ಸಿನೆಮಾ ಆಗಲಿದೆಯಂತೆ ಈಶ್ವರಪ್ಪ-ಯಡಿಯೂರಪ್ಪ ಪಿಎಗಳ ಜಗಳ?
ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪಿಎ ವಿನಯ್ ಹಾಗೂ ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ ಮದ್ಯದ ಸಮರ ತಾರಕಕ್ಕೇರಿದೆ. ಇಬ್ಬರ ಸಮರದ ಸ್ಟೋರಿ ಈಗ ತೆರೆ ಮೇಲೆ ತರಲು ವಿನಯ್ ಮುಂದಾಗಿದ್ದಾರೆ. ಚಿತ್ರ ಕಥೆಗಾರ ಅಮೃತೇಶ ಕಥೆ ಬರೆದಿದ್ದು, ಕವಿ ರಾಜೇಶ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಶೋಭಾ ರಾಜಕೀಯ ಪ್ರೊಡಕ್ಷನ್ ನಲ್ಲಿ ‘ಮೂರು ಬಿಟ್ಟವರು ಊರಿಗೆ ದೊಡ್ಡವರು’ ಹೆಸರಿನ ಸಿನೆಮಾ ತೆರೆಗೆ ಬರಲಿದೆ.
ಈಗಾಗಲೇ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ , ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಚಿತ್ರದಲ್ಲಿ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಪಿಎಗಳ ರಾಜಕೀಯ ಸಮರದ ಕಥಾ ಹಂದರವನ್ನು ಎಣೆಯಲಾಗಿದೆ. ವಿನಯ್ ನಿಜ ಜೀವನದ ಕಥೆಯೇ ಸಿನೆಮಾದ ಕಥಾನಾಯಕನ ಪಾತ್ರದಲ್ಲಿರಲಿದೆ ಎಂದು ತಿಳಿದು ಬಂದಿದೆ.
ಮೂರು ಬಿಟ್ಟವರು ಊರಿಗೆ ದೊಡ್ಡವರು ಸಿನೆಮಾ ಬಿಎಸ್ ವೈ ಮತ್ತವರ ಪಿಎ ಸಂತೋಷ ವಿರುದ್ಧ ವಿನಯ್ ಸಾರಿದ ಸಮರದ ಒಂದು ಭಾಗವೆಂದೇ ಹೇಳಲಾಗುತ್ತಿದೆ. ಪರಿಣಾಮ ಚುನಾವಣಾ ವರ್ಷದಲ್ಲಿ ಈ ಸಿನೆಮಾ ಬಿಜೆಪಿ ಪಾಲಿಗೆ ನುಂಗಲಾಗದ ಬಿಸಿತುಪ್ಪ ಆಗಲಿದೆ. ಹೀಗಾಗಿ, ಬಿಜೆಪಿ ನಾಯಕರು ಈ ಸಿನೆಮಾ ಬಗ್ಗೆ ಯಾವ ಪ್ರತಿಕ್ರಿಯೆ ನೀಡಲಿದ್ದಾರೆ. ಸಿನೆಮಾ ತಡೆಗೆ ಏನೆಲ್ಲಾ ಕಸರತ್ತು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.