ಪ್ರಮುಖ ಸುದ್ದಿ
ಕಾಡಾನೆ ದಾಳಿ: ಮತ್ತಿಬ್ಬರು ಸಾವು, ಒಬ್ಬರ ಸ್ಥಿತಿ ಗಂಭೀರ!
ದಾವಣಗೆರೆ: ಚನ್ನಗಿರಿ ತಾಲೂಕಿನ ಹೊಸನಗರ ಗ್ರಾಮದ ಸಮೀಪ ರಮೇಶಪ್ಪ(45) ಹಾಗೂ ಹೊಸಹಳ್ಳಿ ಸಮೀಪ ಈಶ್ವರ ನಾಯ್ಕ(55) ಆನೆ ದಾಳಿಗೆ ಬಲಿಯಾದ ದಾರುಣ ಘಟನೆ ನಡೆದಿದೆ. ಇದೇ ವೇಳೆ ಮತ್ತೋರ್ವ ವ್ಯಕ್ತಿ ಆನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೇ ಅಲ್ಲದೆ ನಾಲ್ಕು ಜಾನುವಾರುಗಳನ್ನು ಆನೆಗಳು ಬಲಿ ಪಡೆದಿವೆ.
ಕಳೆದ ಮೂರು ದಿನಗಳ ಕಾಲ ಚಿತ್ರದುರ್ಗ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಚಿತ್ರದುರ್ಗ-ಆಂಧ್ರ ಗಡಿ ಭಾಗದಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದವು. ಮರುದಿನ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಕೆರೆಯಾಗಳಹಳ್ಳಿ ಬಳಿ ಓರ್ವ ವ್ಯಕ್ತಿ, ತದನಂತರ ಚಿತ್ರದುರ್ಗ ತಾಲೂಕಿನ ಆಯಿತೋಳು ಗ್ರಾಮದ ಬಳಿ ಇಬ್ಬರಿಗೆ ಇರಿದು ಗಂಭೀರ ಗಾಯಗೊಳಿಸಿದ್ದವು. ಹೀಗಾಗಿ, ಇನ್ನಾದರು ಅರಣ್ಯ ಅಧಿಕಾರಿಗಳು ಹಂತಕ ಆನೆಗಳನ್ನು ಕಾಡಿಗಟ್ಟುವ ಕಾರ್ಯ ಚುರುಕುಗೊಳಿಸಿ ಜನರ ಪ್ರಾಣ ರಕ್ಷಿಸಬೇಕು ಎಂಬುದು ಜನರ ಆಗ್ರಹವಾಗಿದೆ.