ವಾಹನ ಸಂಚಾರಕ್ಕೆ ಆತಂಕ ತರುವ ವಿದ್ಯುತ್ ಕಂಬ
ವಿದ್ಯುತ್ ಕಂಬ ಸುತ್ತುವರೆದ ರಸ್ತೆ ಸಂಚಾರಕ್ಕೆ ಕುತ್ತು
ಯಾದಗಿರಿ, ಶಹಾಪುರಃ ನಗರದ ಚರಬಸವೇಶ್ವರ ಗದ್ದುಗೆಗೆ ತೆರಳುವ ರಸ್ತೆ ಸೇರಿದಂತೆ ನಗರದಲ್ಲಿ ಹಾದು ಹೋದ ಹೆದ್ದಾರಿ ಮದ್ಯ ಸಾಕಷ್ಟು ವಿದ್ಯುತ್ ಕಂಬ ಮತ್ತು ವಿದ್ಯುತ್ ಪರಿವರ್ತಕ ಯಂತ್ರಗಳು ರಸ್ತೆಗೆ ಹೊಂದಿಕೊಂಡಿರುವ ಕಾರಣ ವಾಹನ ಸಂಚಾರಕ್ಕೆ ಆತಂಕ ತಂದೊಡ್ಡಿವೆ ಎಂದು ಬಿಜೆಪಿ ಯುವ ಮುಖಂಡ ಗುರು ಕಾಮಾ ಆರೋಪಿಸಿದ್ದಾರೆ.
ನಗರದ ಸಿಬಿ ಕಮಾನ್ ಹತ್ತಿರ ಮತ್ತು ಮುಖ್ಯ ಹೆದ್ದಾರಿ ಪಕ್ಕದಲ್ಲಿ ಇಂತಹ ಸಾಕಷ್ಟು ರಸ್ತೆಗೆ ಅಡ್ಡಲಾದ ವಿದ್ಯುತ್ ಕಂಬಗಳಿದ್ದು, ಸಂಚಾರಕ್ಕೆ ಅನಾನುಕೂಲವಿದೆ. ನಿತ್ಯ ಶಾಲಾ ವಾಹನ ಸೇರಿದಂತೆ ಇತರೆ ದೊಡ್ಡ ಗಾತ್ರದ ವಾಹನಗಳ ಸಂಚಾರಕ್ಕೆ ಸಂಚಕಾರವಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಮಧ್ಯೆ ಬಂದಿರುವ ವಾಹನ ಸಂಚಾರಕ್ಕೆ ಅಡೆತೆಡೆಯುಂಟಾಗುವ ಇಂತಹ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕು.
ಇಲ್ಲವಾದಲ್ಲಿ ಅನಾಹುತ ಸಂಭವಿಸಿದ್ದಲ್ಲಿ ಕೆಇಬಿ ಇಲಾಖೆಯ ಅಧಿಕಾರಿಗಳೇ ಜವಬ್ದಾರರಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ನಿತ್ಯ ಶಾಲಾ ಮಕ್ಕಳು ಸೈಕಲ್, ಬೈಕ್ ಮೇಲೆ ಹೊರಟ್ಟಿದ್ದಾಗ, ಮಾರ್ಗ ಮಧ್ಯೆ ಶಾಲಾ ವಾಹನ ಆಗಮಿಸಿದಾಗ ಇಂತಹ ಕಂಬಗಳಿಗೆ ಡಿಕ್ಕಿ ಹೊಡೆ ಘಟನೆಗಳು ಜರುಗಿವೆ. ರಾತ್ರಿ ಸಂದರ್ಭ ಸಾಕಷ್ಟು ವಾಹನ ಸವಾರರು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಅನಾಹುತ ಘಟನೆಗಳು ನಡೆದಿವೆ.
ಆದರೆ ಯಾವುದೇ ಜೀವಹಾನಿಯಾಗಿರುವದಿಲ್ಲ. ಮುಂದೆ ಸಂಭವಿಸುವ ಪ್ರಾಣಹಾನಿ ಘಟನೆಗೆ ಮೊದಲು ಎಚ್ಚೆತ್ತುಕೊಂಡು ಪಟ್ಟಣದಲ್ಲಿ ಬರುವ ಮಾರ್ಗ ಮಧ್ಯದ ಇಂತಹ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರಿಸುವ ಕಾರ್ಯ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.