ಹೆತ್ತಮ್ಮನನ್ನು ವೃದ್ಧಾಶ್ರಮಕ್ಕೆ ಕರೆದೊಯ್ದ ಮಗ ಏನ್ಮಾಡಿದ ಗೊತ್ತಾ.? ಈ ಕಥೆ ಓದಿ
ದಿನಕ್ಕೊಂದು ಕಥೆ
ವೃದ್ಧಾಶ್ರಮ
ಯಶೋದಮ್ಮನಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ.ಮಗ ಅಂದ ಮಾತು ಕೇಳಿ ಸಿಡಿಲು ಬಡಿದಂತಾಗಿತ್ತು.ಪಾಪ! ನಿದ್ದೆಯಾದರೂ ಹೇಗೆ ಬಂದೀತು?
ಅಲ್ಲಿ,ಇಲ್ಲಿ ಕೆಲವು ಸುದ್ದಿ ಕೇಳಿದ್ದಿತ್ತು,ಮಕ್ಕಳು ತಂದೆ ,ತಾಯಿಯನ್ನ ವೃದ್ಧಾಶ್ರಮಕ್ಕೆ ಸೇರಿಸುವುದನ್ನು.! ಆದರೆ ತನಗೂ ಒಂದೊಮ್ಮೆ ಅದೇ ದುರ್ಗತಿ ಬಂದೀತೆಂದು ಕನಸಲ್ಲೂ ಎಣಿಸಿರಲಿಲ್ಲ.
ಮಗ ಒಳ್ಳೆಯವನೇ,ಪಾಪ! ಎಲ್ಲಾ ಸೊಸೆಯದ್ದೇ ಕಾರುಬಾರು! ಇಲ್ಲಿ ತನಕ ತೋರಿಸುತ್ತಿದ್ದ ಪ್ರೀತಿ ಎಲ್ಲಾ ಬರೇ ನಾಟಕವೇ..?
ರಾತ್ರಿ ಊಟದ ಸಮಯದಲ್ಲಿ ಮಗನಂದಿದ್ದ,” ಅಮ್ಮಾ,ನಾಳೆ ಬೆಳಿಗ್ಗೆ ಸ್ವಲ್ಪ ಬೇಗ ರೆಡಿಯಾಗು.ವೃದ್ಧಾಶ್ರಮಕ್ಕೆ ಹೋಗಬೇಕು.ಎಲ್ಲಾ ಏರ್ಪಾಡು ಮಾಡಿಸಿದ್ದೇನೆ.ಬೇಗ ಬರೋದಕ್ಕೆ ಹೇಳಿದ್ದಾರೆ.”
ಆಮೇಲೆ ಯಶೋದಮ್ಮನಿಗೆ ಗಂಟಲಲ್ಲಿ ಅನ್ನ ಇಳಿಯಲಿಲ್ಲ.
ರಾತ್ರಿ ಒಂದು ಯುಗದಂತೆ ಕಳೆದಿತ್ತು.
ಬೆಳಿಗ್ಗೆ ಸೊಸೆ ಗಡಿಬಿಡಿಯಿಂದ ಓಡಾಡುತ್ತಿದ್ದಳು.ಅತ್ತೆ ಬಳಿಗೆ ಬಂದು ಹೇಳಿದಳು,” ನೀವು ಬೇಗ ರೆಡಿಯಾಗಿ ಅತ್ತೆ, ನಾನು ಪ್ಯಾಕ್ ಮಾಡಿ ರೆಡಿಯಾಗ್ತೀನಿ.”
ಯಶೋದಮ್ಮನಿಗೆ ಜೋರಾಗಿ ಅತ್ತುಬಿಡಬೇಕೆನಿಸಿತು.ಸೊಸೆಯೆದುರು ತನ್ನ ದೌರ್ಬಲ್ಯ ತೋರಬಾರದೆಂದು ತಡೆದುಕೊಂಡರು.ಅವರಿಗೇ ಬೇಡವಾದ ಮೇಲೆ ತಾನು ಎಲ್ಲಿದ್ದರೇನು ಅಂತ ಮನಸ್ಸು ಗಟ್ಟಿ ಮಾಡಿಕೊಂಡರೂ,ಕ್ಷಣಕ್ಷಣಕ್ಕೂ ದುರ್ಬಲವಾಗುತ್ತಿತ್ತು..ನಾಲ್ಕು ವರ್ಷದ ಹಿಂದೆ ತೀರಿಕೊಂಡ ಯಜಮಾನರ ನೆನಪು ಬಾರಿಬಾರಿಗೂ ಆಗುತ್ತಿತ್ತು.!
“ಬಾರಮ್ಮಾ,ಹೊತ್ತಾಯಿತು” ಅಂತ ಮಗ ಕರೆದಾಗ ಯಾಂತ್ರಿಕವಾಗಿ ಹಿಂಬಾಲಿಸಿದರು.ಸೊಸೆ ಪ್ಯಾಕ್ ಮಾಡಿದ ದೊಡ್ಡ ಬ್ಯಾಗ್ ಅನ್ನು ಕಾರ್ ಡಿಕ್ಕಿಯಲ್ಲಿಟ್ಟಳು.
