ಎಂಟು ದಿನದಲ್ಲಿ ಜೋಡಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು, ಆರೋಪಿಗಳು ಅರೆಸ್ಟ್!
ಕಲಬುರಗಿ: ಜೇವರಗಿ ತಾಲೂಕಿನ ಪ್ರತ್ಯೇಕ ಗ್ರಾಮಗಳಲ್ಲಿ ನಡೆದಿದ್ದ ದಂಪತಿಯ ಜೋಡಿ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆರಂಭದಲ್ಲಿ ಮರ್ಯಾದಾ ಹತ್ಯೆ ಎಂಬ ಅನುಮಾನ ವ್ಯಕ್ತವಾಗಿತ್ತು. ಅಲ್ಲದೆ ಪ್ರಕರಣ ಬೇಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ, ಪ್ರಕರಣ ನಡೆದ ಎಂಟು ದಿನಗಳಲ್ಲಿ ಪೊಲೀಸರು ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ.
ಆಸ್ತಿ ವಿಚಾರಕ್ಕಾಗಿ ಹತ್ಯೆಯಾಗಿರುವ ಶರಣು ಕಟ್ಟಿ ಅವರ ಸಹೋದರ ಚಂದ್ರಕಾಂತ್ ಕಟ್ಟಿ ಮತ್ತು ರವಿ ಐರಸಂಗ ಎಂಬುವರು ಸೇರಿಕೊಂಡು ಶರಣು ಕಟ್ಟಿ ಮತ್ತು ಆತನ ಪತ್ನಿಯಾಗಿದ್ದ ಲಕ್ಷ್ಮೀಯನ್ನು ಹತ್ಯೆಗೈದದ್ದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸ್ರು ಬಂಧಿಸಿದ್ದಾರೆ.
ಹಿನ್ನೆಲೆ: ಶಹಾಪುರ ತಾಲೂಕಿನ ದರ್ಶನಾಪುರ ಗ್ರಾಮದ ಲಕ್ಷ್ಮೀಬಾಯಿ, ಜೇವರಗಿ ಮೂಲದ ಶರಣು ಕಟ್ಟಿ ಪ್ರೀತಿಸಿ ಮದುವೆ ಆಗಿದ್ದರಂತೆ. ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ವ್ಯಕ್ತವಾಗಿತ್ತಂತೆ. ಆದರೆ, ಪೋಷಕರ ವಿರೋಧ ಲೆಕ್ಕಿಸದೆ ಜಾತಿ ಗೋಡೆ ಮೀರಿ ಪ್ರೇಮ ಜೋಡಿ ಮದುವೆಯಾಗಿ ಸಂಸಾರ ನಡೆಸುತ್ತಿತ್ತು. ಆದರೆ, ಕಳೆದ 22ನೇ ತಾರೀಖು ಪ್ರೇಮ ಜೋಡಿ ಶವವಾಗಿ ಪತ್ತೆಯಾಗಿತ್ತು.
ಜೇವರಗಿ ತಾಲೂಕಿನ ಯಡ್ರಾಮಿ ಗ್ರಾಮದ ಸಮೀಪ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಶರಣು ಕಟ್ಟಿ (25) ಹತ್ಯೆ ಮಾಡಲಾಗಿತ್ತು. ಮತ್ತೊಂದು ಕಡೆ ವಸ್ತಾರಿ ಗ್ರಾಮದಲ್ಲಿ ಶರಣು ಅವರ ಪತ್ನಿ ಲಕ್ಷ್ಮೀಬಾಯಿ (23) ಶವವಾಗಿ ಪತ್ತೆಯಾಗಿದ್ದಳು.
ಇಬ್ಬರು ಒಂದೇ ದಿನ ಹತ್ಯೆಯಾಗಿರುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಶರಣು – ಲಕ್ಷ್ಮೀಬಾಯಿ ಜೋಡಿ ಪ್ರೀತಿಸಿ ವಿವಾಹವಾದ ಹಿನ್ನೆಲೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಯಡ್ರಾಮಿ ಠಾಣೆಯಲ್ಲಿ ಶರಣು ಹತ್ಯೆ ಪ್ರಕರಣ ದಾಖಲಾಗಿದ್ದರೆ, ನೆಲೋಗಿ ಠಾಣೆಯಲ್ಲಿ ಲಕ್ಷ್ಮೀಬಾಯಿ ಹತ್ಯೆ ಪ್ರಕರಣ ದಾಖಲಾಗಿತ್ತು.