ವೈದ್ಯರಿಗೆ ಬ್ಲಾಕ್ ಮೇಲ್ ಮಾಡಿದ ನಾಲ್ವರು ಪತ್ರಕರ್ತರು ಅಂದರ್
ವೈದ್ಯರಿಗೆ ಬ್ಲಾಕ್ ಮೇಲ್ ಮಾಡಿದ ನಾಲ್ವರು ಪತ್ರಕರ್ತರು ಅಂದರ್
ವಿಜಯಪುರ ಗುಮ್ಮಟ ನಗರಿ ವಿಜಯಪುರದ ಖ್ಯಾತ ವೈದ್ಯನಿಗೆ ನಾಲ್ವರು ಪತ್ರಕರ್ತರು ಸೇರಿ ಬ್ಲಾಕಮೇಲ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.
ಸುವರ್ಣ ನ್ಯೂಸ್ ಚಾನೆಲ್ ವಿಜಯಪುರ ಜಿಲ್ಲೆಯ ವರದಿಗಾರ ಹಾಗೂ ಅವರ ಕ್ಯಾಮರಾಮನ್ ಸೇರಿದಂತೆ ನಾಲ್ವರ ಬಂಧನ ಮಾಡಲಾಗಿದೆ ಎಂದು ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.
ಸುವರ್ಣ ನ್ಯೂಸ್ ವಿಜಯಪುರ ಜಿಲ್ಲಾ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮರಾಮನ್ ಸಂಗಮೇಶ ಕುಂಬಾರ, ಸಂಗ್ರಾಮ ವಾರ ಪತ್ರಿಕೆ (ಟ್ಯಾಬ್ಲೈಡ್) ಪತ್ರಿಕೆ ವರದಿಗಾರರಾದ ರವಿ ಬಿಸ್ನಾಳ ಹಾಗೂ ಬಸವರಾಜ ಲಗಳಿ ಪೊಲೀಸರಿಂದ ಬಂಧನಕ್ಕೊಳಗಾದ ಪತ್ರಕರ್ತರು.
ಸೋನೋ ಗ್ರಫಿ ಕ್ಲಿನಿಕ್ ನಲ್ಲಿ ನೀವು ಅಕ್ರಮ ಲಿಂಗ ಪತ್ತೆ ಮಾಡುತ್ತೀರಿ ಅದನ್ನು ಪ್ರಸಾರ ಮಾಡಲಾಗುತ್ತದೆ. ಆ ಮೂಲಕ ನಿಮ್ಮ ಮಾನ ಹರಾಜು ಹಾಕಬಾರದೆಂದರೆ ನಮಗೆ ೫೦ ಲಕ್ಷ ನೀಡಬೇಕು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಕೊನೆಗೆ ಹತ್ತು ಲಕ್ಷಕ್ಕೆ ಒಪ್ಪಿ, ವೈದ್ಯನಿಂದ ಹಣ ಪಡೆಯುವಾಗ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧನ ಮಾಡಿದ್ದಾರೆ.
ಡಾ. ಕಿರಣ ಓಸ್ವಾಲ್ ಎಂಬ ವೈದ್ಯರಿಂದ ಹಣ ಪಡೆಯುವಾಗ ಬಂಧನ ಮಾಡಲಾಗಿದೆ. ಈ ಕುರಿತು ವೈದ್ಯರು ನಮಗೆ ಮೊದಲೇಮಾಹಿತಿ ನೀಡಿದ್ದರಿಂದ ಪತ್ರಕರ್ತರನ್ನು ಬಂಧಿಸಲು ಸುಲಭವಾಯಿತು ಎಂದು ಪೊಲೀಸರು ತಿಳಿಸಿದರು.
ಪತ್ರಕರ್ತರ ಬೆದರಿಕೆ ಹಾಗೂ ಹಣದ ಬೇಡಿಕೆ ಕುರಿತು
ವಿಜಯಪುರ ನಗರದ ಎಪಿಎಂಸಿ ಠಾಣೆಯಲ್ಲಿ ವೈದ್ಯ ಡಾ. ಕಿರಣ ಓಸ್ವಾಲ್ ಅವರು ದೂರು ದಾಖಲಿಸಿದ್ದರು.
ಹೀಗಾಗಿ ಕಳೆದ ರಾತ್ರಿಯೇ ನಾಲ್ವರು ಆರೋಪಗಳನ್ನು ಬಂಧಿಸಿ, ವಿಜಯಪುರದ ಕೇಂದ್ರ ಕಾರಾಗೃಹ (ದರ್ಗಾ)ಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಇದರ ಬೆನ್ನಲ್ಲೇ ಸುವರ್ಣ ನ್ಯೂಸ್ ವಿಜಯಪುರ ಜಿಲ್ಲಾ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮರಾಮನ್ ಸಂಗಮೇಶ ಕುಂಬಾರ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಸುವರ್ಣ ನ್ಯೂಸ್ ವರದಿ ಬಿತ್ತರಿಸಿದೆ.
ಮಲ್ಲಮ್ಮ ಬಿರಾದಾರ ಎಂಬ ಮಹಿಳೆಯನ್ನು ಲಿಂಗ ಪತ್ತೆ ಹೆಸರಿನಲ್ಲಿ ಕರೆದುಕೊಂಡು ಹೋಗಿ ಸ್ಟಿಂಗ್ ಮಾಡಿ, ೫೦ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
ವೈದ್ಯಡಾ. ಕಿರಣ ಓಸ್ವಾಲ್ ಅವರು ತಕ್ಷಣವೇ ಡಿಎಸ್ಪಿ ಅಶೋಕ್ ನೇತೃತ್ವದ ತಂಡಕ್ಕೆ ಮಾಹಿತಿ ನೀಡಿದ ಬಳಿಕ ಹದಿನೈದು ಲಕ್ಷ ನೀಡುವುದಾಗಿ ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ಬಲೆಗೆ ಕೆಡವಿದ್ದಾರೆ.
ಘಟನೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಮಲ್ಲಮ್ಮ ಬಿರಾದಾರ ಮೇಲೂ ಪ್ರಕರಣ ದಾಖಲಾಗಿದ್ದು, ಆಕೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