ಕಲಬುರಗಿ: ಮರಣ ಮೃದಂಗ ಮುಂದುವರೆಸಿದ ‘ಸಾವಿನ ಸಿಡಿಲು’!
ಕಲಬುರಗಿ: ಕಳೆದ ಒಂದು ವಾರದಿಂದ ಕಲಬುರಗಿ, ಯಾದಗಿರಿ, ಮೈಸೂರು ಜಿಲ್ಲೆಗಳಲ್ಲಿ ಮರಣ ಮೃದಂಗ ಬಾರಿಸಿದ ‘ಸಾವಿನ ಸಿಡಿಲು’ ಹತ್ತಾರು ಜನರ ಜೀವ ಬಲಿ ಪಡೆದಿದೆ. ಕಳೆದ ಎರಡು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ವಿರಾಮ ಹಾಕಿದ್ದ ಸಿಡಿಲು ಇಂದು ಮತ್ತೆ ಮರಣ ಮೃದಂಗ ನುಡಿಸಿದೆ. ಚಿತ್ತಾಪುರ ತಾಲೂಕಿನ ಬೆಣ್ಣೂರು ಗ್ರಾಮದ ಈರಮ್ಮ ಎಂದಿನಂತೆ ಕೃಷಿ ಕಾಯಕಕ್ಕಾಗಿ ಜಮೀನಿಗೆ ತೆರಳಿದ್ದರು. ಆದ್ರೆ, ಏಕಾಏಕಿ ಗುಡುಗು , ಮಿಂಚು ಸಹಿತ ಮಳೆ ಸುರಿಯಲಾರಂಭಿಸಿದೆ. ಮಳೆಯಿಂದ ಬಚಾವಾಗಲು ಮರದ ಕೆಳಗೆ ನಿಲ್ಲಲು ಮುಂದಾಗಿದ್ದಾರೆ. ಆದರೆ, ಸಾವಿನ ಸಿಡಿಲು ಮಾತ್ರ ರೈತ ಮಹಿಳೆ ಈರಮ್ಮ(35) ಅವರನ್ನು ಬಲಿ ಪಡೆದಿದೆ. ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಳೆದ ಒಂದು ವಾರದಿಂದ ನಿರಂತರ ಮಳೆಯ ಜೊತೆಗೆ ಸಿಡಿಲಿನ ಆರ್ಭಟ ಹೆಚ್ಚಿದ್ದು ಸಿಡಿಲಿಗೆ ಬಲಿ ಆದವರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ಹೀಗಾಗಿ, ರೈತಾಪಿ ವರ್ಗ ಒಂದು ಕಡೆ ಮಳೆಯ ಕೃಪೆಯಿಂದ ಖುಷಿಯಾಗಿದೆ. ಮತ್ತೊಂದು ಕಡೆ ‘ಸಾವಿನ ಸಿಡಿಲು’ ರೈತರಲ್ಲಿ ಭಯ ಭೀತಿ ಸೃಷ್ಟಿಸಿದೆ. ರೈತರು ಕೃಷಿ ಕೆಲಸಕ್ಕಾಗಿ ಜಮೀನುಗಳಿಗೆ ತೆರಳುವ ಮುನ್ನ ಒಂದು ಕ್ಷಣ ಯೋಚಿಸುವಂತಾಗಿದೆ.