ನೀತಿ ಸಂಹಿತೆ ಉಲ್ಲಂಘನೆ: ಪ್ರಕರಣ ದಾಖಲು
ನೀತಿ ಸಂಹಿತೆ ಉಲ್ಲಂಘನೆ: ಪ್ರಕರಣ ದಾಖಲು
ಯಾದಗಿರಿಃ ರಾಜ್ಯ ಚುನಾವಣಾ ಆಯೋಗದ ನಿರ್ದೆಶನದಂತೆ ಜಿಲ್ಲೆಯ ಯಾದಗಿರಿ, ಶಹಾಪುರ ಸುರಪುರ, ಗುರುಮಿಟಕಲ್, ವಡಗೇರಾ ಮತ್ತು ಹುಣಸಗಿ ತಾಲ್ಲೂಕಿನ 119 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗುತ್ತಿದೆ.
ಚುನಾವಣೆ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನಾಂಕ: 30-11-2020 ರಿಂದ 31-12-2020ರ ಸಂಜೆ 5 ಗಂಟೆಯ ವರೆಗೆ ಜಾರಿಯಲ್ಲಿದ್ದು, ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ತಾಲ್ಲೂಕುವಾರು ಎಂ.ಸಿ.ಸಿ. ಮತ್ತು ಅಬಕಾರಿ ಇಲಾಖೆಯ ತಂಡಗಳನ್ನು ರಚಿಸಲಾಗಿರುತ್ತದೆ.
ಜಿಲ್ಲಾ ಅಬಕಾರಿ ಉಪ ಆಯುಕ್ತರ ವರದಿಯಂತೆ ಡಿ.19ರಂದು ಜಿಲ್ಲೆಯ ಯಾದಗಿರಿ ತಾಲ್ಲೂಕಿನಲ್ಲಿ ಒಂದು ಪ್ರಕರಣ, ಸುರಪುರ ತಾಲ್ಲೂಕಿನಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಇದೂವರೆಗೆ ಒಟ್ಟು 84 ಪ್ರಕರಣಗಳು ದಾಖಲಾಗಿರುತ್ತವೆ.
ಸುರಪುರ ತಾಲ್ಲೂಕಿನಲ್ಲಿ ನಿಯಮಬಾಹಿರವಾಗಿ ಕರ ಪತ್ರಗಳನ್ನು ಮುದ್ರಿಸಿ ಹಂಚುತ್ತಿರುವುದು ಕಂಡುಬಂದ ಹಿನ್ನಲೆಯಲ್ಲಿ ಎಂ.ಸಿ.ಸಿ. ತಂಡದ ಅಧಿಕಾರಿಗಳು ಐ.ಪಿ.ಸಿ 1860 ಕಲಂ 188 ರಡಿಯಲ್ಲಿ 8 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಮತದಾರರು ಹಾಗೂ ಅಭ್ಯರ್ಥಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಶಾಂತ ರೀತಿಯಿಂದ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.