ವಿನಯ ವಿಶೇಷಸಾಹಿತ್ಯ

ಈಶ್ವರನಿಲ್ಲದ ಸಗರ ನಾಡು ನಶ್ವರ !!! ಶಿಕ್ಷಕ ಬಿರಾದಾರ ಬರಹ ಓದ್ರಿ ಜರ

ಈಶ್ವರನಿಲ್ಲದ ಸಗರ ನಾಡು ನಶ್ವರ !!!

ಏ ಸಾವೇ ! ಸಾಕುಮಾಡು ,ನಿನ್ನ ಸರದಿ…ನೀಡದಿರು ಸಗರನಾಡಿಗೆ ಸಿಡಿಲ ವರದಿ….

ದೇಸಿಪದಗಳ ಖುಷಿ ಹಂಚುತ್ತಿದ್ದ ಈಶ್ವರಯ್ಯ ಮಠ ಸರ್ ಈಶ್ವರನ ಬಳಿ ಹೋದರೆ…

ಎಲಾ ಇವನೌನ ,ಹೆಂಗಾತಲ್ರಿ ಅಂತ ಎದಿ ಧಸ್ಸಕ್ ಅಂತು,ಮೊನ್ನೆಮೊನ್ನೆ ಹಿರಿಯ ಸಾಹಿತಿ ಎ ಕೃಷ್ಣ ಸುರಪುರ ಸರ್, ಅವರ ಜೋಡಿ ಅನುವಂಗ ಶ್ರಿ ಬಸವರಾಜ ರುಮಾಲ್ ಸರ್, ಅಷ್ಟರೊಳಗ ಸಿಡಿಲ ಬಡಿದಂಗ್ ಮತ್ತೊಂದು ಸುದ್ದಿ …ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಶ್ರೀ ರಾಜಾ ಮದನ ಗೋಪಾಲ ನಾಯಕರು ವಿಧಿವಶರಾದರು…..ಈಗ ನೋಡಿದ್ರ ಸರ್ ಸುದ್ದಿ….

ಎ ವಿಧಿಯೇ ಏನಿದು ನಿನ್ನ ಕೆಲಸ,ಮೊನ್ನೆ ಮಾತಾಡಿದವರು,ನಿನ್ನ ನೋಡಿ ಖುಷಿ ಪಟ್ಟವರು,ಇವತ್ತಿಲ್ಲ ಅಂದ್ರ ಜೀವಕ್ಕ ಹೆಂಗಾಗತೈತ್ರಿ.ಬೆಳದಿಂಗಳ ಚಂದ್ರ ಎಲ್ಲೆರ ಸ್ವಲ್ಪ ವಾಸಿ ಇದ್ದಾನೂ, ಆದ್ರ ಈಶ್ವರಯ್ಯ ಮಠ ಸರ್ ಮುಖ ದುಂಡಗ,ಗುಂಡಗ ! ಕಲ್ಯಾಣ ಕರ್ನಾಟಕದ ತುಂಬಾ ನಗು ಹಂಚುವ ಚಂದ್ರ ಇಂದಿಲ್ಲ ಅಂದ್ರ ಅರಗಿಸಿಕೊಳ್ಳೊದು ಹೆಂಗೊ ಎಪ್ಪಾ !!!!!

ರಕ್ತ ಸಂಬಂಧಿಕರಲ್ಲ,ಎತ್ತಿ ಅಡಿಸಿದವರಲ್ಲ ,ಆದ್ರೂ
ದಿನಾಲೂ ಅವರ ಸಂಪರ್ಕ ರಕ್ತ ಸಂಬಂಧವನ್ನು ಮೀರಿದ ಸಂಬಂಧವಾಗಿತ್ತು.
ಹೊತ್ತ ಹೊತ್ತಿಗೆ ಯಾವಾಗರ,ಎಲ್ಲೇರ ಸಿಕ್ಕಾಗ ನಮಗ ಮಾತಾಡಿಸಿ,ಚೊಲೊ ಅದಿರಿ,ಅನ್ನುದರೊಳಗ ನಗು ನಮ್ಮೆಲ್ಲರ ಸುತ್ತುವಂತೆ ಮಾಡುವ ಮಾಂತ್ರಿಕ ಮಾತುಗಾರರು ಡಾ.ಈಶ್ವರಯ್ಯ ಮಠ ದೇವರ ಗೋನಾಲ.

