ಕಳ್ಳ ಮಗನಿಗಾಗಿ ಪ್ರಾಣತೆತ್ತನಾ ಅಪ್ಪ!?
ಹುಬ್ಬಳ್ಳಿ: ಕೆ.ಬಿ.ನಗರದ ನಿವಾಸಿ ಶ್ರೀನಿವಾಸ ಎಂಬ ಯುವಕನ ವಿರುದ್ಧ ಬೈಕ್ ಕಳ್ಳತನದ ಆರೋಪವಿದೆ. ಪರಿಣಾಮ ಬೈಕ್ ಮಾಲೀಕರಾದ ಆಕಾಶ್ ಮಡಿವಾಳ, ಅಭಿಷೇಕ್ ಜಾಧವ್ ಮತ್ತು ರಾಘವೇಂದ್ರ ಭಜಂತ್ರಿ ಅವರು ಶ್ರೀನಿವಾಸನನ್ನು ಪ್ರಶ್ನಿಸಲು ಹೋಗಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಶ್ರೀನಿವಾಸ್ ಮೇಲೆ ಮೂವರೂ ಸೇರಿ ಹಲ್ಲೆ ನಡೆಸಿದ್ದಾರೆ. ಶ್ರೀನಿವಾಸ್ ನ ತಂದೆ ತಿರುಪತಿ ವೀರಾಪುರ ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ, ತಿರುಪತಿ ವೀರಾಪುರ ಅವರಿಗೆ ಚಾಕು ಇರಿಯಲಾಗಿದೆ. ಹೀಗಾಗಿ, ತೀವ್ರ ಗಾಯಗೊಂಡಿದ್ದ ತಿರುಪತಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಕೊಲೆ ಆರೋಪದ ಮೇಲೆ ಆಕಾಶ್ ಮಡಿವಾಳ, ಅಭಿಷೇಕ ಜಾಧವ್ ಮತ್ತು ರಾಘವೇಂದ್ರ ಅವರನ್ನು ಬೆಂಡಗೇರಿ ಪೊಲೀಸರು ಬಂಧಿಸಿದ್ದಾರೆ.
ಬೈಕ್ ಕಳ್ಳತನ ಆರೋಪಿಯನ್ನು ವಿಚಾರಿಸಲು ಬಂದಿದ್ದವರು ಚಾಕು ತಂದಿದ್ದೇಕೆ. ಕೊಲೆ ಮಾಡುವುದೇ ಅವರ ಉದ್ಧೇಶವಾಗಿತ್ತಾ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಅಂತೆಯೇ ಬೈಕ್ ಕಳ್ಳತನ ಪ್ರಕರಣ ಮತ್ತು ಕೊಲೆ ಆರೋಪದಡಿ ಬಂಧನವಾಗಿರುವ ಮೂವರಿಗೆ ಅಪರಾಧ ಹಿನ್ನೆಲೆ ಇದೆಯೇ ಎಂಬುದು ಸಹ ತಿಳಿದುಬರಬೇಕಿದೆ.