ಆದರ್ಶದ ಬದುಕು ಅಜರಾಮರ- ಅನ್ನದಾನಿ ಶ್ರೀ
ಮಾಜಿ ಶಾಸಕ ದಿ.ಶಿವಶೇಖರಪ್ಪಗೌಡರ ಪುಣ್ಯಸ್ಮರಣೆ
ಯಾದಗಿರಿ, ಶಹಾಪುರಃ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಈ ಹುಟ್ಟು ಸಾವುಗಳ ಮಧ್ಯದ ಬದುಕು ಆದರ್ಶಮಯವಾಗಿದ್ದಲ್ಲಿ ಅಂತವರ ಹೆಸರು ಜನಮಾನಸದಲ್ಲಿ ಅಜರಾಮರರಾಗಿ ಉಳಿಯಲಿದೆ ಎಂದು ಬೆಂಗಳೂರಿನ ಅನ್ನದಾನಿ ಶ್ರೀಗಳು ಅಭಿಪ್ರಾಯಪಟ್ಟರು.
ತಾಲೂಕಿನ ಶಿರವಾಳ ಗ್ರಾಮದಲ್ಲಿ ಮಾಜಿ ಶಾಸಕ ದಿ.ಶಿವಶೇಖರಪ್ಪಗೌಡ ಪಾಟೀಲ್ ಶಿರವಾಳ ಅವರ 9 ನೇ ಪುಣ್ಯ ಸ್ಮರಣೆ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಪರೋಪಕಾರದ ಪರಿಶ್ರಮ ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಬದುಕಿದ್ದಲ್ಲಿ ಜೀವನ ಸಾರ್ಥಕವಾಗಲಿದೆ. ಅಂತಹ ಬದುಕನ್ನು ಸವೆಸಿದವರಲ್ಲಿ ದಿ.ಶಿವಶೇಖರಪ್ಪಗೌಡ ಶಿರವಾಳರು ಒಬ್ಬರು. ಸಭ್ಯತೆ ಮೈಗೂಡಿಸಿಕೊಂಡಿದ್ದ ಅವರು ಸದಾ ಜನರ ಕಷ್ಟ ನೋವು ನಲಿವುಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಬಡವರ ನಿಸ್ಸಹಾಯಕರ ನೆರವಿಗೆ ಸದಾ ಮುಂದಿದ್ದರು. ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಅವರು, ಎಲ್ಲರೂ ನಮ್ಮವರು ಎನ್ನುವ ಶರಣರ ಸಿದ್ಧಾಂತದಂತೆ ಬದುಕಿದ್ದವರು. ಹೀಗಾಗಿ ಇಂದಿಗೂ ಜನಾನುರಾಗಿಯಾಗಿ ಜನ ಸಮುದಾಯದ ಹೃದಯದಲ್ಲಿ ಅಚ್ಚಳಿಯದೆ ನೆಲೆಸಿದ್ದಾರೆ ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿ ಎಂದರು.
ಏಕದಂಡಗಿ ಮಠದ ಕಾಳಹಸ್ತೇಂದ್ರ ಶ್ರೀ ಮಾತನಾಡಿ, ದಿ.ಶಿವಶೇಖರಪ್ಪಗೌಡರ ಬದುಕು ಆದರ್ಶಮಯವಾಗಿತ್ತು. ಅವರು ಸದಾ ಹಸನ್ಮುಖದಿಂದಲೇ ಮಾತನಾಡುತ್ತಿದ್ದರು. ಎಂದಿಗೂ ಅವರೊಬ್ಬ ರಾಜಕಾರಣಿಯಂತೆ ಗರ್ವದಿಂದ ನಡೆದುಕೊಳ್ಳಲಿಲ್ಲ. ಯಾವುದೇ ಸಮಸ್ಯೆಯನ್ನಯ ರಾಜಕೀಯವಾಗಿ ಕಂಡವರಲ್ಲ. ಅವರೊಬ್ಬರು ಜನಸೇವಕರಂತೆ ಸೇವೆ ಮಾಡುತ್ತಾ ಮುನ್ನಡೆದವರು. ಸನ್ಮಾರ್ಗದ ರಾಜಕೀಯ ನಡೆ ಅವರದ್ದಾಗಿತ್ತು ಎಂದರು.