ಲಾವಣಿ ಪದ್ಯ :–
(ಈಶ್ವರನಿಲ್ಲದ ಸಗರ ನಾಡು ನಶ್ವರ)

ಮಾತು ಮಾತಿನೊಳಗ ಗತ್ತು ಗಮ್ಮತ್ತು ಇರತಿತ್ತು ಆಗರಿ…
ಸಗರನಾಡಿನ ಶರಣಸಂತ ಈಶ್ವರಯ್ಯ ಮಠ ಇಲ್ಲ ಈಗರಿ….

ಡೌಲ್ ಮಾಡಬ್ಯಾಡ ದೌಡ ಹೋಗದಲ್ಲ ಈ ಜೀವ ಅಂತಿದ್ದರಿ…
ದೌಡ ಮಾಡಿ ಹೋಗಲಾಕ ಅಲ್ಲಿ ಇಲ್ಲಿಗಿಂತ ಕೆಲಸ
ಏನಿತ್ತರಿ…

ನಿಂತು ನುಡಿದರೆ ಚಂದ್ರನ ಕಾಂತಿ ಮುಖದಾಗ ಇರತಿತ್ತರಿ…
ಕುಂತು ನುಡಿದರೆ ಕಲ್ಯಾಣದನುಭವ ಮಂಟಪ ಕಾಣತಿತ್ತರಿ…

ದೇವರ ಗೋನಾಲದ ದೇವರು ಇಂದು ಇಲ್ಲದಂಗ ಆತರಿ..
ದೇವರ ಕಳಕೊಂಡ ಕನ್ನಡದ ಕುಡಿಗಳು ಮರಗುದು
ನಡಿತರಿ….

ಲಿಂಸ ಗುಬ ಗುರುವಿನ ಹೆಸರ ಹೊತಗೊಂಡು ಇರತಿದ್ದರಿ….
ಅಂಗ ಲಿಂಗ ಶರಣ ಸಂಗ ಸದಾ ಇರಬೇಕು ಅಂತಿದ್ದರಿ..

ಮಾತಿನೊಳಗ ಹಾವ ಭಾವದ ಹಾಲ ಓಕಳಿ ನಡಿತಿತ್ತರಿ…
ಮಾತು ಕೇಳಿದರೆ ಮುತ್ತು ಪೊಣಿಸಿದಂಗ ನಕ್ಕು ನಲಿಬೇಕರಿ..

ಮಾತಿನ್ಯಾಗ ಹೃದಯ, ಹೃದಯದಾಗ ಮಾತು ಹಾಲ ಜೇನಿದ್ದಂಗರಿ…
ಅವರಿಲ್ಲದ ಊರು,ಅವರಿಲ್ಲದ ಸೂರು ಪಡಸಾಲಿ ಬಿದ್ದಂಗರಿ…

ಕೊಳ್ಳ ಹರಿದ ಎತ್ತ ,ಗೋಳ ಹೇಳು ಹೊತ್ತ ಈಗ ನಮ್ಮದಾತಲ್ಲರಿ…
ಈಶ್ವರನಿಲ್ಲದ ನಮ್ಮ ಈ ಸಾಗರನಾಡು ನಶ್ವರ ಆತಾಲ್ಲರಿ…

ಅವರ ಮಾತ ಕೇಳತಾನೇ ನಾವೆಲ್ಲ ಸುಖ ಪಟ್ಟಿವಿ,ದುಃಖ ಮರತಿವಿ,ಬದುಕಿನ ದಾರಿ ತೋರಿಸುವ ಅವರ ಛಲ ನಮಗ ಮಾದರಿಯಾಗಿತ್ತು.ಅವರಂಗ ಮಾತಡೋದು ದೂರದಮಾತು,ಅವರಂಗ ನಗುವರ ಕಲಿಬೇಕು ಅನಿಸತಿತ್ತು.ಫೇಸ್‌ಬುಕ್‌ ದಾಗ ಅವರ ಫೇಸ್ ನೋಡಿದ್ರ ಸಾಕು ಅವರ ಮಾತು,ಅವರ ಆ ಮಾತಿನ ಏರಿಳಿತ,ಎಲ್ಲವೂ ಮನಸಿನ ಸಿಸಿ ಕ್ಯಾಮರದ ಮುಂದ ಸರ್ರಂತ ಬಂದು ಹೋಗತಿತ್ತು……ಅದ ದೊಡ್ಡ ಖುಷಿ ಅಗೋದು…

