ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ದರ್ಶನಾಪುರ ಚಾಲನೆ
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸರ್ವರ ಸಹಭಾಗಿತ್ವ ಅಗತ್ಯ
ಯಾದಗಿರಿ,ಶಹಾಪುರಃ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಬಡವರಿಗೆ ಕೈಗೆಟುಕದ ರೋಗಗಳ ತಪಾಸಣೆ ನಡೆಸಿ ಆಯಾ ರೋಗಕ್ಕೆ ಬೇಕಾದ ಸೂಕ್ತ ಶಸ್ತ್ರ ಚಿಕಿತ್ಸೆಯನ್ನು ಕೊಡಿಸುವಂತ ಮಹತ್ವದ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಇಲ್ಲಿನ ಸ್ವಕುಳ ಸಾಳಿ ಸಮಾಜ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಮಂಡಳಿ ಕಾರ್ಯ ಶ್ಲಾಘನೀಯ ಎಂದು ಶಿಕ್ಷಕಿ ಸುರೇಖಾ ಏಕಬೋಟೆ ಹೇಳಿದರು.
ಭಗವಾನ್ ಶ್ರೀ ಜೀವ್ಹೇಶ್ವರ ಜಯಂತ್ಯುತ್ಸವ ಅಂಗವಾಗಿ ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ಇಲ್ಲಿನ ಸ್ವಕುಳ ಸಾಳಿ ಸಮಾಜ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸರ್ವರ ಸಹಭಾಗಿತ್ವ ಅಗತ್ಯ. ಆ ನಿಟ್ಟಿನಲ್ಲಿ ಸ್ವಕುಳ ಸಾಳಿ ಸಮಾಜ ಕೈಜೋಡಿಸಿರುವುದು ಸಂತಸದ ವಿಚಾರ. ಆರೋಗ್ಯವೇ ಭಾಗ್ಯ ಎನ್ನಲಾಗುತ್ತಿದೆ. ಮೊದಲು ಆರೋಗ್ಯ ಚನ್ನಾಗಿ ಕಾಪಾಡಿಕೊಳ್ಳಬೇಕು. ಆರೋಗ್ಯ ಸರಿ ಇದ್ದಲ್ಲಿ ಮಾತ್ರ ಏನಾದರೂ ಸಾಧಿಸಲು ಸಾದ್ಯವಿದೆ.
ಪ್ರಸ್ತುತ ಕಾಲದಲ್ಲಿ ಆರೋಗ್ಯ ಸುಧಾರಿಸಿಕೊಳ್ಳಲು ದುಬಾರಿ ಹಣ ಖರ್ಚು ಮಾಡಬೇಕಿದೆ. ಬಡವರು ದುಬಾರಿ ವೆಚ್ಚ ಭರಿಸಿ ಆರೋಗ್ಯ ಸುಧಾರಿಸಿಕೊಳ್ಳುವ ಸ್ಥಿತಿಯಲ್ಲಿ ಇರುವದಿಲ್ಲ. ಇಂತಹ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡು ಆರೋಗ್ಯ ಸರಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂತಹ ಮಹತ್ಕಾರ್ಯದಲ್ಲಿ ಭಾಗವಹಿಸಿದ ವೈದ್ಯರ ಸೇವೆ ನಿಜಕ್ಕೂ ಮೆಚ್ಚುವಂತಹದ್ದು, ನಾವೆಲ್ಲ ಅವರ ಜೊತೆಗಿದ್ದು ಸಹಕರಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಅಮರೇಶಗೌಡ ದರ್ಶನಾಪುರ ಉದ್ಘಾಟಿಸಿದರು. ಸಪ್ತಗಿರಿ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ.ಎ.ಹಣಮಂತ್ರರಾಯ, ನರರೋಗ ತಜ್ಞ ಡಾ.ಗೌರವಸಿಂಗ್, ಡಾ.ಶಿವಂ, ಡಾ.ದಾವಲಸಾಬ ಸೇರಿದಂತೆ ಸ್ಥಳೀಯರಾದ ಮಕ್ಕಳ ತಜ್ಞ ಡಾ.ವೆಂಕಟೇಶ ಟೊಣಪೆ, ಡಾ.ಜ್ಯೋತಿ ಧೋತ್ರೆ ಉಪಸ್ಥಿತರಿದ್ದರು.
ಸಮಾಜದ ಅಧ್ಯಕ್ಷ ರಾಜಕುಮಾರ ಚಿಲ್ಲಾಳ ಅಧ್ಯಕ್ಷತೆವಹಿಸಿದ್ದರು. ಮುಖಂಡರಾದ ಮಲ್ಲಿಕಾರ್ಜುನ ಚಿಲ್ಲಾಳ, ಮಲ್ಲಯ್ಯ ಫಿರಂಗಿ, ಜನಾರ್ಧನ ಮಾನು, ನಾಗೇಂದ್ರ ದಂಡು, ಮಂಜುನಾಥ ಪಾಣಿಬಾತೆ, ಪ್ರಶಾಂತ ಗೋಗಿ, ಅನಿಲಕುಮಾರ, ಮಾರುತಿ ಚಿಲ್ಲಾಳ ಸೇರಿದಂತೆ ಇತರರಿದ್ದರು. ಪ್ರವೀಣ ಫಿರಂಗಿ ಸ್ವಾಗತಿಸಿದರು. ಲಕ್ಷ್ಮೀ ಫಿರಂಗಿ ನಿರೂಪಿಸಿ ವಂದಿಸಿದರು. ತಪಾಸಣೆಗೆ ಒಳಪಟ್ಟ ರೋಗಿಗಳಿಗೆ ಉಚಿತ ಮೆಡಿಸಿನ್ ನೀಡುವ ವ್ಯವಸ್ಥೆಯು ಶಿಬಿರದಲ್ಲಿತ್ತು. ಇದರಿಂದಾಗಿ ಸಾಕಷ್ಟು ಜನರು ತಪಾಸಣೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಂಡರು.
400 ರೋಗಿಗಳ ತಪಾಸಣೆ, 21 ಜನರಿಗೆ ಶಸ್ತ್ರ ಚಿಕಿತ್ಸೆ ಆಯ್ಕೆ
ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಒಟ್ಟು 400 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಇದರಲ್ಲಿ ವಿವಿಧ ರೋಗಿಗಳ ಅರ್ಹ ಒಟ್ಟು 21 ಜನರಿಗೆ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಮಂಗಳವಾರ ಸಂಜೆ ಕರೆದೊಯ್ಯಲು ನಿರ್ಧರಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಇಲ್ಲಿನ ಜೀವೇಶ್ವರ ಕಲ್ಯಾಣ ಮಂಟಪದ ಮುಂದೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡ ರೋಗಿಗಳನ್ನು ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.