ಜನಸಾಮಾನ್ಯರ ಅಭಿವೃದ್ಧಿಗೆ ಸರ್ಕಾರ ಮುಂದಾಗುತ್ತಿಲ್ಲ ದರ್ಶನಾಪುರ ಆರೋಪ
ರೈತ ಉತ್ಪಾದಕರ ಸಂಸ್ಥೆ ತರಬೇತಿ ಶಿಬಿರ
yadgiri, ಶಹಾಪುರಃ ದೇಶದ ಕೆಳವರ್ಗದ ಜನರಿಗೆ ದೊರೆಯಬೇಕಾದ ಸೌಲಭ್ಯ ತಲುಪಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಸರ್ಕಾರದ್ದಾಗಿರುತ್ತದೆ. ಆದರೆ ಬಿಜೆಪಿ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆರೋಪಿಸಿದರು.
ತಾಲೂಕಿನ ಪಶು ಆಸ್ಪತ್ರೆಯಲ್ಲಿ ನಡೆದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಶಹಾಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರೈತ ಉತ್ಪಾದಕ ಸಂಸ್ಥೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ಬಡ ಜನರನ್ನು ನಿರ್ಲಕ್ಷಿಸಿ ಬಮಡವಾಳಶಾಹಿ ಪರ ನಿಂತಿದೆ. ದೇಶದ ಪ್ರಧಾನಿಗಳು 25 ಸಾವಿರ ಕೋಟಿ ರೂಪಾಯಿಗಳನ್ನು ಲಾಕ್ ಡೌನ್ ಸಂದರ್ಭದಲ್ಲಿ ಬಂಡವಾಳಶಾಹಿಗಳಿಗೆ ಧಾರೆಯೆರೆದರು. ಇದರಿಂದ ಸಾಮಾನ್ಯ, ರೈತರಿಗೆ ಯಾವುದೇ ಲಾಭವಿಲ್ಲ. ಜನಪ್ರತಿನಿಧಿಗಳಾದವರು ಜನಹಿತ ಕಾಯುವ ಕೆಲಸ ಮಾಡಬೇಕು. ಪ್ರತಿಯೊಂದು ಸಮಾಜದ ಏಳ್ಗೆ ಮುಖ್ಯವಿದೆ. ಒಂದು ಸಮುದಾಯವನ್ನು ಪ್ರತಿನಿಧಿಸಿರುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾಲದಲ್ಲಿ ಸತ್ತ ಕುರಿಗಳಿಗೆ 5000 ರೂಪಾಯಿ ಪರಿಹಾರ ಧನ ನೀಡಲಾಗುತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ರದ್ದು ಮಾಡಿದೆ. ಅಲ್ಲದೆ ಅದನ್ನೇ ಮೌಖಿಕವಾಗಿ ಪರಿಹಾರ ನೀಡಲಾಗುವದಾಗಿ ಪ್ರಸ್ತುತ ಸಿಎಂ ತಿಳಿಸಿದ್ದು, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅಲ್ಲದೆ ರಾಜ್ಯ ಬಿಜೆಪಿ ಸರ್ಕಾರ ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಕ್ಷೇತ್ರಗಳಿಗೆ ತಾರತಮ್ಯ ಎಸಗಿದೆ ಎಂದು ಪುನರುಚ್ಚಿಸಿದರು. ರೈತ ಉತ್ಪಾದಕ ಸಂಸ್ಥೆ ಸಂಯೋಜಕ ತಾಜುದ್ದೀನ್ ಮಾತನಾಡಿ, ಉತ್ಪಾದಕ ಸಂಸ್ಥೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ದರ್ಶನಾಪುರ ಸಂಚಾರಿ ಮಾಂಸ ಮಾರಾಟ ವಾಹನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಸಲಾದಪುರ, ತಾಪಂ ಅಧ್ಯಕ್ಷ ಹಣಮಂತ್ರಾಯ ದೊರೆ, ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕ ಶಾಂತಗೌಡ ನಾಗನಟಗಿ, ಪಶುವೈದ್ಯಾಧಿಕಾರಿ ಷಣ್ಮುಖ ಗೊಂಗಡಿ, ಶಂಕರ್ ವಾಲಿ, ಶರಬಣ್ಣ ರಸ್ತಾಪುರ, ಬಸವರಾಜ ಕರಿಗೇರ, ಮಾಳಪ್ಪ ಸುಂಕದ, ಮಲ್ಲಪ್ಪ ಅಲ್ಲಿಪುರ, ಬಲಭೀಮ ಮಡ್ನಾಳ, ನಿಂಗಣ್ಣ ರಾಜಾಪುರ, ಬಸವರಾಜ ಪೂಜಾರಿ, ಪಶು ಇಲಾಖೆಯ ಸಿಬ್ಬಂದಿ ವರ್ಗ ಸೇರಿದಂತೆ ಕುರಿಗಾರರು ಇತರರಿದ್ದರು.