ಶನಿವಾರ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ-DC ಕೂರ್ಮಾರಾವ್
ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ಪರಿಶೀಲನೆ-ಡಿಸಿ ಕೂರ್ಮಾರಾವ್
ಯಾದಗಿರಿಃ ಅನಾವೃಷ್ಟಿಯಿಂದಾಗಿ 2018-19ನೇ ಸಾಲಿಗೆ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ನವೆಂಬರ್ 17ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವರು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ತಿಳಿಸಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಮಿತಾಭ್ ಗೌತಮ್ ಅವರು ತಂಡದ ಮುಖ್ಯಸ್ಥರಾಗಿದ್ದು, ಹೈದರಾಬಾದ್ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಬೆಳೆ ವಿಭಾಗದ ನಿರ್ದೇಶಕರಾದ ಬಿ.ಕೆ.ಶ್ರೀವಾಸ್ತವ್ ಹಾಗೂ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಹಿರಿಯ ಸಲಹೆಗಾರರಾದ ಎಸ್.ಸಿ.ಶರ್ಮಾ ಅವರು ತಂಡದ ಸದಸ್ಯರಾಗಿದ್ದಾರೆ.
ನ.17ರಂದು ಬೆಳಿಗ್ಗೆ ಬೆಂಗಳೂರಿನಿಂದ ಯಾದಗಿರಿಗೆ ರೈಲ್ವೆ ಮೂಲಕ ಆಗಮಿಸಿ, ಯಾದಗಿರಿ ತಾಲ್ಲೂಕಿನ ಪ್ರದೇಶಗಳಿಗೆ ಭೇಟಿ ನೀಡುವರು. ನಂತರ ರಾಯಚೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಮಾಹಿತಿ ನೀಡಿದರು.
ಜಿಲ್ಲೆಯಾದ್ಯಂತ 1.37 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಇದರಿಂದ 99 ಕೋಟಿ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ.
ಈ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಕೈಗೊಂಡ ಜಂಟಿ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರವು ಕೂಡ ಕೇಂದ್ರ ಸರ್ಕಾರಕ್ಕೆ ಈ ವರದಿಯನ್ನು ಸಲ್ಲಿಸಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಾಲ್ಲೂಕಿಗೆ 25 ಲಕ್ಷ ರೂಪಾಯಿಯಂತೆ ಸರ್ಕಾರದಿಂದ ಟಾಸ್ಕ್‍ಫೋರ್ಸ್‍ಗೆ ಬಿಡುಗಡೆಯಾಗಿದೆ. ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ನೀರಾವರಿ ಪ್ರದೇಶವಿರುವ ಕ್ಷೇತ್ರಗಳಲ್ಲಿ ಭತ್ತವನ್ನು ಬೆಳೆದ ರೈತರು ಭತ್ತದ ಹುಲ್ಲನ್ನು ಸುಡಬಾರದು.
ಭತ್ತದ ಹುಲ್ಲನ್ನು ಅವಶ್ಯವಿರುವ ರೈತರಿಗೆ ಮತ್ತು ಪಶುಪಾಲನಾ ಇಲಾಖೆಯವರು ಸಂಪರ್ಕಿಸಿದಲ್ಲಿ ಸರ್ಕಾರಕ್ಕೆ ಉಚಿತವಾಗಿ ನೀಡಿ, ಬರ ನಿರ್ವಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು ಎಂದು ಅವರು ಕೋರಿದರು.
ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರರೊಂದಿಗೆ ಹೋಬಳಿ ಮಟ್ಟದಲ್ಲಿ ಆಂದೋಲನದ ರೂಪದಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮೇವು ಸಂರಕ್ಷಣೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಬೆಳೆ ಸಮೀಕ್ಷೆ, ಬೆಳೆ ಹಾನಿ, ಪರ್ಯಾಯ ಬೆಳೆ ಪದ್ಧತಿಗಳು, ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಭತ್ತ ಬೆಳೆ, ರೈತರ ಸಾಲಮನ್ನಾ ಕುರಿತು ಅರಿವು ಮೂಡಿಸಲಾಗಿದೆ ಎಂದು ಅವರು ತಿಳಿಸಿದರು.
