ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವಿರಲಿ-ಕಾಳಹಸ್ತೇಂದ್ರ ಶ್ರೀ
ಯಾದಗಿರಿ, ಶಹಾಪುರಃ ವಿದ್ಯಾರ್ಥಿಗಳು ಅಧ್ಯಾಪಕರ ಮಾರ್ಗದರ್ಶನ ಸಲಹೆಗಳೊಂದಿಗೆ ಸಾಧನೆಯ ಛಲದ ಮೂಲಕ ಗಂಭೀರವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕೆಂದು ನಗರದ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಚರಬಸವೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಪಿ.ಯು.ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ತಮ್ಮಲ್ಲಿರುವ ಕೌಶಲ್ಯ, ಪ್ರತಿಭೆ, ಸಾಮಥ್ರ್ಯವನ್ನು ಪ್ರದರ್ಶಿಸುವ ಮೂಲಕ ಗುರುತಿಸಿಕೊಳ್ಳಬೇಕು. ಆ ಮೂಲಕ ವಿಶಿಷ್ಠ ಸಾಧನೆಗಾಗಿ ನಿರಂತರ ಪ್ರಯತ್ನ ಮಾಡುತ್ತಿರಬೇಕು.
ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಂಡು ವಿದ್ಯೆ ಕಲಿಸಿದ ಗುರುಗಳಿಗೆ, ಹೆತ್ತ ತಂದೆ ತಾಯಿಗಳಿಗೆ, ಸಮಾಜಕ್ಕೆ ಕೀರ್ತಿ ತಂದುಕೊಟ್ಟು ಮಾದರಿಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರೌಢಶಾಲಾ ವಿಭಾಗದ ಮುಖ್ಯಗುರು ಬಾಪುಗೌಡ ಅಸಂತಾಪುರ ಹಾಗೂ ಬಿ.ಡಿ.ಎಮ್. ಕಾಲೇಜಿನ ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಧರ್ಮಣ್ಣಗೌಡ ಬಿರಾದಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕರು ಹಾಗೂ ಅರ್ಥಶಾಸ್ತ್ರದ ಉಪನ್ಯಾಸಕರಾದ ಅನೀತಾ ಮಾಲಿಪಾಟೀಲ್ ಕಾಲೇಜಿನ ವಾರ್ಷಿಕ ವರದಿಯನ್ನು ವಿವರಿಸಿದರು. ವಿದ್ಯಾರ್ಥಿಗಳ ಕ್ಷೇಮಪಾಲನಾ ಅಧಿಕಾರಿ ಮತ್ತು ಸಮಾಜಶಾಸ್ತ್ರದ ಉಪನ್ಯಾಸಕ ಸಿದ್ದಣ್ಣ ನೀರಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿ ಕಾವೇರಿ ನಿರೂಪಿಸಿದರು. ಮಮತಾ, ಯಶೋಧ ಪ್ರಾರ್ಥಿಸಿದರು. ಗಣಕ ವಿಜ್ಞಾನ ಉಪನ್ಯಾಸಕ ಶರಣಪ್ಪ ಅವನೂರು ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರದ ಉಪನ್ಯಾಸಕಿ ತಾಯೇರಾ ಬೇಗಂ ವಂದಿಸಿದರು. ವಿದ್ಯಾರ್ಥಿನಿಯರಾದ ನಿರ್ಮಲಾ, ಜ್ಯೋತಿ, ಬನಶಂಕರಿ, ರೇಣುಕಾ ಸಾಥ್ ನೀಡಿದರು.