ಪ್ರಮುಖ ಸುದ್ದಿ
ಸಿಬಿ ಕಮಾನ್ ಎದುರು ಹೆದ್ದಾರಿ ಮಧ್ಯದಲ್ಲಿ ಡಿಎಸ್ಎಸ್ ಧ್ವಜಾರೋಹಣ, ಸ್ಥಳದಲ್ಲಿ ಬೀಡು ಬಿಟ್ಟ ಪೊಲೀಸರು.
ಯಾದಗಿರಿಃ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಭಾಗದಲ್ಲಿ ಶುಕ್ರವಾರ ರಾತ್ರಿ ಸ್ಥಂಭ ನೆಟ್ಟು ಡಿಎಸ್ಎಸ್ ನ ಧ್ವಜಾರೋಹಣ ನಡೆಸಿದ ಘಟನೆ ಜಿಲ್ಲೆಯ ಶಹಾಪುರ ನಗರದ ಚರಬಸವೇಶ್ವರ ಕಮಾನಿನ ಎದುರಿನಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಪರಿಶೀಲನೆ ನಡೆಸಿದ್ದಾರೆ.
ಇನ್ನು ಇಪ್ಪತ್ತು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮಫಲಕ ಇತ್ತು. ರಸ್ತೆ ಅಭಿವೃದ್ಧಿ ವೇಳೆ ನಾಮಫಲಕ ತೆರವುಗೊಳಿಸಲಾಗಿತ್ತು. ಬಳಿಕ ಮರಳಿ ನಾಮಫಲಕ ಅಳವಡಿಸಲು ಅಂದಿನ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು ಎಂದು ದಲಿತ ಮುಖಂಡರು ತಿಳಿಸಿದ್ದಾರೆ.
ಅಪಘಾತ ತಡೆಗೆ ರಸ್ತೆ ವಿಭಜಕ ಕಾಮಗಾರಿ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಏಕಾಏಕಿ ಧ್ವಜ ಸ್ಥಂಭ ಹಾಕಲಾಗಿದೆ. ಈ ಬಗ್ಗೆ ಸಂಘಟನೆಯ ಮುಖಂಡರ ಜತೆ ಮಾತುಕತೆ ನಡೆಸುತ್ತಿದ್ದೇವೆ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.