ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ‘ಸುಳ್ಳಿನ ಪಾಠ’ ಕೇಳಿ ಕಾರ್ಯಕರ್ತರೇ ಸುಸ್ತು!
ನಾವು ರಾಜಕಾರಣಿಗಳು ಎಂಬುದನ್ನು ನೆನಪಿಟ್ಟುಕೊಳ್ಳಿ. ಯಾವುದನ್ನೂ ಗೊತ್ತಿಲ್ಲ ಎಂದು ಹೇಳಬಾರದು. ನಮಗೆ ಗೊತ್ತಿಲ್ಲ ಎಂಬುದು ಯಾವುದಾದರೂ ಸುಳ್ಳೋ ಪೊಳ್ಳೋ ಹೇಳಿ ಬಂದು ಬಿಡಬೇಕು. ಜನ ಇವನು ಯಾವನು ಇವನಿಗೆ ಏನೂ ಗೊತ್ತಿಲ್ಲ ಅಂದುಕೊಳ್ಳಬಾರದು. ಬಿಜೆಪಿ ಅಧಿಕಾರದಲ್ಲಿದ್ದಾಗ ದಲಿತರು, ಹಿಂದುಳಿದವರಿಗೆ ಏನೇನು ಸಹಕಾರ ಆಗಿದೆ ಎಲ್ಲಾ ಹೇಳಬೇಕು. ಹೀಗೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಹೊಡೆದದ್ದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ.
ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಏನೇನು ಮಾಡಿದೆ. ಕೇಂದ್ರ ಬಿಜೆಪಿ ಸರ್ಕಾರದ ಯೋಜನೆಗಳೇನು. ಮುಂದೆ ನಾವು ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂಬುದನ್ನು ಹೇಳಬೇಕು. ವಾಜಪೇಯಿ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರಿಗೆ ಹೊಡೆದೊಡೆದು ಕೈ ಬಿಡಲಾಗಿತ್ತು. ನಿಮಗಿದು ಗೊತ್ತಿಲ್ಲ. ಆದರೂ ಹೇಳಬೇಕು. ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಪಾಕಿಸ್ತಾನಿಗಳು ತಲೆ ಎತ್ತಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಮತ್ತೆ ಪಾಕಿಸ್ತಾನಿಗಳು ಬಾಲ ಬಿಚ್ಚಿದರು. ನರೇಂದ್ರ ಮೋದಿ ಅವರು ಪ್ರಧಾನಿ ಆದಾಕ್ಷಣ ಒಂದು ತಲೆಗೆ ಹತ್ತು ತಲೆಗಳನ್ನು ಇಲ್ಲ ಎಂಬಂತಾಗಿಸಿ ಬಗ್ಗು ಬಡೆದರು. ಇದು ನಡೆದದ್ದೂ ಹೌದು ನರೇಂದ್ರ ಮೋದಿ ಗಂಡುಗಲಿ ಅನ್ನೋದನ್ನು ಇಡೀ ಪ್ರಪಂಚ ಒಪ್ಪಿಕೊಳ್ಳುತ್ತೆ ತಾನೇ ಹೇಳಿ ಬನ್ನಿ ಅಂತಾರೆ ಈಶ್ವರಪ್ಪ.
ನಿಮಗೆ ಹೇಳಿಕೊಳ್ಳಲು ಆಗುವುದಿಲ್ಲವೇ. ಸಿದ್ಧರಾಮಯ್ಯ ಪರವಾಗಿ ಪ್ರಶ್ನಿಸುವವರು ಎದುರಾದಾಗ ಅವರಿಗಿಂತ ಮೊದಲು ನೀವೇ ಹೆದರಿಕೊಂಡು ಬಂದರೆ ರಾಜೀನಾಮೆ ಕೊಟ್ಟು ಮನೇಲಿ ಕೂಡಬೇಕಾಗುತ್ತದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸುಳ್ಳಿನ ಪಾಠ ಮಾಡಿದ್ದಾರೆ. ಈಶ್ವರಪ್ಪನವರ ಈ ಸುಳ್ಳಿನ ಪಾಠದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಭಾರೀ ಟೀಕೆ ವ್ಯಕ್ತವಾಗುತ್ತಿದೆ. ನಿಜಕ್ಕೂ ಈಶ್ವರಪ್ಪ ಅವರ ಈ ಸುಳ್ಳಿನ ಪಾಠ ರಾಜಕೀಯ ಕ್ಷೇತ್ರ ಅಧಪತನದತ್ತ ಸಾಗುತ್ತಿರುವುದ ಸಂಕೇತವಾಗಿದೆ. ರಾಜಕಾರಣಿಗಳು ಪಕ್ಷ ಬೇಧ ಮರೆತು ವಿರೋಧಿಸಬೇಕಿದೆ. ಆದರೆ, ಬಿಜೆಪಿ ನಾಯಕರು ಅದೇನು ಕ್ರಮ ಕೈಗೊಳ್ಳುತ್ತಾರೋ ಗೊತ್ತಿಲ್ಲ. ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಈ ವಿಡಿಯೋ ಬಗ್ಗೆ ಮತ್ತೇನು ಕಥೆ ಕಟ್ಟಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕಿದೆ.