ಕಾಡಾನೆ ದಾಳಿಗೆ ರೈತ ಬಲಿ : ನಿರ್ಲಕ್ಷಿಸಿದ ಅರಣ್ಯಾಧಿಕಾರಿಗಳ ವಿರುದ್ಧ FIR!
ಕೊಡಗು: ಜನೇವರಿ 22 ರಂದು ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ಸಮೀಪ ರೈತ ಮೋಹನದಾಸ್ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಈ ಭಾಗದಲ್ಲಿ ಕಾಡಾನೆಗಳ ದಾಳಿಯಿಂದಾಗಿ ಸಾವು ನೋವು ಸಂಭವಿಸುತ್ತಲೇ ಇವೆ. ಸಾಕಷ್ಟು ಪ್ರಮಾಣದ ಬೆಳೆನಷ್ಟವೂ ಆಗುತ್ತಿದೆ. ಆದರೆ, ಅರಣ್ಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷವಹಿಸಿದ್ದಾರೆ ಎಂಬುದು ರೈತರ ಆರೋಪವಾಗಿದೆ.
ರೈತ ಮುಖಂಡ ಸೋಮಯ್ಯ ಅವರು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್, ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕೃಷ್ಣರಾಜ್, ಹಾಗೂ ವಲಯ ಅರಣ್ಯ ಅಧಿಕಾರಿ ಗಂಗಾಧರ ವಿರುದ್ಧ ದೂರು ದಾಖಲಿಸಿದ್ದಾರೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ರೈತ ಮೋಹನ್ ದಾಸ್ ಕಾಡಾನೆ ದಾಳಿಗೆ ಬಲಿಯಾಗಿದ್ದಾನೆ. ಹೀಗಾಗಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ.
ಕಾಡಾನೆ ದಾಳಿಗೆ ರೈತ ಬಲಿಯಾಗಿರುವ ಹಿನ್ನೆಲೆ ಅರಣ್ಯ ಅಧಿಕಾರಿಗಳ ವಿರುದ್ಧ ದೂರು ಬಂದಿರುವ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಅರಣ್ಯ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಬಹುತೇಕ ಇದೇ ಮೊದಲ ಬಾರಿಗೆ ಇಂತ ಪ್ರಕರಣ ದಾಖಲಾಗಿದ್ದು ಅರಣ್ಯ ಅಧಿಕಾರಿಗಳ ಮೇಲಿನ ಪ್ರಕರಣ ಭಾರೀ ಕುತೂಹಲ ಕೆರಳಿಸಿದೆ.