ಸಾಹಿತ್ಯ ಶ್ರೀ ಪ್ರಶಸ್ತಿಗೆ ಡಾ.ರಂಗರಾಜ ಆಯ್ಕೆ-ಹರ್ಷ
ಡಾ.ರಂಗರಾಜ ವನದುರ್ಗ ಅವರಿಗೆ ಸಾಹಿತ್ಯ ಶ್ರೀ ಪ್ರಶಸ್ತಿ
ಯಾದಗಿರಿ ಶಹಾಪುರಃ ನಾಡಿನ ಸಾಂಸ್ಕøತಿಕ ಚಿಂತಕ, ಲೇಖಕ, ಸಾಹಿತಿ, ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲ ಸಚಿವ ಹಾಗೂ ಶಹಾಪೂರ ತಾಲೂಕಿನ ವನದುರ್ಗ ಗ್ರಾಮದವರಾದ ಡಾ. ರಂಗರಾಜು ವನದುರ್ಗ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಸಾಹಿತ್ಯ ಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಡಾ. ರಂಗರಾಜ ವನದುರ್ಗ ಅವರು ನಮ್ಮ ಶ್ರೇಣಿ ಕೃತ ವ್ಯವಸ್ಥೆಯ ತಳ ಸಮಾಜದಲ್ಲಿ ಜನಿಸಿ ಅಲ್ಲಿನ ನೋವುಗಳನ್ನು ಅನುಭವಿಸಿ ತಮ್ಮ ಪ್ರತಿಭೆ, ಗಂಭೀರವಾದ ಅಧ್ಯಯನ ಸಾಧನೆಯ ಛಲದಿಂದ, ಪ್ರಾಮಾಣಿಕತೆಯಿಂದ ಅತ್ಯಂತ ಎತ್ತರಕೇರಿದ ಪ್ರಜ್ಞಾವಂತ, ಪ್ರಗತಿಪರ, ದಲಿತ ಸಂವೇಧನಾಶೀಲ ಚಿಂತಕರಾಗಿದ್ದಾರೆ.
ಇದುವರೆಗೆ ಸುಮಾರು 40ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ನಾಡಿನ ಸಾರಸತ್ವ ಲೋಕಕ್ಕೆ ಅರ್ಪಿಸಿರುವ ಅವರು ಬದುಕು, ಬರಹ ಮತ್ತು ವೃತ್ತಿ ಬದ್ಧತೆ ಇವುಗಳ ಸಮನ್ವಯತೆಯೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಂಥವರು.
ಪರಂಪರೆಯಲ್ಲಿನ ಮೌಲ್ಯಗಳು, ಜನಸಮುದಾಯಗಳ ಬದುಕನ್ನು ಬಡವರ, ದೀನ ದಲಿತರ, ದುಡಿಯವ ವರ್ಗಗಳ ಸಂವೇದನೆಯ ಮೂಲಕ ತಮ್ಮ ಸಾಹಿತ್ಯದಲ್ಲಿ ಸಮಾಜಕ್ಕೆ ಮುಖಾಮುಖಿಯಾಗುತ್ತಾರೆ. ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಸಾಹಿತ್ಯ ಶ್ರೀ ಪ್ರಶಸ್ತಿ ಲಭಿಸಿರುವುದು ಸಾಹಿತ್ಯ ಅಭಿಮಾನಿಗಳಾದ ನೂರಾರು ಜನರಿಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.