2018-19ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಹಿಂಗಾರು ಹಂಗಾಮಿನ ಜೋಳ (ಮಳೆ ಆಶ್ರಿತ) ಪ್ರತಿ ಎಕರೆಗೆ 204 ರೂ., ಜೋಳ (ನೀರಾವರಿ) ಪ್ರತಿ ಎಕರೆಗೆ 240 ರೂ., ಕಡಲೆ (ಮಳೆಯಾಶ್ರಿತ ಮತ್ತು ನೀರಾವರಿ)-192 ರೂ., ಕುಸುಬೆ (ಮಳೆ ಆಶ್ರಿತ)- 156 ರೂ. ಆಗಿದ್ದು, ಈ ಬೆಳೆಗಳ ವಿಮಾ ಪಾವತಿಗೆ ಡಿಸೆಂಬರ್ 15 ಕೊನೆಯ ದಿನವಾಗಿದೆ.
ಬೇಸಿಗೆ ಹಂಗಾಮಿನ ನೀರಾವರಿ ಬೆಳೆಗಳಾದ ಶೇಂಗಾ ಪ್ರತಿ ಎಕರೆಗೆ 342 ರೂ., ಸೂರ್ಯಕಾಂತಿ 252 ರೂ., ಭತ್ತ 516 ರೂ. ಆಗಿದ್ದು, ಈ ಬೆಳೆಗಳ ವಿಮಾ ಪಾವತಿಗೆ 2019ರ ಫೆಬ್ರುವರಿ 28 ಕೊನೆಯ ದಿನವಾಗಿದೆ. ಜಿಲ್ಲೆಯಲ್ಲಿ ಮಳೆ ಕೊರತೆ ಇರುವುದರಿಂದ ರೈತರು ಬೆಳೆ ವಿಮೆ ನೋಂದಾಯಿಸಿ ಯೋಜನೆಯ ಲಾಭ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಬೆಳೆ ಸಮೀಕ್ಷೆ ಆಕ್ಷೇಪಣೆಗೆ ಅವಕಾಶ: ಜಿಲ್ಲೆಯ 2018ರ ಮುಂಗಾರು ಋತುವಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಸ್ಥಳೀಯ ವಿದ್ಯಾವಂತ ಯುವಕರನ್ನು ತೊಡಗಿಸಿಕೊಂಡು, ಮೊಬೈಲ್ ತಂತ್ರಾಂಶದ ಮೂಲಕ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಲಾಗಿದೆ.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಮಾಹಿತಿಯನ್ನು “ಬೆಳೆ ದರ್ಶಕ್” ಆ್ಯಪ್ ಅನ್ನು ಗೂಗಲ್‍ನ “ಪ್ಲೇ ಸ್ಟೋರ್ ನಲ್ಲಿ ನಮೂದಿಸಿ ಡೌನ್‍ಲೋಡ್ ಮಾಡಿಕೊಂಡು ಆಕ್ಷೇಪಣೆಗಳಿದ್ದಲ್ಲಿ, ಈ ಮೊಬೈಲ್ ಆ್ಯಪ್‍ನಲ್ಲಿ ದಾಖಲಿಸುವ ಮೂಲಕ ಅಥವಾ ತಾಲ್ಲೂಕು ಕಚೇರಿಯಲ್ಲಿ ಲಿಖಿತವಾಗಿ ನವೆಂಬರ್ 30ರ ವರೆಗೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ತಾಲ್ಲೂಕು ಆಡಳಿತ ಈ ಬೆಳೆ ಮಾಹಿತಿಯನ್ನು ಪರಿಶೀಲಿಸುತ್ತದೆ. ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತದೆ. ಆದ್ದರಿಂದ ಸರ್ಕಾರವು ದಾಖಲಿಸಿರುವ ರೈತರ ಜಮೀನಿನಲ್ಲಿ ಬೆಳೆದ ಮಾಹಿತಿಯನ್ನು ರೈತರು ಪರಿಶೀಲಿಸಿಕೊಳ್ಳುವುದು ಅತೀ ಮಹತ್ವದ್ದಾಗಿದೆ.
ಆದ್ದರಿಂದ, ಜಿಲ್ಲೆಯ ಎಲ್ಲಾ ರೈತಬಾಂಧವರು ಬೆಳೆ ದರ್ಶಕ್ ಆ್ಯಪ್‍ನಲ್ಲಿ ದಾಖಲಿಸಲಾದ ತಮ್ಮ ಜಮೀನಿನ ಬೆಳೆಯು ಸರಿಯಾಗಿ ನಮೂದು ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್., ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಅವರು ಉಪಸ್ಥಿತರಿದ್ದರು.