅಲ್ಲದೆ ಜನಮಾನಸದಲ್ಲಿ ಆ ಹಾಡಿನ ರಾಗ, ಸಾಹಿತ್ಯ ಚಿರಕಾಲವಾಗಿ ಉಳಿಯಲಿದೆ ಎಂದು ಸ್ಥಳೀಯ ಹಿರೇಮಠದ ವೀರಮಹಾಂತ ಶಿವಾಚಾರ್ಯ ಅಭಿಪ್ರಾಯಪಟ್ಟರು.

ತಾಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಫ್ರೌಢಶಾಲೆಯಲ್ಲಿ ಜ್ಯೋತಿರ್ಗಮಯ ಸೇವಾ ಸಂಸ್ಥೆ (ರಿ) ವತಿಯಿಂದ “ಬೆಳ್ಳಿ ಚುಕ್ಕಿ” ಎಂಬ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯದಲ್ಲಿ ಸ್ವಾದವಿದ್ದು, ಸಂಗೀತದಲ್ಲಿ ಆ ಸ್ವಾದ ಕಾಣದಿದ್ದರೆ ಅದು ಸಮರ್ಪಕವೆನಿಸುವದಿಲ್ಲ. ಎರಡು ಒಂದಕ್ಕೊಂದು ಪೂರಕವಾಗಿದ್ದಲ್ಲಿ ಅದರ ಮಹತ್ವ ಹೆಚ್ಚಲಿದೆ. ನಮ್ಮೂರಿನ ಯುವಕ ಮಹೇಶ ಪತ್ತಾರ ಸಾಹಿತ್ಯ ಸಂಗೀತವನ್ನು ಮೈಗೂಡಿಸಿಕೊಂಡಿದ್ದು, ಆತನೇ ಸ್ವತಃ ರಚಿಸಿ, ರಾಗ ಸಂಯೋಜನೆ ಮಾಡಿದ್ದಲ್ಲದೆ ಧ್ವನಿ ಸಹ ನೀಡಿದ್ದಾನೆ. ಆತನ ಪ್ರಥಮ ಪ್ರಯತ್ನಕ್ಕೆ ಸರ್ವರ ಆಶೀರ್ವಾದವಿರಲಿ. ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ಮಕ್ಕಳ ಹಕ್ಕು, ಮಕ್ಕಳೇ ನಾಳಿನ ಪ್ರಜೆಗಳು ಸೇರಿದಂತೆ ಇತರೆ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವಂತ ಸಾಹಿತ್ಯ ಈ ಹಾಡುಗಳಲ್ಲಿದೆ. ಸಮಾಜದಲ್ಲಿರುವ ಮಕ್ಕಳ ಕಕ್ಕುಲತೆ ಬಗ್ಗೆ ಹಾಡುಗಳಲ್ಲಿ ಬಿಂಬಿಸಲಾಗಿದೆ. ಸಾಮಾಜಿಕವಾಗಿ ಈ ಸಿಡಿ ಉತ್ತಮ ಸಂದೇಶವನ್ನು ಸಾರಲಿದೆ. ಸರ್ವರೂ ಸಿಡಿಗಳನ್ನು ಖರೀದಿಸಿ ತಾವೂ ಹಾಡುಗಳನ್ನು ಕೇಳಬೇಕಲ್ಲದೆ ಮಕ್ಕಳಿಗೂ ಕೇಳಿಸಬೇಕು. ಇದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಅಲ್ಲದೆ ಇದರಲ್ಲಿ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಗೀತೆಯ ರಾಗ ಸಂಯೋಜನೆಯನ್ನು ಯಾದಗಿರಿಯ ಡಾನ್ ಬಾಸ್ಕೋ ಕಾಲೇಜಿನ ಪ್ರಾಂಶುಪಾಲ ಡಾ|ಜೋಶಿ ಪುತ್ತೂರ ಮಾಡಿದ್ದಾರೆ.

ಇನ್ನೊಂದು ಹಾಡಿಗೆ ಫಾಧರ್ ಸ್ಟಾಲಿನ್ “ಸಾಧಿಸಿ ಮಕ್ಕಳೇ” ಎಂಬ ಹಾಡಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಉಳಿದ ಹಾಡುಗಳಿಗೆ ಮಹೇಶ ಪತ್ತಾರ ಸಂಯೋಜಿಸಿರುವದು ಗ್ರಾಮಕ್ಕೆ ಹೆಮ್ಮೆ ತರುವ ಸಂಗತಿ ಎಂದರು.
ಬೆಳ್ಳಿ ಚುಕ್ಕಿ ಧ್ವನಿ ಸುರುಳಿಯು ಸಮಾಜದ ಅಂಧ, ಅನಾಥ ಬಡ ಮಕ್ಕಳ ಕುರಿತು ಜನಜಾಗೃತಿ ಮೂಡಿಸುವ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಶಿಕ್ಷಣದ ಸೌಲಭ್ಯಗಳು ಕುರಿತು ಮುಂತಾದ ಸಂದೇಶ ನಿಡುವ ಹಾಡುಗಳನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಶಿಕ್ಷಕ ಅರವಿಂದ ಚೌದರಿ, ಎಂ.ಎಸ್.ಪಾಟೀಲ್, ಸವಿತಾ, ಶ್ರೀದೇವಿ, ಸವಿತಾ, ಮೃಗೇಂದ್ರ ಸ್ವಾಮಿ, ದೇವಿಂದ್ರಪ್ ಬಳಪಟ್ಟಿ, ಗುಂಡೇರಾವ್, ಲಿಂಗಣ್ಣ ಗೌಡ ಸೇರಿದಂತೆ ಗ್ರಾಮದ ಹಿರಿಯರಾದ ಚಂದ್ರಶೇಖರ ಪತ್ತಾರ, ಸಿದ್ದು ಸಗರ, ಮಹಾದೇವಪ್ಪ ಹುಡೇದ್ ಇತರರಿದ್ದರು.

ಚಂದ್ರಕಲಾ ನಿರೂಪಿಸಿದರು. ಎಲ್ಪಾ ಪತ್ತಾರ ಪ್ರಾರ್ಥಿಸಿದರು. ಅನೀಲ್ ಕಲಾಲ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಟ್ಟಿಮನಿ ವಂದಿಸಿದರು. ಇದೇ ಸಂದರ್ಭದಲ್ಲಿ ವಿಶೇಷವಾಗಿ ಫಾದರ್ ಸ್ಟಾಲಿನ್, ಶ್ರೀನಿವಾಸ ಕಶೆಟ್ಟಿ, ನಿಜಗುಣ ದೋರನಹಳ್ಳಿ ಇತರೆ ಸಾಧಕರನ್ನು ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button