ಅರ್ಧ ಗಂಟೆಯಲ್ಲಿ ಆಶ್ರಮ ತಲುಪಿದರು.ಹಿಂದಿನ ಸೀಟಿನಲ್ಲಿದ್ದ ಯಶೋದಮ್ಮನನ್ನು ಇಳಿಸಿ,’ಭಾಮ್ಮಾ” ಅಂತ ಮಗ ಹೆಗಲು ಬಳಸಿ ಒಳಗೆ ಕರೆದೊಯ್ದಾಗ,ಅಸಂಕಲ್ಪಿತವಾಗಿ ಯಶೋದಮ್ಮನ ಕಣ್ಣಿಂದ ಬಳಬಳ ನೀರು
ಸುರಿಯಿತು.ಮಗ ತೋರಿಸುವ ಈ ಅಕ್ಕರೆಯೆಲ್ಲಾ ಬರೇ ಬೂಟಾಟಿಕೆಯೇ?
ಆಫೀಸು ರೂಮಿನ ದಾರಿಯಲ್ಲಿ ಸಿಕ್ಕ ಒಂದೆರಡು ವೃದ್ಧರು ತನ್ನತ್ತ ಕನಿಕರದಿಂದ ನೋಡಿದಂತೆ ಭಾಸವಾಯ್ತು ಯಶೋದಮ್ಮನಿಗೆ.
ಮಗ ಮೊದಲೇ ತಿಳಿಸಿದ್ದರಿಂದ ಆಫೀಸಿನಲ್ಲಿ ಮಾತುಕತೆ ಬೇಗ ಮುಗಿಯಿತು.ಹೆಚ್ಚಿನ ಮಾತುಕತೆ ಇಂಗ್ಲೀಷಿನಲ್ಲಿದ್ದುದರಿಂದ ಯಶೋದಮ್ಮನಿಗೇನೂ ಅರ್ಥವಾಗಲಿಲ್ಲ.
ಅಲ್ಲಿಂದ ಎಲ್ಲರೂ ಆಶ್ರಮದ ಒಳಗೆ ಹೋದರು.ಒಳಗೆ ದೊಡ್ದದೊಂದು ಹಾಲ್.ಅಲ್ಲಿ ಆಶ್ರಮದಲ್ಲಿರುವ ಹಿರಿಯ ಜೀವಿಗಳೆಲ್ಲಾ ಸೇರಿದ್ದರು.ಹೆಚ್ಚುಕಮ್ಮಿ ನೂರೈವತ್ತು ಜನ.ಬಹುಶ: ತನ್ನನ್ನು ಹೊಸ ಮೆಂಬರು ಅಂತ ಪರಿಚಯಿಸುತ್ತಾರೇನೋ ಅಂದುಕೊಂಡರು ಯಶೋದಮ್ಮ.ಆದರೆ…
ಅವರ ನಿರೀಕ್ಷೆಗೆ ವಿರುದ್ಧವಾಗಿ ಒಮ್ಮೆಲೇ ಅಲ್ಲಿದ್ದವರೆಲ್ಲಾ,”ಹ್ಯಾಪಿ ಬರ್ತ್ ಡೇ ಟೂ ಯೂ ” ಅಂತ ರಾಗವಾಗಿ ಹಾಡತೊಡಗಿದಾಗ ಯಶೋದಮ್ಮ ದಿಗ್ಭ್ರಮೆಗೊಂಡರು.
“ಅಮ್ಮಾ,ನಿನಗೊಂದು ಚಿಕ್ಕ ಸರ್ ಪ್ರೈಸ್ ಕೊಡೋಣ ಅಂತ ಮೊದಲೇ ಹೇಳಿರಲಿಲ್ಲ,ಕ್ಷಮಿಸಮ್ಮಾ..” ಅಂತ ಮಗ
ಹೆಗಲಿಗೆ ಕೈ ಹಾಕಿ ನಕ್ಕಾಗ ಯಶೋದಮ್ಮನಿಗೆ ಅಳುವೇ ಬಂದುಬಿಡ್ತು.ಸೊಸೆಯೂ ಹತ್ತಿರ ಬಂದು ಬಳಸಿ ಹಿಡಿದಳು.”ನಾನು ಹೇಳಿದೆ,ಅತ್ತೇ.ನಿಮ್ಗೆ ಶಾಕ್ ಆದೀತು ಮೊದ್ಲೇ ಹೇಳಿಬಿಡಿ ಅಂತ,ಇವ್ರು ನನ್ನ ಬಾಯಿ ಮುಚ್ಚಿಸಿದ್ರು”ಅಂದಳು ಅಮ್ಮನ ಬಳಿ ದೂರುವ ಮಗುವಿನಂತೆ.ಯಶೋದಮ್ಮ ನಿರಾಳವಾಗಿ ನಕ್ಕರು.
“ಬಾಮ್ಮಾ..ಈ ಸಲದ ನಿನ್ನ ಹುಟ್ಟುಹಬ್ಬ ಈ ಆಶ್ರಮದಲ್ಲಿ ಮಾಡೋದು ಅಂತ ಡಿಸೈಡ್ ಮಾಡಿದ್ವಿ.ಇಲ್ಲಿರುವವರಿಗೆಲ್ಲಾ ನಿನ್ನ ಕೈಯಾರ ಹೊಸ ಬಟ್ಟೆ ,ಸಿಹಿತಿಂಡಿ ಕೊಡು.ಎಲ್ಲಾ ಜೊತೆಯಾಗಿ ಊಟ ಮಾಡಿ ಹೋಗೋಣ” ಮಗ ಅಂದಾಗ ಯಶೋದಮ್ಮನ ಎದೆ ಸಂತೋಷದಿಂದ ಭಾರವಾಗಿತ್ತು..!! ..!
*ತಂದೆ ತಾಯಿಯನ್ನು ದೇವರೆಂದು ಪೂಜಿಸುವ ಮಕ್ಕಳಿಗಾಗಿ.*
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882