ಬೂದಿಹಾಳ-ಪೀರಾಪುರ ಏತ ನೀರಾವರಿಗೆ ಟೆಂಡರ್ BSY ಗೆ ಕೃತಜ್ಞತೆ ವ್ಯಕ್ಯಪಡಿಸಿದ ರೈತರು
ಬೂದಿಹಾಳ-ಪೀರಾಪುರ ಏತ ನೀರಾವರಿಗೆ ಟೆಂಡರ್ BSY ಗೆ ಕೃತಜ್ಞತೆ ವ್ಯಕ್ಯಪಡಿಸಿದ ರೈತರು
ಯಾದಗಿರಿಃ ರೈತರ ಬಹು ದಿನಗಳ ಬೇಡಿಕೆಯಾದ ಜಿಲ್ಲೆಯ ಕೆಂಭಾವಿ ಭಾಗದ ಬೂದಿಹಾಳ-ಪೀರಾಪುರ ಏತ ನೀರಾವರಿ ಕಾಮಗಾರಿಗೆ ರಾಜ್ಯ ಸರ್ಕಾರ ಟೆಂಡರ್ ಕರೆಯುವ ಮೂಲಕ ರೈತರ ಕನಸಿಗೆ ಜೀವ ತುಂಬುವ ಕೆಲಸ ಮಾಡಿದೆ ಎಂದು ರೈತ ಮುಖಂಡರಾದ ಬಸಯ್ಯ ಯಕ್ತಾಪುರ ಮತ್ತು ಭೀಮನಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಿಎಂ ಯಡಿಯೂರಪ್ಪ ಹಾಗೂ ನೀರಾವರಿ ಸಚಿವ ರಮೇಶ ಜಾರಕಿಹೊಳಿ, ಸುರಪುರ ಶಾಸಕ ರಾಜೂಗೌಡ ಮತ್ತು ಶಹಾಪುರ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದ ಅವರು,
ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಬೇಡಿಕೆ ಇಟ್ಟು ರೈತರು ಹಿಂದೆ ಹೋರಾಟ ನಡೆಸಿದ ಸಂದರ್ಭದಲ್ಲಿ ಮಾಜಿ ಶಾಸಕರು ಹೋರಾಟಕ್ಕೆ ಬೆಂಬಲಿಸಿದ್ದು, ಅಲ್ಲದೆ ಸ್ವತಃ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿರುವದನ್ನು ಸ್ಮರಿಸಿದರು.
ಅಲ್ಲದೆ ಹಿಂದಿನ ತಮ್ಮ ಹೋರಾಟಕ್ಕೆ ಬೆಂಬಲಿಸಿ ಭಾಗವಹಿಸಿದವರನ್ನು ಸ್ಮರಿಸಿದರು. ಒಟ್ಟಾರೆ ರಾಜೂಗೌಡ, ಗುರು ಪಾಟೀಲ್ ಅವರ ಕಾಳಜಿಯಿಂದ ಅವರದ್ದೆ ಪಕ್ಷದ ಆಡಳಿತ ಇರುವದರಿಂದ ಮುತುವರ್ಜಿ ವಹಿಸಿ ಏತ ನೀರಾವರಿ ಯೋಜನೆ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲು ಸಹಕರಿಸುವ ಮೂಲಕ ರೈತರಿಗೆ ಅನುಕೂಲಕಲ್ಪಿಸಿದ್ದಾರೆ.
ನೀರಾವರಿ ಸಚಿವ ಜಾರಕಿಹೊಳಿ ಅವರನ್ನು ಈ ಭಾಗಕ್ಕೆ ಕರೆಸಿ ನೀರಾವರಿ ಯೋಜನೆ ಕುರಿತು ಸಮಗ್ರ ಮಾಹಿತಿ ನೀಡಿದ್ದರು. ಆ ಕುರಿತು ಸಮರ್ಪಕ ಮಾಹಿತಿ ಪಡೆದ ಸಚಿವರು ಸಿಎಂ ಜೊತೆ ಮಾತನಾಡಿ ಪೀರಾಪುರ- ಬೂದಿಹಾಳ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗೊಳಿಸುವ ಭರವಸೆಯನ್ನು ಆಗ ಶಹಾಪುರದ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ನೀಡಿದ್ದರು. ಜೊತೆಯಲ್ಲಿ ರಾಜೂಗೌಡರು ಹಾಗೂ ಮಾಜಿ ಶಾಸಕ ಗುರು ಪಾಟೀಲ್ ಇದ್ದರು.
ಭರವಸೆಯಂತೆ ಜಾರಕಿಹೊಳೆ ಅವರು ಏತ ನೀರಾವರಿ ಕಾಮಗಾರಿಗೆ ಅಂದು 628 ಕೋಟಿ ವೆಚ್ಚದ ಅನುದಾನ ಮೀಸಲಿಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಟೆಂಡರ್ ಕರೆಯುವ ಮೂಲಕ ಭರವಸೆ ನೀಡಿದಂತೆ ನಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಾರೆ ರೈತರ ಪರವಾಗಿ ಕಾಳಜಿವಹಿಸಿ ಏತ ನೀರಾವರಿ ಕಾಮಗಾರಿಗೆ ಇದೀಗ ಟೆಂಡರ್ ಕರೆಯುವ ಮೂಲಕ ಚಾಲನೆ ನೀಡಿರುವದು ಸಂತಸ ತಂದಿದೆ.
ಅಲ್ಲದೆ ಶಹಾಪುರ ತಾಲೂಕಿನ 13 ಹಾಗೂ ಸುರಪುರ ತಾಲೂಕಿನ 18 ಗ್ರಾಮಗಳು ಈ ನೀರಾವರಿ ಯೋಜನೆಯ ಲಾಭ ಪಡೆಯಲಿವೆ. ಬಹು ನಿರೀಕ್ಷಿತ ಕಾಮಗಾರಿಗೆ ಸಹಕರಿಸಿದ ಎಲ್ಲರಿಗೂ ಅಂದು ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲಾ ರೈತರಿಗೂ ಧನ್ಯವಾದಗಳನ್ನು ಅವರು ಅರ್ಪಿಸಿದ್ದಾರೆ.