ಗುರುಮಠಕಲ್ ಖಾಸಾ ಮಠದ ಶ್ರೀಗಳು, ಚರಬಸವೇಶ್ವರ ಗದ್ದುಗೆ ಬಸಯ್ಯ ಶರಣರು, ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು, ಫಕೀರೇಶ್ವರ ಮಠದ ಗುರುಪಾದ ಸ್ವಾಮಿ, ದೋರನಹಳ್ಳಿಯ ವೀರಮಹಾಂತ ಶಿವಾಚಾರ್ಯರು, ಸಗರ ಒಕ್ಕಲಿಗೇರ ಹಿರೇಮಠದ ಶ್ರೀ, ಸೇರಿದಂತೆ ಹಲವಾರು ಮಠಾಧೀಶರು, ಶರಣರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‍ಸಿ ಅಮಾತೆಪ್ಪ ಕಂದಕೂರ, ಮುಖಂಡರಾದ ಮಲ್ಲಣ್ಣ ಮಡ್ಡಿ, ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಚಂದ್ರಶೇಖರ ಮಾಗನೂರಮ ಬಸನಗೌಡ ಸುಬೇದಾರ, ಚಂದ್ರಶೇಖರ ಆರಬೋಳ, ರಾಜಶೇಖರ ಗೂಗಲ್, ಗುರು ಕಾಮಾ, ಅಡಿವೆಪ್ಪ ಜಾಕಾ, ಬಸವರಾಜ ಆನೇಗುಂದಿ, ವಸಂತಕುಮಾರ ಸುರಪುರ್, ತಾಹೇರ್ ಕೆಂಭಾವಿ, ಲಾಲನಸಾಬ ಖುರೇಶಿ, ಶಾಂತಪ್ಪ ಕಟ್ಟಿಮನಿ ಭಾಗವಹಿಸಿದ್ದರು. ಕಾರ್ಯಕರ್ತರು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
500 ಜನರ ನೇತ್ರ ತಪಾಸಣೆ
ಮಾಜಿ ಶಾಸಕ ದಿವಂಗತ ಶಿವಶೇಖರಪ್ಪಗೌಡ ಶಿರವಾಳವರ ಪುಣ್ಯಸ್ಮರಣೆ ಅಂಗವಾಗಿ ಶಿವಶೇಖರಪ್ಪಗೌಡರ ಕರ್ಮ ಭೂಮಿಯಲ್ಲಿ ಉಚಿತ ನೇತ್ರಾ ಚಿಕಿತ್ಸಾ ಶಿಬಿರ ಜರುಗಿತು.
ಜನಹಿತ ನೇತ್ರ ಆಸ್ಪತ್ರೆ ಬೆಂಗಳೂರ ಮತ್ತು ಖ್ಯಾತ ನೇತ್ರ ತಜ್ಞರಾದ ಡಾ.ಕೃಷ್ಣಮೋಹನ್, ಡಾ.ವಿಜಯಕುಮಾರ, ಡಾ.ಪ್ರದೀಪ ಅವರ ತಂಡ ನೇತ್ರ ತಪಾಸಣೆಗೆ ಆಗಮಿಸಿದ್ದ ರೋಗಿಗಳಿಗೆ ಸಮರ್ಪಕ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಒಟ್ಟು 500 ಜನ ರೋಗಿಗಳ ಉಚಿತ ತಪಾಸಣೆ ನಡೆಯಿತು.
ಇದರಲ್ಲಿ ಶಸ್ತ್ರ ಚಿಕಿತ್ಸೆಗೆ ಅರ್ಹರಾದ 200 ಜನರಿಗೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಮಾ.8 ರಂದು ನೆರವೇರಲಿದೆ ಎಂದು ಆಯೋಕರು ತಿಳಿಸಿದ್ದಾರೆ.