ಪ್ರಮುಖ ಸುದ್ದಿ
ಕೋಟೆನಾಡಿನಲ್ಲಿ ಮತ್ತೆ ಕಾಡಾನೆಗಳ ಹಾವಳಿ!
ಚಿತ್ರದುರ್ಗ: ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಆರು ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ. ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ಬಳಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷ ಆಗಿರುವ ಕಾಡಾನೆಗಳು ಜಮೀನಿನಲ್ಲಿದ್ದ ಮೂವರು ರೈತರ ಮೇಲೆ ದಾಳಿ ನಡೆಸಿವೆ. ಪರಿಣಾಮ ಮುದಿಯಪ್ಪ, ಪತ್ನಿ ಬಸ್ಸಮ್ಮ ಮತ್ತು ಸುರೇಶ್ ಗಂಭೀರವಾಗಿ ಗಾಯಗೊಂಡಿದ್ದು ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಳಿಕಟ್ಟೆ ಬಳಿಕ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿಯೂ ಕಾಡಾನೆಗಳು ದಾಳಿ ನಡೆಸಿವೆ. ದುಮ್ಮಿ ಗ್ರಾಮದ ಆನೆಪ್ಪ, ಪುತ್ರ ನಾಗರಾಜ ಮತ್ತು ಸಿದ್ದಲಿಂಗಪ್ಪ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿವೆ. ಪರಿಣಾಮ ಗಾಯಾಳುಗಳು ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಕೋಟೆನಾಡಿನ ರೈತಾಪಿ ವರ್ಗ ಕಾಡಾನೆಗಳಿಂದ ಎಚ್ಚರವಾಗಿರಬೇಕಿದೆ.