‘ಎರೆಹೊಲದ ಹುಡುಗಿ’ ಸಂಗ ಮರೆತೇನೆಂದರ ಮರೆಯಲಿ ಹ್ಯಾಂಗ!
ಹಳ್ಳದ ದಂಡ್ಯಾಗ
ಗುಬ್ಬಿಯ ಗೂಡು ಕಟ್ಟಿ
ಹಾಡಿದ್ದು ನೀ ಮರತಿಯೇನಾ
ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ…
ಈ ಹಾಡು ಬರೆದ ಪುಣ್ಯಾತ್ಮ ನನ್ನೆದುರು ಬಂದರೆ ಮೊದಲು ಕಾಲಿಗೆ ಬಿದ್ದು ಕೇಳ್ತೀನಿ. ನನಗಾಗಿಯೇ ಬರೆದಿಯೇನೋ ಮಹಾರಾಯ. ಅದೆಷ್ಟು ಸಲ ನನಗ ಕಣ್ಣೀರು ಹಾಕಸ್ತೀದಿ. ಹಾಡು ಕೇಳಿದಾಗಲೆಲ್ಲಾ ನಡು ಜಾತ್ರೆಯಲ್ಲಿದ್ದರೂ ಕಣ್ಣೀರ ಹನಿ ಧರೆಗಿಳಿಯುತ್ತದೆ. ನನ್ನ ಎರೆ ಹೊಲದ ಹುಡುಗಿ ನೆನಪಾಗಿ ಜೀವನಾನೇ ಸಾಕೆನ್ನಿಸುತ್ತದೆ ಅಂತ ಎದಿಮ್ಯಾಲಿನ ಅಂಗಿ ಹಿಡಿದು ಕೇಳತೀನಿ.
ಹೌದು ಬ್ಯೂಟಿ, ನನ್ನ ಜೀವನದಾಗ ಏನೆಲ್ಲಾ ಖುಷಿ ಬಂದಿರಬಹುದು. ನಶೆ ತುಂಬಿರಬಹುದು. ಆದರೆ, ನಿನ್ನೊಂದಿಗೆ ಕಳೆದ ಎರೆಹೊಲದ ಪ್ರೇಮ ಸಮಯ ಮಾತ್ರ ಮತ್ತೆ ಆ ದೇವರಿಂದಲೂ ನೀಡಲು ಸಾಧ್ಯವಿಲ್ಲ ಬಿಡು. ಮುಂದೊಂದು ದಿನ ಆ ಎರೆಹೊಲದಲ್ಲಿ ನಮ್ಮ ಪ್ರೀತಿಯ ತಾಜ್ ಮಹಲ್ ನಿರ್ಮಿಸೋದು ನನ್ನ ಕೊನೆಯ ಮತ್ತು ಏಕಮಾತ್ರ ಕನಸು ಕಣೆ.
ಪಾಪ, ನಾವಿಬ್ಬರು ದೂರಾಗಿದ್ದು ಕಂಡು ಆ ಎರೆಹೊಲ ಬರುಡಾಗಿದೆ ಕಣೆ. ಇಡೀ ಊರಿಗೇ ಮಳೆ ಬಂದರೂ ಆ ಎರೆಹೊಲಕ್ಕೆ ಮಾತ್ರ ಮಳೆ ಸುರಿದಿಲ್ಲ. ನನ್ನ ನಿನ್ನ ಕಣ್ಣೀರ ಹನಿ ಬಿದ್ದಿರುವ ಆ ಎರೆಹೊಲದಲ್ಲಿ ಇನ್ನೇನು ತಾನೇ ಬೆಳೆಯಲು ಸಾಧ್ಯ ಹೇಳು. ಪಶ್ಚಿಮ ಮೂಲೆಯಲ್ಲಿತ್ತಲ್ಲ ಆ ಮಾವಿನ ಮರವೂ ಸಹ ನನ್ನಂತೆಯೇ ಒಣಗಿದೆ ಕಣೆ.
