ಕಲಬುರಗಿ: ಪ್ರೇಮಜೋಡಿಯ ಕಗ್ಗೊಲೆ, ಮರ್ಯಾದಾ ಹತ್ಯೆ ಶಂಕೆ?
ಕಲಬುರಗಿ: ಶಹಾಪುರ ತಾಲೂಕಿನ ದರ್ಶನಾಪುರ ಗ್ರಾಮದ ಲಕ್ಷ್ಮೀಬಾಯಿ, ಜೇವರಗಿ ಮೂಲದ ಶರಣು ಕಟ್ಟಿ ಪ್ರೀತಿಸಿ ಮದುವೆ ಆಗಿದ್ದರಂತೆ. ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ವ್ಯಕ್ತವಾಗಿತ್ತಂತೆ. ಆದರೆ, ಪೋಷಕರ ವಿರೋಧ ಲೆಕ್ಕಿಸದೆ ಜಾತಿ ಗೋಡೆ ಮೀರಿ ಪ್ರೇಮ ಜೋಡಿ ಮದುವೆಯಾಗಿ ಸಂಸಾರ ನಡೆಸುತ್ತಿತ್ತು. ಆದರೆ, ಇಂದು ಪ್ರೇಮ ಜೋಡಿ ಶವವಾಗಿ ಪತ್ತೆಯಾಗಿದೆ.
ಜೇವರಗಿ ತಾಲೂಕಿನ ಯಡ್ರಾಮಿ ಗ್ರಾಮದ ಸಮೀಪ ಶರಣು ಕಟ್ಟಿ (25) ಶವ ಪತ್ತೆಯಾಗಿದೆ. ಮಾರಕಾಸ್ತ್ರಗಳಿಂದ ತಿವಿದು ಹತ್ಯೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಮತ್ತೊಂದು ಕಡೆ ವಸ್ತಾರಿ ಗ್ರಾಮದ ಸಮೀಪ ಶರಣು ಪತ್ನಿ ಲಕ್ಷ್ಮೀಬಾಯಿ (23) ಶವವಾಗಿ ಪತ್ತೆಯಾಗಿದ್ದಾಳೆ. ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದಾಗಿ ಕಂಡು ಬರುತ್ತಿದೆ.
ಇಬ್ಬರು ಒಂದೇ ದಿನ ಹತ್ಯೆಯಾಗಿರುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಎಲ್ಲೆಡೆ ಜನರನ್ನು ಬೆಚ್ಚಿ ಬೀಳಿಸಿದೆ. ಶರಣು – ಲಕ್ಷ್ಮೀಬಾಯಿ ಜೋಡಿ ಪ್ರೀತಿಸಿ ವಿವಾಹವಾದ ಹಿನ್ನೆಲೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಯಡ್ರಾಮಿ ಠಾಣೆಯಲ್ಲಿ ಶರಣು ಹತ್ಯೆ ಪ್ರಕರಣ ದಾಖಲಾಗಿದೆ. ನೆಲೋಗಿ ಠಾಣೆಯಲ್ಲಿ ಲಕ್ಷ್ಮೀಬಾಯಿ ಹತ್ಯೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಪ್ರಕರಣ ಬಯಲಾಗಬೇಕಿದೆ. ಕೊಲೆಗಡುಕರಿಗೆ ಶಿಕ್ಷೆಯಾಗಬೇಕಿದೆ.