ಭೀ.ಗುಡಿ ಕೆಬಿಜೆಎನ್‍ಎಲ್ ಕಚೇರಿ ಎದುರು ರೈತರಿಂದ ಧರಣಿ
ಏ. 10 ರ ವರೆಗೂ ಕಾಲುವೆಗೆ ನೀರು ಹರಿಸಲು ಆಗ್ರಹ
ಯಾದಗಿರಿಃ ಏ.10ರವೆಗೆ ಸಮರ್ಪಕವಾಗಿ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದವತಿಯಿಂದ ಜಿಲ್ಲೆಯ ಶಹಾಪುರ ಸಮೀಪದ ಭೀಮರಾಯನ ಗುಡಿ ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಎಸ್.ಎಂ.ಸಾಗರ, ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ ಹಾಗೂ ಕಲಬುರ್ಗಿ ಜಿಲ್ಲೆಯ ಜೇವರ್ಗಿ ಭಾಗದ ರೈತರು ಮುಂಗಾರು ಹಂಗಾಮಿನಲ್ಲಿ ಸಂಭವಿಸಿದ್ದ ಅತಿವೃಷ್ಟಿ ಮಳೆಯಿಂದ ಬೆಳೆ ಹಾನಿ ಸಂಭವಿಸಿದೆ.
ನಂತರ ಹಿಂಗಾರು ಹಂಗಾಮಿನಲ್ಲಿ ರೈತರು ಭರವಸೆಯಿಂದ ಭತ್ತ, ಸೇಂಗಾ, ಹತ್ತಿ, ಸಜ್ಜೆ ಮತ್ತು ಮೆಣಸಿನಕಾಯಿ ಸೇರಿದಂತೆ ಇತ್ಯಾದಿ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಪ್ರಸ್ತುತ ಬೆಳೆ ಕೈಗೆಟಕಲು ಕನಿಷ್ಟ 25 ದಿನಗಳಾದರೂ ನೀರು ಬೇಕು. ಆ ಕಾರಣಕ್ಕೆ ಕನಿಷ್ಟ ಏ.10 ರವರೆಗೆ ಕಾಲುವೆಗೆ ನೀರು ಹರಿಸಿದಲ್ಲಿ ಸೇಂಗಾ, ಹತ್ತಿ, ಸಜ್ಜೆ ಮೆಣಸಿಕಾಯಿ ಬೆಳೆಗಳು ರೈತರ ಕೈಗೆಟುಕಲಿವೆ. ರೈತರು ಮಾಡಿದ್ದ ಸಾಲ ಸೂಲವಾದರೂ ಅಲ್ಪಮಟ್ಟಿಗೆ ನೀಗಲಿದೆ.
ಕಾರಣ ಅಧಿಕಾರಿಗಳು ಸಮಗ್ರ ಪ್ರಸ್ತುತ ಸ್ಥಿತಿ ಅರಿತು ಕಾಲುವೆಗೆ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರೈತರು ಕಳೆದ ನಾಲ್ಕು ವರ್ಷದಿಂದ ಬರಗಾಲದಿಂದ ತತ್ತರಿಸಿದ್ದಾರೆ. ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿರುವ ರೈತರ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ರೈತರ ಪರ ಚಿಂತನೆ ಮಾಡುತ್ತಿಲ್ಲ. ಖಾಲಿ ಜಾಹಿರಾತು, ಅವರವರ ಪಕ್ಷದ ಸಮಾವೇಶ ಕಾರ್ಯಕ್ರಮಗಳಲ್ಲಿ ರೈತರ ಬಗ್ಗೆ ಕಾಳಜಿವಹಿಸುವ ಮಾತನಾಡಿ ಪೊಳ್ಳು ಭರವಸೆ ನೀಡಿ ಮರೆತು ಬಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಜನಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕರ ಮಾತನಾಡಿ, ಅವೈಜ್ಞಾನಿಕ ವಾರಬಂದಿಯಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪದೆ ಸಾಕಷ್ಟು ಬೆಳೆಗಳು ಒಣಗಿ ನಿಂತಿವೆ. ಕೆಳಭಾಗದ ರೈತರ ಬೆಳೆಗಳಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು. ಕಳೆದ ದಶಕಗಳಿಂದ ಅಧಿಕಾರಿಗಳಿಗೆ ಈ ಕುರಿತು ಗಮನ ಸೆಳೆದರು ಯಾವೊಬ್ಬ ಅಧಿಕಾರಿ ಅಥವಾ ಜನಪ್ರತಿನಿಧಿ ಕೆಳಭಾಗದ ರೈತರ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ ಎಂದು ದೂರಿದರು. ಅಲ್ಲದೆ ಕಾಲುವೆ ನವೀಕರಣ ನೆಪದಲ್ಲಿ ಕೋಟ್ಯಂತರ ರೂ.ಅವ್ಯವಹಾರ ನಡೆದಿದ್ದು ಸೂಕ್ತ ತನಿಖೆಕೈಗೊಳ್ಳಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಮುಖಂಡರಾದ ಜೈಲಾಲ ತೋಟದಮನಿ, ದಾವಲ್‍ಸಾಬ ನದಾಫ್, ಜೈಲಾಲ ತೋಟದಮನಿ, ಬಸವರಾಜ ಭಜಂತ್ರಿ, ಮಲ್ಲಯ್ಯ ಪೋಲಂಪಲ್ಲಿ, ರಾಮಣ್ಣಗೌಡ ಗೂಗಲ್, ರಾಮಯ್ಯ ಬೋವಿ, ಧರ್ಮಣ್ಣ ದೊರಿ, ಮಲ್ಲಣ್ಣಗೌಡ ಪಾಟೀಲ್, ಮಹಿಬೂಬ ವನದುರ್ಗಾ, ಭೀಮರಾಯ ದೊರಿ, ದರಿಯಾಪುರ ಮಲ್ಲು ಸೇರಿದಂತೆ ಇತರರು ಭಾಗವಹಿಸಿದ್ದರು.