ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಎನಕೌಂಟರ್?
ಹಂತಕ ಧರ್ಮರಾಜನ ದೇಹ ಹೊಕ್ಕಿದ್ದು ಎಂಟು ಗುಂಡು!
ವಿಜಯಪುರ: ‘ಪೊಲೀಸ್ರು ಆ ಪುತ್ರಪ್ಪ ಸೌಕಾರನ ಮಗ ಮಹಾದೇವ ಸೌಕಾರನ ಬಳಿ ರೊಕ್ಕ ತಿಂದು ಪ್ಲಾನ್ ಮಾಡಿ ನನ್ ಮಗನ್ನ ಹತ್ಯೆ ಮಾಡ್ಯಾರೀ ಸಾಹೇಬ್ರ’ ಅಂತ ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ನ ತಾಯಿ ವಿಮಲಾಬಾಯಿ ಗಂಭೀರ ಆರೋಪ ಮಾಡಿದ್ದಾರೆ. ನಗರದ BLDE ಆಸ್ಪತ್ರೆಗೆ ಭೇಟಿ ನೀಡಿ PSI ಗೋಪಾಲ್ ಹಾರಿಸಿದ ಗುಂಡೇಟಿಗೆ ಬಲಿಯಾದ ಮಗ ಧರ್ಮರಾಜ್ ನ ಶವ ಕಂಡು ತಾಯಿ ವಿಮಲಾಬಾಯಿ ಆಕ್ರಂದನ ಮುಗಿಲುಮುಟ್ಟಿತ್ತು. ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಪೊಲೀಸರ ವಿರುದ್ಧ ಹರಿಹಾಯ್ದರು. ಇದೊಂದು ನಕಲಿ ಎನ್ ಕೌಂಟರ್ ಎಂದು ಆರೋಪಿಸಿದ ಅವ್ರು ವಿರೋಧಿಗಳು ಸೇರಿ ಹಣ ನೀಡಿ ನನ್ನ ಮಗನ ಹತ್ಯೆ ಮಾಡಿಸಿದ್ದಾರೆ ಎಂದು ಕಿಡಿಕಾರಿದರು.
ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದ ಮಾಹಿತಿ ಮೇರೆಗೆ ಚಡಚಣ ಪಿಎಸ್ಐ ಗೋಪಾಲ್ ಕೊಂಕಣಗಾಂವ್ ಗ್ರಾಮದ ಧರ್ಮರಾಜ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಧರ್ಮರಾಜ್ ಪಿಎಸ್ಐ ಮೇಲೆ ಗುಂಡು ಹಾರಿಸಿದ್ದರು. ಪರಿಣಾಮ ಆತ್ಮರಕ್ಷಣೆಗಾಗಿ ಪಿಎಸ್ಐ ಪ್ರತಿದಾಳ ನಡೆಸಿದ್ದರು. ಹೀಗಾಗಿ, ಹಂತಕ ಧರ್ಮರಾಜ್ ಪಿಎಸ್ಐ ಗುಂಡಿನ ದಾಳಿಯಿಂದ ಗಾಯಗೊಂಡಿದ್ದು BLDE ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. ಇನ್ನು ಗುಂಡಿನ ದಾಳಿಯಿಂದ ಗಾಯಗೊಂಡಿರುವ ಪಿಎಸ್ಐ ಗೋಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು ಎಂಟು ಗುಂಡುಗಳು ಹಂತಕ ಧರ್ಮರಾಜ್ ದೇಹ ಹೊಕ್ಕಿವೆ. ಎದೆ ಭಾಗದಲ್ಲಿ 3, ಬೆನ್ನು ಭಾಗದಲ್ಲಿ 3 ಮತ್ತು ಕಾಲಿಗೆ ಎರಡು ಗುಂಡುಗಳು ಬಿದ್ದಿವೆ. ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಧರ್ಮರಾಜ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾನೆ. ಇನ್ನು ಪಿಎಸ್ಐ ಗೋಪಾಲ್ ಬಲಗೈಗೆ ಒಂದಿ ಗುಂಡು ಹೊಕ್ಕಿದ್ದು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.
ಭೀಮಾತೀರದ ಹಂತಕ ಧರ್ಮರಾಜನ ರಕ್ತಚರಿತ್ರೆ
ಇನ್ನು ಭೀಮಾತೀರದ ಹಂತಕ ಧರ್ಮರಾಜ್ ಅನೇಕ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. 2007ರಲ್ಲಿ ಹೊರ್ತಿ ಗ್ರಾಮದಲ್ಲಿ ಮುತ್ತು ಮಾಸ್ತರ್ ಹತ್ಯೆ, 2008ರಲ್ಲಿ ಪುತ್ರಪ್ಪ ಸಾಹುಕಾರನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ, 2014ರಲ್ಲಿ ಫಯಾಜ್ ಹತ್ಯೆ, ಚಡಚಣದಲ್ಲಿ ಹನುಮಂತ ಪೂಜಾರಿ ಕಿಡ್ನಾಪ್ & ಹತ್ಯೆ ಯತ್ನ ಪ್ರಕರಣಗಳು ಸೇರಿದಂತೆ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಅಲ್ಲದೆ ಇತರೆ ಅನೇಕ ಅಪರಾಧ ಪ್ರಕರಣದ ಆರೋಪಗಳು ಧರ್ಮರಾಜ್ ಮೇಲಿದ್ದವು.