ಬಡವರ ಸೇವೆ ವೃತ್ತಿಯಲ್ಲಿ ಅಗಾಧ ಶಕ್ತಿ ನೀಡಲಿದೆ- ಡಿವೈಎಸ್‍ಪಿ ವೆಂಕಟೇಶ
250 ಕ್ಕೂ ಹೆಚ್ಚು ಜನರಿಗೆ ತಪಾಸಣೆ, ಸೂಕ್ತ ಚಿಕಿತ್ಸೆಗೆ ನೆರವು
ಯಾದಗಿರಿ, ಶಹಾಪುರಃ ಯಾವುದೇ ವೃತ್ತಿಯಲ್ಲಿ ಕೈಲಾದಷ್ಟು ಬಡವರಿಗೆ ಸಹಾಯ ಸಹಕಾರ ನೀಡುವ ಕೆಲಸ ಮಾಡಿದಲ್ಲಿ ಆ ವೃತ್ತಿಯ ಪಾವಿತ್ರ್ಯತೆ ಜೊತೆಗೆ ಮನುಷ್ಯನಿಗೆ ನೆಮ್ಮದಿ ದೊರೆಯಲಿದೆ ಆ ಸೇವೆ, ವೃತ್ತಿ ಮುಂದುವರೆಕೆಗೆ ಶಕ್ತಿ, ಪ್ರೋತ್ಸಾಹ ನೀಡಲಿದೆ ಎಂದು ಸುರಪುರ ಡಿವೈಎಸ್‍ಪಿ ವೆಂಕಟೇಶ ಹೊಗಿಬಂಡಿ ತಿಳಿಸಿದರು.
ನಗರದ ನವೋದಯ ಸೂಪರ್ ಸ್ಪೆಷಾಲಿಟಿ ಸೆಂಟರ್‍ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೈದ್ಯರಾದವರ ಸೇವೆ ಅಪಾರವಾಗಿದೆ. ಉಚಿತ ಆರೋಗ್ಯ ಶಿಬಿರದ ಮೂಲಕ ಬಡ ಜನರ ಸೇವೆ ಮಾಡುತ್ತಿರುವದು ಶ್ಲಾಘನೀಯ. ಅಲ್ಲದೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ತಪಾಸಣೆ ಕುರಿತು ಜಾಗೃತಿ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಇಂತಹ ಶಿಬಿರಗಳು ಜನರನ್ನು ಜಾಗೃತಗೊಳಿಸುವ ಕಾರ್ಯ ಮಾಡಲಿವೆ. ನಾಗರಿಕರು ಶಿಬಿರಿದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯವೇ ಭಾಗ್ಯ ಆರೋಗ್ಯ ಸರಿ ಇದ್ದರೆ ಮಾತ್ರ ಮುಂದೆ ಏನಾದರೂ ಸಾಧಿಸಲು ಕೆಲಸ ಕಾರ್ಯ ಮಾಡಲು ಸಾಧ್ಯವಿದೆ. ಆರೋಗ್ಯ ಹದಗೆಟ್ಟಲ್ಲಿ ಮುಂದೆ ಬದುಕು ದುಸ್ತರವಾಗಲಿದೆ. ಕಾರಣ ಆರೋಗ್ಯ ಹದಗೆಡುವ ಮುನ್ನ ಸಮರ್ಪಕವಾಗಿ ತಪಾಸಣೆ ಮಾಡಿಸಿಕೊಳ್ಳಿ. ಉಗುರಿನಿಂದ ಹೋಗುವದನ್ನು ನಿರ್ಲಕ್ಷವಹಿಸಿ ಕೊಡಲಿ ಪೆಟ್ಟು ಬೀಳುವವರೆಗೆ ಕಾಯದಿರಿ ಎಂದು ಸಲಹೆ ನೀಡಿದರು.
ಶಿಬಿರದಲ್ಲಿ 250 ಕ್ಕೂ ಹೆಚ್ಚು ಶುಗುರ್, ಬಿಪಿ, ಹೃದಯ ಸಂಬಂಧಿ ಖಾಯಿಲೆ ಹಾಗೂ ದಂತ ರೋಗಗಳನ್ನು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಕಲಬುರ್ಗಿ ವಿಭಾಗದ ಖ್ಯಾತ ಹೃದಯ ತಜ್ಞ ಡಾ.ಶಂಕರಗೌಡ ಜಿ.ಹೆಚ್. ಸಕ್ಕರೆ ಖಾಯಿಲೆ ತಜ್ಞ ಡಾ.ಸಂತೋಷ ಹರಕುಡೆ, ಎಲಬು, ಕೀಲು ತಜ್ಞ ಡಾ.ಶ್ರೀಧರ ಲಾಕೆ, ಜನರಲ್ ಮೆಡಿಸನ್ ಡಾ.ಅರುಣ ಮಹಾಮನಿ, ಸ್ತ್ರೀರೋಗ ತಜ್ಞೆ ಡಾ.ಜ್ಯೋತಿ ಧೋತ್ರೆ, ದಂತ ತಜ್ಞ ಡಾ.ಗುರುರಾಜ ಅರಕೇರಿ, ಶಸ್ತ್ರ ಚಿಕಿತ್ಸೆ ತಜ್ಞ ಡಾ.ದೀಪಕ ಕುಮಾರ ಹಾಗೂ ಡಾ.ವಿಜಯ ಮೋಹನ್ ತಪಾಸಣೆ ನಡೆಸಿದರು. ಡಾ.ಸುದತ್ ದರ್ಶನಾಪುರ ಸೇರಿದಂತೆ ಸಾಹೇಬಗೌಡ ಆಲ್ದಾಳ, ಶಿವಕುಮಾರ ಮಾಕಲ್, ಸತೀಶ ಅಲಬನೂರ ಇತರರಿದ್ದರು.