ನನ್ನ ಬೈಕಿನ ಸದ್ದು ಕೇಳಿದರೆ ಸಾಕು ಎರೆಹೊಲದ ರಂಗೇ ಬದಲಾಗುತ್ತಿತ್ತು. ಮಾವಿನ ಮರದಲ್ಲಿ ಕೋಗಿಲೆ ಗಾನ. ಕ್ಯಾನಲ್ ನಲ್ಲಿ ಹರಿಯುವ ನೀರಿನ ಝುಳುಝುಳು ನಾದ ತನ್ನಿಂತಾನೆ ಹೆಚ್ಚುತ್ತಿತ್ತು. ನಮ್ಮ ಎತ್ತುಗಳೂ ಸಹ ಗೆಜ್ಜೆನಾದ ಮೊಳಗಿಸಿ ಸ್ವಾಗತಿಸುತ್ತಿದ್ದವು. ನಮ್ಮ ಪ್ರೇಮ ಕುಟೀರ ಯಾವ ತಾಜಮಹಲ್ ಗೆ ಕಡಿಮೆಯಿತ್ತು ಹೇಳು. ಅಲ್ಲಿ ನಾವು ರೇಡಿಯೋ ಹಾಕಿದರೆ ಸಾಕು ನಮಗಾಗಿಯೇ ರಚಿಸಿದ ಗಾನಮಳೆ.
ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ… ಈ ಸಂಭಾಷಣೆ… ಪ್ರೀತಿಯೆ ನನ್ನುಸಿರು… ಪ್ರೀತಿಯ ಹಾಡುಗಳ ಸುರಿಮಳೆ. ಅದೆಷ್ಟು ನಗು, ಅದೆಷ್ಟು ಖುಷಿ, ಅದೆಷ್ಟು ನಗೆಚಟಾಕಿ, ನಿನ್ನ ಬಳೆ ಸದ್ದು, ಸಾತೋಂ ಜನಮ್ ಮೈ ತೇರಿ ಸಾಥ್ ರಹೂಂಗಾ ಯಾರ್ ಅಂತ ಹಾಡುತ್ತಿದ್ದ ನಿನ್ನ ಮೊಬೈಲ್ ರಿಂಗ್ ಟೋನ್ ಎಲ್ಲವನ್ನೂ ಕಣ್ಣಾರೆ ಕಂಡಿದ್ದ ಎರೆಹೊಲದಲ್ಲೀಗ ಸ್ಮಶಾನ ಮೌನ. ಆಗೊಮ್ಮೆ ಈಗೊಮ್ಮೆ ನನ್ನ ಕಣ್ಣೀರ ಹನಿ, ಅಳುವಿನ ದನಿ.
ನಿಷ್ಕಲ್ಮಶ ಪ್ರೇಮ ಸಂಭ್ರಮ ಆಲಿಸಿದ್ದ ಎರೆಹೊಲಕ್ಕೇ ನಮ್ಮ ಭಗ್ನ ಪ್ರೇಮ ಕಂಡು ಅರಗಿಸಿಕೊಳ್ಳಲು ಆಗಿಲ್ಲ. ಇನ್ನು ನನ್ನ ಸ್ಥಿತಿ ಕೇಳಲೇಬೇಡ ಕಣೇ… ಅಂದ ಹಾಗೇ ನೀನು ನಿನ್ನ ಕೈಹಿಡಿದವನ ಜೊತೆ ಮೊದಲ ಸಂಕ್ರಾಂತಿಗೆ ಊರಿಗೆ ಬಂದ ಸುದ್ದಿ ತಿಳಿಯಿತು. ಚನ್ನಾಗಿದ್ದೀಯಾ , ಚನ್ನಾಗಿರಲಿ ಎಂಬ ಸದಾಶಯ ನನ್ನದು. ಊರಿಗೆ ಬರುವಾಗ ಬೇಡ ಬೇಡ ಅಂದುಕೊಂಡರೂ ಎರೆ ಹೊಲದ ಕಡೆ ಒಮ್ಮೆಯಾದ್ರೂ ನಿನ್ನ ಕಣ್ಣು ಹೊರಳಿರುತ್ತದೆಂಬುದು ನನಗ್ಗೊತ್ತು. ನಿನ್ನ ದೃಷ್ಠಿಫಲದಿಂದ ಎರೆ ಹೊಲಕ್ಕೆ ಮಳೆಯಾಗಲಿ, ಕ್ಯಾನಲ್ ನೀರು ತುಂಬಿ ಹರಿಯಲಿ ಮತ್ತೆ ನವ ವಸಂತಗಾನ ಮೊಳಗಲಿ… ನನಗಲ್ಲದಿದ್ದರೂ ನಮ್ಮ ಪ್ರೇಮಸೌಧಕ್ಕೆ ಜೀವಕಳೆ ಬರಲಿ…
ಸದಾ ನಿನ್ನವ
vinay