ನಕ್ಕೊತ ಅಕ್ಕೊರ ಜೋಡಿ ಇರು ಪೋಟೊ, ಸರ್ FBಗೆ ಹಾಕಿದ್ದು ನೋಡಿದ್ರ ,ಜೀವನೋತ್ಸಾಹ ಅಂದ್ರ ಇದ ಇರಬೇಕು ಅನಿಸತಿತ್ತು.ಟೀಕ ಠಾಕು ಡ್ರೆಸ್ ,ಮುಖದಮ್ಯಾಗ ದಾಡಿ ಒಂದ ದಿನನೂ ಕಾಣಲಿಲ್ಲ.ಬಾಯಿತುಂಬಾ ಮಾತು ಹೊರಡಿದರ ,ಮಾತು ಹೊರಂವ ಗಟುಳಾಂವ ಇರಬೇಕಿತ್ತು ,ಯಾಕಂದ್ರ ಅಂತ ಗಟ್ಟಿ ಹಾಗೂ ವಜ್ಜಿ ಮಾತ ಸರ್ ಅವರು ಇರುತಿದ್ದವು.ಅದಕ ತೂಕದ ಮಾತು ಅಂತಾರ.ಅಂತಹ ತೂಕ ಅವರ ಭಾಷಣದಾಗ ಇರತಿತ್ತು.ತೂಕಡಿಕಿ ಮಾಡೊ ಆಸಾಮಿ ಕೂಡಾ ಎದ್ದ ಕುಣಿಯುವಂಗ ಮಾಡತಿದ್ರು.
ಕಲ್ಯಾಣ ಕೈ ಮುಂದ ತೊರಿಸತಿದ್ರು.

ಚಿತ್ರ ಕಾವ್ಯ ಅಭಿಯಾನ ಕರ್ನಾಟಕದ ಫೇಸ್‌ಬುಕ್‌ ಗ್ರೂಪ್ ಗೆ ವಾರದ ವಿಶೇಷ ಅತಿಥಿಯಾಗಿ ಕರೆಸಿ ಸರ್ ಮಾತುಗಳನ್ನು ಕೇಳುವ ತವಕದಲ್ಲಿ ಇದ್ದೆವು ಸರ್.ಅದರೆ ಇಂದು ಕಣ್ಣುಗಳು ತೆವಗೊಂಡವು.

ನಿಮ್ಮ ಅಗಲಿಕೆಯ ನೋವು ಅಕ್ಕೋರಿಗಿ,ಮಲ್ಲಿಕಾರ್ಜುನ ವಕೀಲರಿಗೆ ,ಸಹೋದರರಾದ ಅಕ್ಷರ ವಿರೂಪಾಕ್ಷ ಹಾಗೂ ವಿಕಾಸ ಹಿರೇಮಠ ,ಪಂಚಾಕ್ಷರಿ ,ಬಸಯ್ಯ ,ಸಿದ್ದಯ್ಯ ಸ್ಥಾವರಮಠ ಹಾಗೂ ಸಮಸ್ತ ಪರಿವಾರಕ್ಕೆ ಹಾಗೂ ದೇವರಗೋನಾಲದ ಸಮಸ್ತರಿಗೂ ದೇವರು ತಾಳಿಕೊಳ್ಳುವ ಶಕ್ತಿ ನೀಡಲಿ,

ನಿಮ್ಮ ಮಾತು ,ನಡೆ ನಮಗೆಲ್ಲರಿಗೂ ದಾರಿ ದೀಪವಾಗಲಿ…

ಸಾಹೇಬಗೌಡ ಯ ಬಿರಾದಾರ
ಸಹಶಿಕ್ಷಕರು, ಸರಕಾರಿ ಪ್ರೌಢಶಾಲೆ ಹೆಗ್ಗನದೊಡ್ಡಿ.
ತಾ.ಸುರಪುರ.ಜಿ.ಯಾದಗಿರಿ.
7337653589.

Related Articles

Leave a Reply

Your email address will not be published. Required fields are marked *

Back to top button