ವೀರಶೈವ-ಲಿಂಗಾಯತ ‘ಸತ್ಯ ದರ್ಶನ’ ಸಭೆ ರದ್ದು: ಬಸವರಾಜ ಹೊರಟ್ಟಿ ಹೇಳಿದ್ದೇನು ಗೊತ್ತಾ?
ಹುಬ್ಬಳ್ಳಿ: ನಾಳೆ ನಡೆಯಬೇಕಿದ್ದ ವೀರಶೈವ-ಲಿಂಗಾಯತ ಕುರಿತ ಸತ್ಯ ದರ್ಶನ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಪರ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ನಗರದ ಮೂರು ಸಾವಿರ ಮಠದಲ್ಲಿ ಸಭೆ ಆಯೋಜಿಸಲಾಗಿತ್ತು. ನಮ್ಮ ಪರವಾಗಿ ಐದು ಜನ ಮತ್ತು ದಿಂಗಾಲೇಶ್ವರ ಸ್ವಾಮೀಜಿಗಳ ಪರವಾಗಿ ಐದು ಜನ ಸಭೆಯಲ್ಲಿ ಪಾಲ್ಗೊಂಡು ವಿಚಾರಗಳನ್ನು ಮಂಡಿಸಲಿದ್ದೆವು.
ಆದರೆ, ಮೂರು ಸಾವಿರ ಮಠದಲ್ಲಿ ಚರ್ಚಾ ಸಭೆಗೆ ಅವಕಾಶ ಸಿಕ್ಕಿಲ್ಲ. ನೂರಾರು ಮಠಾಧೀಶರು, ಸಾವಿರಾರು ಜನ ಚರ್ಚೆಯ ವೇಳೆ ಮಠದಲ್ಲಿ ಸೇರಲಿದ್ದಾರೆ ಎಂದು ಕರಪತ್ರಗಳನ್ನು ಹಂಚಲಾಗಿದೆಯಂತೆ. ಅಲ್ಲದೆ ಸಾವಿರಾರು ಜನ ಸೇರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡ ಅನುಮತಿ ನಿರಾಕರಿಸಿದೆ. ಕಾನೂನಿಗೆ ತಲೆ ಬಾಗಿ ಚರ್ಚಾ ಸಭೆಯನ್ನು ರದ್ದು ಪಡಿಸಿದ್ದೇವೆ ಎಂದಿದ್ದಾರೆ.
ಲಿಂಗಾಯತ ಧರ್ಮದ ಪರ ನಾವು ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದೆವು. ಚರ್ಚಾ ಸಭೆ ರದ್ದಾಗಿರುವುದು ನಮಗೆ ತುಂಬಾ ನೋವು ತಂದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಸಭೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಆ ಮೂಲಕ ಇಂದು ರದ್ದಾದ ಮಾತ್ರಕ್ಕೆ ಸತ್ಯ ದರ್ಶನ ಸಭೆಗೆ ವಿರಾಮ ಸಿಕ್ಕಿಲ್ಲ. ಬದಲಾಗಿ ಇನ್ನು ಮುಂದೊಂದು ದಿನ ಸಭೆ ಆಯೋಜಿಸಲಾಗುವುದು ಎಂಬ ಸುಳಿವು ನೀಡಿದ್ದಾರೆ.